2024ರ ಮುನ್ನೋಟ: ಕೃಷಿ ಬಂಡಿ ಅವಕಾಶಗಳ ದಂಡಿ

Krushi
Published on

ಬೆಳೆ ಬೆಳೆಯುವುದಕ್ಕೆ ಮಾತ್ರ ಕೃಷಿ ಸೀಮಿತವಾಗದೆ ಮೌಲ್ಯವರ್ಧನೆ, ಸಂಸ್ಕರಣೆ, ಬ್ರಾಂಡಿಂಗ್, ಮಾರುಕಟ್ಟೆ, ರಫ್ತು ಕ್ಷೇತ್ರಗಳತ್ತಲೂ ರೈತರು ವಾಲಿದ್ದಾರೆ. ಆಹಾರ ಬೆಳೆ ಮಾತ್ರವಲ್ಲದೆ, ಆಹಾರೇತರ ಬೆಳೆಗಳನ್ನು ಮೌಲ್ಯವರ್ಧನೆ ಮಾಡಿ ಲಾಭ ಗಳಿಸುವ ಪ್ರಯತ್ನಗಳು ನಡೆಯುತ್ತಿವೆ. ರೈತರು ರೈತೋದ್ಯಮಿಗಳಾಗಬೇಂಬ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಾನಾ ಯೋಜನೆ ರೂಪಿಸಿ ಜಾರಿಗೊಳಿಸುತ್ತಿವೆ. ದೇಶದಲ್ಲಿ 70 ಸಾವಿರಕ್ಕೂ ಅಧಿಕ ಸ್ಟಾರ್ಟಪ್​ಗಳಿದ್ದು, ಆ ಪೈಕಿ 7 ಸಾವಿರ ಕೃಷಿ ಸ್ಟಾರ್ಟಪ್​ಗಳಿವೆ.

ಹಿಂಡು ಬೆಳೆ: ತುಂಡು ಜಮೀನಿನಲ್ಲಿ ಹಿಂಡು ಬೆಳೆ ಎಂಬಂತೆ ಸಮಗ್ರ ಕೃಷಿ ಪದ್ಧತಿ ಅನುಸರಣೆಯಿಂದ ರೈತರು ಕೃಷಿಯನ್ನು ಲಾಭದಾಯಕ ಮಾಡಿಕೊಳ್ಳಬಹುದಾಗಿದೆ. ಹೂವು, ತರಕಾರಿ, ಹಣ್ಣು, ಕೃಷಿ ಬೆಳೆ, ಹೈನುಗಾರಿಕೆ... ಈ ರೀತಿ ಎಲ್ಲ ಉಪಕಸಬು ಕೂಡಿಸಿಕೊಂಡು ಕೃಷಿ ಮಾಡುವ ಮೂಲಕ ನಿಶ್ಚಿತ ಆದಾಯ ಪಡೆಯಲು ಅವಕಾಶವಿದೆ. ಕೃಷಿ ತ್ಯಾಜ್ಯ ಬಳಸಿ ಗೊಬ್ಬರ, ಸಾವಯವ ಗೊಬ್ಬರ ಸೇರಿದಂತೆ ಹೊಸ ಉಪ ಉತ್ಪನ್ನ ತಯಾರಿಸಬಹುದಾಗಿದೆ. ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಕೃಷಿ ಉತ್ಪನ್ನ ಮಾರಾಟ ಮಾಡಬಹುದಾಗಿದೆ. ಮಾರುಕಟ್ಟೆ ಅಧ್ಯಯನ, ಮಾರುಕಟ್ಟೆ ಮಾಹಿತಿ, ತಂತ್ರಜ್ಞಾನ ಆಧಾರಿತ ಕೃಷಿಗೆ ಹೇರಳ ಅವಕಾಶಗಳು ಗೋಚರಿಸುತ್ತವೆ. ವಿದ್ಯಾವಂತರು, ಐಟಿ ಬಿಟಿ ವಲಯದವರು ಕೃಷಿಯಲ್ಲಿ ಹೂಡಿಕೆ ಮಾಡಲು ವಿಪುಲ ಅವಕಾಶಗಳಿವೆ.

ಸಮಸ್ಯೆಗೆ ಬೇಕಿದೆ ಪರಿಹಾರ

ಎಷ್ಟೋ ಸಂದರ್ಭಗಳಲ್ಲಿ ಸರ್ಕಾರಗಳು ಮಾರುಕಟ್ಟೆ ಬೆಲೆಗಿಂತಲೂ ಕಡಿಮೆ ಬೆಂಬಲ ಬೆಲೆಯನ್ನು ಘೋಷಿಸುತ್ತವೆ. ಇದರಿಂದ, ರೈತರಿಗೆ ಹಾನಿಯಾಗು ತ್ತಿದ್ದು, ಬೆಂಬಲ ಬೆಲೆ ಪ್ರಯೋಜನಕ್ಕೆ ಬಾರದಂತಾಗಿದೆ. ಹಾಗಾಗಿ, ಬೆಂಬಲ ಬೆಲೆಯನ್ನು ವೈಜ್ಞಾನಿಕ ನೆಲೆಯಲ್ಲಿ ಘೋಷಿಸಬೇಕು. ಮುಖ್ಯವಾಗಿ, ಬೆಳೆವಿಮೆ ಮಾಡಿಸಿದ ರೈತರಿಗೆ ಪರಿಹಾರವಾಗಿ ಬಿಡಿಗಾಸು ಬರುತ್ತಿದ್ದು, ರೈತರ ಗಾಯಕ್ಕೆ ಬರೆ ಎಳೆದಂತಾಗಿದೆ. ಎಷ್ಟು ಪ್ರಮಾಣದಲ್ಲಿ ಬೆಳೆಹಾನಿಯಾಗಿದೆಯೋ ಅಷ್ಟು ಮೊತ್ತವನ್ನು ಬೆಳೆವಿಮೆ ಮೂಲಕ ರೈತರಿಗೆ ಸಿಗುವಂತಾಗಬೇಕು. ಕರ್ನಾಟಕದಲ್ಲಿ ಕೃಷಿ ನೀತಿಯಲ್ಲಿ ಕೆಲ ಮಾರ್ಪಾಡುಗಳು ಅಗತ್ಯವಾಗಿವೆ.

ಯುವಕರು ತಂತ್ರಜ್ಞಾನ ಆಧಾರಿತ ಕೃಷಿಯನ್ನು ಮಾಡಬೇಕು. ಬೇಡಿಕೆ ಆಧಾರಿತ ಬೆಳೆ ಬೆಳೆಯಬೇಕು. ಮಾರುಕಟ್ಟೆ ಅಧ್ಯಯನ ಮಾಡಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿ ಕೊಳ್ಳಬೇಕು. ಕೃಷಿ ಜತೆ ಉಪಕಸಬು ಕೈಗೊಂಡಾಗ ಕೃಷಿ ನಿಶ್ಚಿತವಾಗಿಯೂ ಲಾಭವಾಗುತ್ತದೆ.

| ಎ.ಬಿ.ಪಾಟೀಲ ವಿಶ್ರಾಂತ ಕುಲಸಚಿವರು, ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net