

ಮಂಡ್ಯ: ಕೇಂದ್ರ ಸರ್ಕಾರದ ಕಾರ್ಮಿಕ, ರೈತ ವಿರೋಧಿ ನೀತಿಗಳ ವಿರುದ್ಧ ಆ.9ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ಎಂ.ಪುಟ್ಟಮಾದು ತಿಳಿಸಿದರು.
ಸಂವಿಧಾನವನ್ನು ರಕ್ಷಣೆ ಮಾಡಿ ಪ್ರಜಾಪ್ರಭುತ್ವ ಉಳಿಸಿ ಜನರ ಐಕ್ಯತೆ ಗಟ್ಟಿಗೊಳಿಸುವ ಹಿನ್ನೆಲೆಯಲ್ಲಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಎರಡು ಹಂತದ ಹೋರಾಟ ಹಮ್ಮಿಕೊಳ್ಳಲಾಗಿದೆ. 9ರಂದು ಡಿಸಿ ಕಚೇರಿ ಎದುರು ಹಾಗೂ ಆ.14ರ ಸಂಜೆ 6 ಗಂಟೆಯಿಂದ 15ರಂದು ಬೆಳಗಿನವರೆಗೆ ಶಿವಪುರ ಸತ್ಯಾಗ್ರಹ ಸೌಧದ ಬಳಿ ಅಹೋರಾತ್ರಿ ಸ್ವಾತಂತ್ರೋತ್ಸವ ಆಚರಿಸಲಾಗುವುದು. ಇದರ ಅಂಗವಾಗಿ ಜಿಲ್ಲಾದ್ಯಂತ ಪ್ರಚಾರಾಂದೋಲನ ಸಭೆಗಳನ್ನು ನಡೆಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕೋಮುವಾದಿ ಹಾಗೂ ಕಾರ್ಪೊರೇಟ್ ಉದ್ದಿಮೆಗಳ ಪರವಾಗಿ ವರ್ತಿಸುತ್ತಿರುವ ಕೇಂದ್ರ ಸರ್ಕಾರ ಕೃಷಿ ಕೂಲಿಕಾರರ ಅವನತಿಗೆ ಕಾರಣವಾಗಿದೆ. ದುಡಿಯುವ ಜನರಿಗೆ ಆಘಾತವನ್ನು ತಂದೊಡ್ಡಿದೆ. ಇಂತಹ ಸರ್ಕಾರವನ್ನು ಬದಲಿಸುವುದು ಇಂದಿನ ತುರ್ತು ಅಗತ್ಯವಾಗಿದ್ದು, ಇಲ್ಲದಿದ್ದರೆ ದುಡಿಯುವ ವರ್ಗಕ್ಕೆ ಭವಿಷ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ಪ್ರಾಂತ ರೈತ ಸಂಘದ ಮಳವಳ್ಳಿ ತಾಲೂಕು ಅಧ್ಯಕ್ಷ ಎನ್.ಎಲ್.ಭರತರಾಜ್, ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಮುಖಂಡರಾದ ಶಿವಮಲ್ಲು, ಅರುಣ್‌ಕುಮಾರ್, ಚಂದ್ರಶೇಖರ್, ಮಂಜುಳಾ, ರಾಮಯ್ಯ ಇದ್ದರು.