ಫೆ.10ರಂದು ವಿಧಾನಸೌಧ ಚಲೋ, ಅನಿರ್ದಿಷ್ಟಾವಧಿ ಧರಣಿ: ಕೃಷಿ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ಪುಟ್ಟಮಾದು ಮಾಹಿತಿ

Agricultural Laborers Union press conference Mandya
Published on

ಮಂಡ್ಯ: ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ, ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ರೈತ, ಕೃಷಿ ಕೂಲಿಕಾರರ ಭೂಮಿ ಹಕ್ಕಿಗಾಗಿ, ಬಲವಂತದ ಭೂ ಸ್ವಾಧೀನ ವಿರೋಧಿಸಿ ಫೆ.10ರಂದು ವಿಧಾನಸೌಧ ಚಲೋ, ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಕೃಷಿ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ಎಂ.ಪುಟ್ಟಮಾದು ತಿಳಿಸಿದರು.

ಕೇಂದ್ರ ಸರ್ಕಾರ ಅತಿದೊಡ್ಡ ಕಾರ್ಪೊರೇಟ್ ಪರವಾಗಿದೆ. ಅದೇ ರೀತಿ ಕೇಂದ್ರದ ಅಣತಿಯಂತೆ ರಾಜ್ಯ ಸರ್ಕಾರವೂ ಕಾರ್ಪೊರೇಟ್ ಲೂಟಿಗೆ ಅವಕಾಶ ಮಾಡಿಕೊಡುತ್ತಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ಕೇಂದ್ರದ 3 ರೈತ ವಿರೋಧಿ ಕಾಯ್ದೆಗಳನ್ನು ತಿರಸ್ಕರಿಸುತ್ತೇವೆಂದ ಕಾಂಗ್ರೆಸ್ ಸರ್ಕಾರ ರಚನೆ ಮಾಡಿ, ರೈತ ವಿರೋಧಿ ಧೋರಣೆಗಳನ್ನು ತಾಳಿ ಮನೆ, ನಿವೇಶನ ರಹಿತರ, ಬಗರ್ ಹುಕುಂ- ಅರಣ್ಯ ಸಾಗುವಳಿ ರೈತರ ಭೂಮಿ ಹಕ್ಕಿಗೆ ಧಕ್ಕೆಯುಂಟು ಮಾಡುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ರಾಜ್ಯಾದ್ಯಂತ ಲಕ್ಷಾಂತರ ಸಂಖ್ಯೆಯಲ್ಲಿ ಮನೆ-ನಿವೇಶನ, ಸರ್ಕಾರಿ ಭೂಮಿಗಳಲ್ಲಿ ಕಟ್ಟಿಕೊಂಡ ಮನೆಗಳನ್ನು ಸಕ್ರಮಗೊಳಿಸಲು ಕೋರಿ, ಬಗರ್ ಹುಕುಂ ಸಾಗುವಳಿ ಸಕ್ರಮಕ್ಕೆ ಅರ್ಜಿ ಸಲ್ಲಿಸಿದ್ದು, ಇವುಗಳನ್ನು ಸರ್ಕಾರ ತಿರಸ್ಕರಿಸುತ್ತಿರುವುದಲ್ಲದೇ, ರೈತರ ಭೂಮಿ ಕಸಿಯುವ ಕೆಲಸಕ್ಕೆ ಮುಂದಾಗಿದೆ. ಈ ಹೋರಾಟಕ್ಕೆ ರಾಜ್ಯಾದ್ಯಂತ ಕರೆ ನೀಡಲಾಗಿದ್ದು, ಜಿಲ್ಲೆಯಿಂದ 2500 ಜನರು ಪಾಲ್ಗೊಳ್ಳಲಿದ್ದೇವೆ ಎಂದು ಮಾಹಿತಿ ನೀಡಿದರು.

ಸಂಘದ ಜಿಲ್ಲಾ ಸಂಚಾಲಕ ಎನ್.ಎಲ್.ಭರತ್‌ರಾಜ್, ಪ್ರಧಾನ ಕಾರ್ಯದರ್ಶಿ ಬಿ.ಹನುಮೇಶ್, ಜಿಲ್ಲಾ ಸಹ ಸಂಚಾಲಕ ಸಿದ್ದೇಗೌಡ.ಟಿ, ಎನ್.ಲಿಂಗರಾಜುಮೂರ್ತಿ, ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ಎಂ.ಬಿ.ಶಿವಮಲ್ಲಯ್ಯ, ಉಪಾಧ್ಯಕ್ಷ ಆರ್.ರಾಜು, ಸಹಕಾರ್ಯದರ್ಶಿ ಟಿ.ಪಿ.ಅರುಣ್‌ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net