ಬರ ಪರಿಹಾರ ಬಿಡುಗಡೆಗೆ ಒತ್ತಾಯ: ನಗರದಲ್ಲಿ ಕೃಷಿ ಕೂಲಿಕಾರರ ಪ್ರತಿಭಟನೆ

Agricultural laborers protest mandya
Published on

ಮಂಡ್ಯ: ಬರ ಪರಿಹಾರ ಹಾಗೂ ಉದ್ಯೋಗ ಖಾತ್ರಿ ಕೂಲಿ ಹಣ ಬಿಡುಗಡೆಗೆ ಒತ್ತಾಯಿಸಿ ಗುರುವಾರ ಕೃಷಿ ಕೂಲಿಕಾರರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಆಶ್ರಯದಲ್ಲಿ ಕೃಷಿ ಕೂಲಿಕಾರರು ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಸಂಸದರಿಗೆ ಮನವಿ ಸಲ್ಲಿಸಿದರು. ಅಧಿಕಾರವಧಿ ಮುಕ್ತಾಯದ ಅಂಚಿನಲ್ಲಿರುವ ಸಂಸದೆ ಜಿಲ್ಲೆಯನ್ನು ಅಭಿವೃದ್ಧಿ ಪಥಕ್ಕೆ ಕೊಂಡೊಯ್ಯಬಹುದಾಗಿತ್ತು. ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಕೊಡಿಸಿ ಕೊಡಬಹುದಾಗಿತ್ತು. ಕೃಷಿ ಕೂಲಿಕಾರರಿಗೆ 100 ದಿನದ ಕೆಲಸವನ್ನು ಉದ್ಯೋಗ ಖಾತ್ರಿಯಡಿಯಲ್ಲಿ ದೊರಕಿಸಿಕೊಡಬಹುದಿತ್ತು. ಕಾರ್ಮಿಕ ಕಾನೂನುಗಳನ್ನು ಮಾಲೀಕರ ಪರವಾಗಿ ಮಾರ್ಪಾಡು ಮಾಡಿದ್ದನ್ನು ವಿರೋಧಿಸಲಿಲ್ಲ. ಕೋವಿಡ್ ಸಂದರ್ಭದಲ್ಲಿ ಕಣ್ಣಿಗೆ ಕಾಣದೆ ಮಾಯವಾಗಿದ್ದೀರಿ ಎಂದು ಅಕ್ರೋಶ ವ್ಯಕ್ತಪಡಿಸಿದರು.

ಒಂದು ವರ್ಷದಿಂದ ಬರಗಾಲ ಪರಿಸ್ಥಿತಿಯಿಂದ ಕೃಷಿ ಕೂಲಿಕಾರರು ತತ್ತರಿಸಿ ಹೋಗಿದ್ದಾರೆ. ಕೇಂದ್ರ ಸರ್ಕಾರದಿಂದ ಬರ ಪರಿಹಾರ ಬಿಡುಗಡೆ ಮಾಡಿಸುವಲ್ಲಿ ವಿಫಲರಾಗಿದ್ದೀರಿ. ಕಾವೇರಿ ನೀರಿನ ವಿಷಯದಲ್ಲಿ ಶಾಶ್ವತ ಪರಿಹಾರ ಸಂಪೂರ್ಣ ವೈಫಲ್ಯತೆ ತೋರಿಸಿದ್ದಾರೆ. ವಿದ್ಯುತ್ ಖಾಸಗೀಕರಣದ ವಿರುದ್ಧ ಬಾಯಿ ಬಿಡಲು ಹಿಂಜರಿಕೆ ಪ್ರದರ್ಶಿಸಿದ್ದಾರೆ. ಸಂಸದರ ನಿಧಿಯನ್ನಷ್ಟೆ ಬಳಸಿ ಅದನ್ನೇ ಅಭಿವೃದ್ಧಿ ಭಾವಿಸಿದ ಸಂಸದೆಗೆ ಕೃಷಿ ಕೂಲಿಕಾರರು ಮತ್ತು ರೈತ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಲು ಮನವಿ ಮಾಡಿದಾಗ ಸಭೆ ನಡೆಸುವುದಾಗಿ ಹೇಳಿ ಫಲಾಯನ ಮಾಡಿದ್ದರು. ಗ್ಯಾಸ್, ಪೆಟ್ರೋಲ್ ಇತರೆ ದಿನನಿತ್ಯದ ವಸ್ತುಗಳ ಬೆಲೆ ಗಗನ ಮುಟ್ಟಿದರೂ ಕಣ್ಣಿಗೆ ಕಾಣದಂತೆ ವರ್ತನೆ ಮಾಡಿದ್ದಾರೆ ಈಗಿರುವಾಗ ಸಂಸದೆ ಮಾಡಿರುವ ಸಾಧನೆ ಏನು ಎಂದು ಪ್ರಶ್ನಿಸಿದರು.

ಉದ್ಯೋಗ ಖಾತ್ರಿಯಲ್ಲಿ ಮೂರು ತಿಂಗಳ ಕೂಲಿ ಹಣವನ್ನು ಬಿಡುಗಡೆ ಮಾಡಲು ಬಾಯಿ ಬಿಡದಿರುವುದು ಸಂಸದರ ಕೂಲಿಕಾರರ ಮತ್ತು ಬಡ ರೈತರ ವಿರೋದಿ ಧೋರಣೆಯಾಗಿದೆ. ಈಗಲಾದರೂ ಬಾಕಿ ಕೂಲಿ ಹಣವನ್ನು ಬಿಡುಗಡೆ ಮಾಡಿಸಿ ಕೃಷಿ ಆಧಾರಿತ ಕೈಗಾರಿಕೆಗಳನ್ನು ತರುವ ಬಗ್ಗೆ ನಿಲುವು ಸ್ಪಷ್ಟಪಡಿಸಿ, ಇಲ್ಲದಿದ್ದರೆ ಬಹಿರಂಗ ಚರ್ಚೆ ಮೂಲಕ ತಮ್ಮ ಸಾಧನೆಯನ್ನು ತಿಳಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘದ ಬಿ.ಹನುಮೇಶ್, ಶಿವಮಲ್ಲಯ್ಯ, ಟಿ.ಎಲ್.ಕೃಷ್ಣೇಗೌಡ, ಸಿ.ಕುಮಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net