

ಮಾಯಕೊಂಡ : ರಸ್ತೆ ಬದಿ ಅಡಕೆ ಸಿಪ್ಪೆ ಸುರಿದು ಬೆಂಕಿ ಹಾಕಿದರೆ ಸಾಲುಮರಗಳು ಸುಟ್ಟು ಪರಿಸರ ಹಾಳಾಗುತ್ತಿದೆ. ಆದ್ದರಿಂದ ರೈತರು ಅಡಕೆ ಸಿಪ್ಪೆಯನ್ನು ಉತ್ಕೃಷ್ಟ ಗೊಬ್ಬರವಾಗಿ ಮಾಡಲು ಮುಂದಾಗಬೇಕು ಎಂದು ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.
ದಾವಣಗೆರೆ ತಾಲೂಕಿನ ಕಬ್ಬೂರು ಗ್ರಾಮದಲ್ಲಿ ಬುಧವಾರ ನಡೆದ ಕೃಷಿ ಉತ್ಸವ ಮತ್ತು ಕಾಯಕಜೀವಿ ಕೆ.ವಿ. ಗಂಗಾಧರಪ್ಪ ಸ್ಮರಣೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಗಿಡ ಮರಗಳ ವಿನಾಶದಿಂದ ಶುದ್ಧ ಗಾಳಿಗೆ ಪರಿತಪಿಸುವ ಕಾಲ ಬಂದಿದೆ. ಗಿಡಗಳನ್ನು ನೆಟ್ಟು ಸಾಕಿ, ಬೆಳೆಸಿ ಶುದ್ಧ ಗಾಳಿಯನ್ನು ಪಡೆಯುವವರ ಸಂಖ್ಯೆ ದಿನ ದಿನಕ್ಕೆ ಕಡಿಮೆಯಾಗುತ್ತಿದೆ. ಗ್ರಾಮೀಣ ಪ್ರದೇಶಗಳು ಕಾಂಕ್ರಿಟ್ ಕಾಡುಗಳಾಗಿ ಪರಿವರ್ತನೆಯಾಗುತ್ತಿವೆ. ದೆಹಲಿಯಂತಹ ನಗರಗಳಲ್ಲಿ ಶುದ್ಧ ಗಾಳಿಗಾಗಿ ಸಿಲಿಂಡರ್‌ಗಳನ್ನು ಬೆನ್ನಿಗೆ ಕಟ್ಟಿಕೊಂಡು ಓಡಾಡುವ ಸ್ಥಿತಿ ಇದೆ ಎಂದು ಕಳವಳ ವ್ಯಕ್ತಪಡಿಸಿದರು.
ರೈತ ಸಮುದಾಯ ಸಮಗ್ರ ಕೃಷಿ ಅಳವಡಿಸಿಕೊಂಡರೆ ಆರ್ಥಿಕವಾಗಿ ಸಬಲರಾಗಬಹುದು. ಒಂದು ಎಕರೆ ಪ್ರದೇಶದಲ್ಲಾದರೂ ಆಹಾರ, ತರಕಾರಿ ಬೆಳೆಗಳನ್ನು ಬೆಳೆಯುವುದು ಸೂಕ್ತ ಎಂದು ಕಿವಿಮಾತು ಹೇಳಿದರು.
ಗಂಗಾಧರಪ್ಪನವರು ಜೀವಿತಾವಧಿಯಲ್ಲಿ ಸಾವಿರಾರು ಗಿಡಗಳನ್ನು ನೆಟ್ಟು ಪೋಷಿಸಿದ್ದಾರೆ. ಇದು ಎಲ್ಲ ಕೃಷಿಕರಿಗೂ ಮಾದರಿಯಾಗಬೇಕು ಎಂದರು.
ದಾವಣಗೆರೆ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಡಿ.ಎಂ. ಶ್ರೀಧರ ಮೂರ್ತಿ ಮಾತನಾಡಿ, ರೈತರು ಆಧುನಿಕ ಕೃಷಿಯತ್ತ ಗಮನಹರಿಸಬೇಕು. ಯಾಂತ್ರಿಕೃತ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು ಮತ್ತು ಕಡಿಮೆ ಖರ್ಚಿನಲ್ಲಿ ದ್ವಿದಳ ಧಾನ್ಯ ಹಾಗೂ ಸಿರಿಧಾನ್ಯಗಳನ್ನು ಹೆಚ್ಚಾಗಿ ಬೆಳೆಯುವುದು ಸೂಕ್ತ ಎಂದು ತಿಳಿಸಿದರು.
ರಾಷ್ಟ್ರೀಯ ತೋಟಗಾರಿಕಾ ಪ್ರಶಸ್ತಿ ಪುರಸ್ಕೃತ ರೈತ ಎಚ್. ಬಿ. ಮುರುಗೇಶಪ್ಪ ಮಾತನಾಡಿ, ಅಡಕೆ ತೋಟಗಳಲ್ಲಿ ಅಂತರ್ ಬೆಳೆಯಾಗಿ ವಾಣಿಜ್ಯ ಬೆಳೆ ಬೆಳೆದಲ್ಲಿ ಪ್ರತಿ ಎಕರೆಗೆ ನಾಲ್ಕರಿಂದ ಐದು ಲಕ್ಷ ರೂ. ಸಂಪಾದನೆ ಮಾಡಬಹುದು ಎಂದರು.
ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ್ ಕಬ್ಬೂರ್ ಮಾತನಾಡಿ, ಮನುಷ್ಯ ಬದುಕಿನಲ್ಲಿ ಬಡತನ ಶ್ರೀಮಂತಿಕೆ ಶಾಶ್ವತವಲ್ಲ. ನೈತಿಕವಾಗಿ ಹಾಗೂ ಸಾಮಾಜಿಕವಾಗಿ ಮಾಡುವ ಸೇವಾ ಮನೋಭಾವವೇ ಶಾಶ್ವತ. ತಂದೆಯವರಾದ ಗಂಗಾಧರಪ್ಪ, ಗ್ರಾಮಗಳ ಸುತ್ತ ಸಾರ್ವಜನಿಕ ಸ್ಥಳಗಳಲ್ಲಿ ಸಾವಿರಾರು ಗಿಡಗಳನ್ನು ನೆಟ್ಟು ಉತ್ತಮ ಪರಿಸರ ನಿರ್ಮಾಣಕ್ಕೆ ಕಾರಣರಾಗಿದ್ದಾರೆ ಎಂದರು.
ಮಾಜಿ ಸಚಿವ ಎಸ್.ಎ. ರವೀಂದ್ರನಾಥ್, ರೈತ ಚಿಂತಕ ಆವರಗೆರೆ ರುದ್ರಮುನಿ, ಎನ್.ಜಿ. ಪುಟ್ಟಸ್ವಾಮಿ, ಹೊನ್ನೂರು ಮುನಿಯಪ್ಪ, ಹೊನ್ನನಾಯಕನಹಳ್ಳಿ ಪ್ರಗತಿಪರ ರೈತ ಮುರುಗೇಂದ್ರಪ್ಪ, ಗಂಗಾಧರಪ್ಪ ಕಬ್ಬೂರು ಕುಟುಂಬ ವರ್ಗದವರು, ಸಾರ್ವಜನಿಕರು ಭಾಗವಹಿಸಿದ್ದರು. ಶಿಕ್ಷಕಿ ಡಾ. ಆಶಾ ನಾಗರಾಜ್ ಕಬ್ಬೂರು ನಿರೂಪಿಸಿದರು.