

ಮಂಡ್ಯ: ಬರ ಪರಿಹಾರ ಬಿಡುಗಡೆ ಮಾಡಿ, ಉದ್ಯೋಗ ಖಾತ್ರಿ ಕೆಲಸ ನೀಡುವಂತೆ ಒತ್ತಾಯಿಸಿ ಕೃಷಿ ಕೂಲಿಕಾರರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಆಶ್ರಯದಲ್ಲಿ ಜಯಚಾಮರಾಜೇಂದ್ರ ಒಡೆಯರ್ ವೃತ್ತದಿಂದ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಬರ ಪರಿಸ್ಥಿತಿಯಲ್ಲಿ ಸಂಕಷ್ಟದ ಸಮಯ ಎದುರಾಗಿದ್ದು, ತುರ್ತಾಗಿ ಬರ ಪರಿಹಾರ ಬಿಡುಗಡೆ ಮಾಡಬೇಕು. ಬರದ ಸನ್ನಿವೇಶದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿ ಸೃಷ್ಟಿಸಿ ಕೃಷಿ ಕೂಲಿಕಾರರಿಗೆ ಕೆಲಸ ನೀಡಬೇಕು. ಕೆಲಸದ ದಿನವನ್ನ ನೂರು ದಿನಕ್ಕೆ ಬದಲಾಗಿ 200 ದಿನಕ್ಕೆ ಹೆಚ್ಚಿಸಬೇಕು. ಕೂಲಿ ಹಣವನ್ನು 316 ರೂಗೆ 100 ರೂ ಸೇರಿಸಿ ನೀಡಬೇಕು. ಸರ್ಕಾರ ನಿಗದಿಪಡಿಸಿರುವ ಕನಿಷ್ಟ ಕೂಲಿ 484 ರೂ ಸಂದಾಯ ಮಾಡಬೇಕು. ನೂರು ದಿನ ಕೆಲಸ ಮಾಡಿರುವ ಕೂಲಿಕಾರರಿಗೆ ಹೆಚ್ಚುವರಿ 50 ದಿನ ಕೆಲಸ ನೀಡಬೇಕು. ಪ್ರತಿ 15 ದಿನಕ್ಕೊಮ್ಮೆ ಕೂಲಿ ಪಾವತಿಸಬೇಕು. ಉದ್ಯೋಗ ಖಾತ್ರಿಯಲ್ಲಿ ಗುತ್ತಿಗೆದಾರರು, ಯಂತ್ರದ ಅವಳಿ ತಪ್ಪಿಸಬೇಕು. ಯೋಜನೆಯಲ್ಲಿ ಪ್ರತಿದಿನ ಎರಡು ಬಾರಿ ಹೆಬ್ಬೆಟ್ಟು ನೀಡಿ ಫೋಟೋ ತೆಗೆಯುವ ನೀತಿ ಹಿಂಪಡೆಯಬೇಕು. ನಗರ ಪ್ರದೇಶಕ್ಕೂ ಉದ್ಯೋಗ ಖಾತ್ರಿ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.
ಬರಗಾಲ ಪರಿಸ್ಥಿತಿ ಇರುವುದರಿಂದ ಬ್ಯಾಂಕ್, ಮೈಕ್ರೋ ಫೈನಾನ್ಸ್‌ಗಳಲ್ಲಿ ಕೂಲಿಕಾರರು ಪಡೆದಿರುವ ಸಾಲ ವಸೂಲಾತಿಯನ್ನು ನಿಲ್ಲಿಸಬೇಕು. ಮೈಕ್ರೋ ಫೈನಾನ್ಸ್ ಸಾಲ ನಿಷೇಧಿಸಿ ಉಪಕಸಬು ಕೈಗೊಳ್ಳಲು ಬ್ಯಾಂಕ್‌ನಿಂದ 2 ಲಕ್ಷ ರೂವರೆಗೆ ಸಾಲ ನೀಡಬೇಕು. ವಲಸೆ ಕಾರ್ಮಿಕರ ಕಾಯ್ದೆ ಕಟ್ಟುನಿಟ್ಟಾಗಿ ಜಾರಿ ಮಾಡಿ ಜಿಲ್ಲೆಯಲ್ಲಿ ಕಬ್ಬು ಕಡಿಯಲು ಬಂದಿರುವ ವಲಸೆ ಕಾರ್ಮಿಕರಿಗೆ ಮೂಲಸೌಕರ್ಯ ಕಲ್ಪಿಸಬೇಕು. ಅವರ ಮಕ್ಕಳಿಗೆ ಸಮರ್ಪಕ ಶಿಕ್ಷಣ ನೀಡಬೇಕು. ಜಿಲ್ಲೆಯಲ್ಲಿ ಕೆಟ್ಟು ನಿಂತಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ದುರಸ್ತಿ ಮಾಡಬೇಕು ಎಂದು ಆಗ್ರಹಿಸಿದರು.
ರೈತರಿಗೆ ಪ್ರತಿ ಎಕರೆಗೆ 25 ಸಾವಿರ ರೂ ಬರ ಪರಿಹಾರ ನೀಡಬೇಕು. ಸರ್ಕಾರಿ ಭೂಮಿಯಲ್ಲಿ ವಾಸಿಸುತ್ತಿರುವ ಬಡ ಜನತೆಗೆ ಹಕ್ಕು ಪತ್ರ ನೀಡಬೇಕು. ನಿವೇಶನ ರಹಿತರಿಗೆ ನಿವೇಶನ ಸೌಲಭ್ಯ ಕಲ್ಪಿಸಿ ವಸತಿ ನಿರ್ಮಿಸಿ ಕೊಡಬೇಕು. ಜಿಲ್ಲೆಯ ಎಲ್ಲ ಗ್ರಾಮದಲ್ಲಿಯೂ ಸ್ಮಶಾನ ಸೌಲಭ್ಯ ಕಲ್ಪಿಸಬೇಕು. ಮಳವಳ್ಳಿ ತಾಲೂಕು ನರಿಪುರದಲ್ಲಿ ಪಡಿತರ ವಿತರಣೆಗೆ ಉಪ ಕೇಂದ್ರ ತೆರೆಯಬೇಕು ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಮನವಿ ಮಾಡಿದರುಲ.
ಪ್ರತಿಭಟನೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಎನ್.ಪುಟ್ಟಮಾದು, ಜಿ.ಎನ್.ನಾಗರಾಜು, ಬಿ.ಹನುಮೇಶ್, ಬಿ.ಎಂ.ಶಿವಮಲ್ಲಯ್ಯ, ಅನಿತಾ, ಬಿ.ಎ.ಮಧುಕುಮಾರ್, ಅಮಾಸಯ್ಯ, ಆರ್.ರಾಜು, ಜಿ.ಎಚ್.ಗಿರೀಶ್, ರಾಮಣ್ಣ, ಟಿ.ಎಚ್.ಆನಂದ, ಮಹಾದೇವ, ಲಕ್ಷ್ಮೀ, ಎಚ್.ಎಸ್.ಮಂಜುಳಾ ಇತರರಿದ್ದರು.