

ನಾಗಮಂಗಲ: ನಾಲೆಗಳ ಮೂಲಕ ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಜತೆಗೆ ಸಣ್ಣಪುಟ್ಟ ಅಣೆಕಟ್ಟೆಗಳನ್ನು ನಿರ್ಮಿಸಿ ಅಂತರ್ಜಲಮಟ್ಟದ ವೃದ್ಧಿಗೆ ಹಾಗೂ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಸಣ್ಣನೀರಾವರಿ ಇಲಾಖೆ ಸಹಕಾರಿಯಾಗಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಪಟ್ಟಣದ ಟಿಬಿ ಬಡಾವಣೆಯ ಹೇಮಾವತಿ ಇಲಾಖೆಯ ಆವರಣದಲ್ಲಿ ಸಣ್ಣನೀರಾವರಿ ಇಲಾಖೆಯ ಕಚೇರಿಯನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು. ಸಣ್ಣ ನೀರಾವರಿ ಇಲಾಖೆಯ ಯೋಜನೆಗಳು ರೈತರ ಕೃಷಿ ಕ್ಷೇತ್ರಕ್ಕೆ ತುಂಬ ಅನುಕೂಲಕರವಾಗಿದ್ದು, ರೈತರ ಬದುಕಿನಲ್ಲಿ ಹೊಸ ಬೆಳಕನ್ನು ತರುವಂತೆ ಕಾರ್ಯನಿರ್ವಹಿಸಲಿದೆ. ನಮ್ಮ ತಾಲೂಕಿನಲ್ಲಿನ ಈ ನೂತನ ವಿಭಾಗೀಯ ಕಚೇರಿ ಹೆಚ್ಚಿನ ಮಟ್ಟದಲ್ಲಿ ನೀರಾವರಿ ಸೌಲಭ್ಯಗಳನ್ನು ನಮ್ಮ ವಿಭಾಗೀಯ ಮಟ್ಟಕ್ಕೆ ತಂದು ರೈತರಿಗೆ ಅನುಕೂಲ ಮಾಡಿಕೊಡಲಿ. ಈ ನಿಟ್ಟಿನಲ್ಲಿ ಅಗತ್ಯ ಅನುದಾನಗಳನ್ನು ಸರ್ಕಾರದ ಹಂತದಲ್ಲಿ ಬಿಡುಗಡೆಗೊಳಿಸಿಕೊಡಲು ನಾನು ಕೂಡ ಸಹಕರಿಸಲಿದ್ದೇನೆ. ಈ ಇಲಾಖೆಯಿಂದ ತಾಲೂಕಿನಲ್ಲಿ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಗಲಿದೆ. ಈ ಇಲಾಖೆಯಡಿಯಲ್ಲಿ ಅಂತರ್ಜಲ ಹೆಚ್ಚಿಸುವ ಉದ್ದೇಶದಿಂದ ಚೆಕ್‌ಡ್ಯಾಂಗಳ ನಿರ್ಮಾಣ, ನಾಲೆಗಳ ಅಭಿವೃದ್ಧಿ, ಸೇತುವೆಗಳ ನಿರ್ಮಾಣ ಸೇರಿದಂತೆ ಮುಂತಾದವುಗಳಿಂದ ಕೆಲವು ಅಭಿವೃದ್ಧಿ ಕೆಲಸಗಳು ಆಗಲಿದ್ದು ರೈತರಿಗೆ ಅನುಕೂಲಕರವಾಗಲಿದೆ. ರೈತರ ಅಭಿವೃದ್ಧಿಗೆ ಕೃಷಿ ಇಲಾಖೆಯಷ್ಟೆ ಪ್ರಾಮುಖ್ಯ ಸಣ್ಣನೀರಾವರಿ ಇಲಾಖೆ ಹೊಂದಿದೆ ಎಂದರು.
ತಾಲೂಕಿನ ದೊಡ್ಡಜಟಕ ಗ್ರಾಮದ ಕೆರೆ ಅಭಿವೃದ್ಧಿ ಕಾಮಗಾರಿಗೂ ಸಚಿವ ಎನ್.ಚಲುವರಾಯಸ್ವಾಮಿ ಭೂಮಿಪೂಜೆ ನೆರವೇರಿಸಿದರು. ಈ ಸಂದರ್ಭ ಜನ-ಜಾನುವಾರುಗಳಿಗೆ ಅನುಕೂಲಕರವಾಗುವ ನಿಟ್ಟಿನಲ್ಲಿ ಕೆರೆಯನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಇದರಿಂದ ಕೃಷಿ ಮತ್ತು ಕುಡಿಯುವ ನೀರಿಗೆ ಅನುಕೂಲವಾಗಲಿದೆ ಎಂದರು.
ಪುರಸಭೆ ಅಧ್ಯಕ್ಷ ಅಲಿಅನ್ಸರ್ ಪಾಷ, ಮುಖಂಡರಾದ ಎಚ್.ಟಿ.ಕೃಷ್ಣೇಗೌಡ, ತಿಬ್ಬನಹಳ್ಳಿ ರಮೇಶ್, ಮದಲಹಳ್ಳಿ ಸಂಪತ್ತು ಸೇರಿದಂತೆ ಮತ್ತಿತರಿದ್ದರು.