ಬಿತ್ತನೆಬೀಜ ವಿತರಣೆಯಲ್ಲಿ ತೊಂದರೆಯಾಗದಿರಲಿ: ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ

Agricultural implements maintenance review meeting Mandya
Published on

ಮಂಡ್ಯ: ಜಿಲ್ಲೆಯಲ್ಲಿ ಮುಂಗಾರು ಹಂಗಾಮ ಪ್ರಾರಂಭವಾಗಿದ್ದು, ಕೃಷಿ ಚಟುವಟಿಕೆಗಳು ಚುರುಕಾಗಿರುತ್ತದೆ. ರೈತರಿಗೆ ತೊಂದರೆಯಾಗದಂತೆ ಗುಣಮಟ್ಟದ ಬಿತ್ತನೆ ಬೀಜ, ಗೊಬ್ಬರ ಹಾಗೂ ಸಸ್ಯ ಸಂರಕ್ಷಣಾ ಔಷಧ ದೊರಕುವಂತೆ ವ್ಯವಸ್ಥೆಯಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕೃಷಿ ಪರಿಕರಗಳ ಉಸ್ತುವಾರಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಭತ್ತ ಪ್ರಮುಖ ಬೆಳೆಯಾಗಿದ್ದು, ಸುಮಾರು 60,000 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಲಿದೆ. ಜುಲೈ ಹಾಗೂ ಆಗಸ್ಟ್ ಮಾಹೆಯಲ್ಲಿ ರೈತ ಸಂಪರ್ಕ ಕೇಂದ್ರ, ಪಿ.ಎ.ಸಿ.ಎಸ್ ಹಾಗೂ ರೈತ ಉತ್ಪನ್ನ ಸಂಸ್ಥೆಗಳು ಪ್ರತಿದಿನ ಬೆಳಗ್ಗೆ 8.30ಕ್ಕೆ ಕೇಂದ್ರ ತೆರೆಯಬೇಕು. ಅಂತೆಯೇ ರೈತರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎಂದರು.

ಪ್ರತಿದಿನ ಲಭ್ಯವಿರುವ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ದಾಸ್ತಾನು ವಿವರವನ್ನು ಅನಾವರಣ ಮಾಡಬೇಕು. ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ದಾಸ್ತಾನು ಬುಲೆಟನ್ ಅನ್ನು ಬಿಡುಗಡೆ ಮಾಡಬೇಕು. ಇದರಿಂದ ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ತೊಂದರೆಯಿಲ್ಲವೆಂದು ಮನವರಿಕೆಯಾಗುತ್ತದೆ ಎಂದರು.

ಕಳಪೆ ಗುಣಮಟ್ಟದ ಬಿತ್ತನೆ ಬೀಜ ಸೇರಿದಂತೆ ಯಾವುದೇ ಕೃಷಿ ಪರಿಕರ ಮಾರಾಟ ಮಾಡುತ್ತಿರುವುದು ಕಂಡುಬಂದಲ್ಲಿ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದು. ಮಣ್ಣು ಪರೀಕ್ಷಾ ವರದಿಯನ್ನು ಆಧರಿಸಿ ಬೆಳೆಗಳನ್ನು ಬೆಳೆಯುವ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕು. ಕೃಷಿ ತಜ್ಞರ ಜತೆ ಸಂವಾದಗಳನ್ನು ನಡೆಸಬೇಕು. ಯೂರಿಯಾ ಬಳಕೆಯನ್ನು ತಗ್ಗಿಸಲು ಪರ್ಯಾಯವಾಗಿ ಜೈವಿಕ, ಹಸಿರೆಲೆ, ಸಾವಯವ ಗೊಬ್ಬರದ ಬಳಕೆಯನ್ನು ಉತ್ತೇಜಿಸಬೇಕು ಎಂದರು.

ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ್ ಅವರು ಮಳೆ, ಬಿತ್ತನೆಯ ಪ್ರಗತಿ, ರಸಗೊಬ್ಬರ, ಭತ್ತದ ಬೆಳೆಯ ಸರಾಸರಿ ಇಳುವರಿ, ಮಾರಾಟ ಮಳಿಗೆಗಳ ವಿವರ ನೀಡಿದರು. ಸಭೆಯಲ್ಲಿ ಕೃಷಿ ಅಧಿಕಾರಿಗಳಾದ ಹರ್ಷ, ಮುನೇಗೌಡ, ಡಾ.ಭಾನುಪ್ರಕಾಶ್, ಮಂಜುನಾಥ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net