

ವಿಜಯಪುರ: ಕೃಷಿ ಮೇಳಗಳು ರೈತರಿಗೆ ದಾರಿದೀಪ ಎಂದು ಕರ್ನಾಟಕ ರಾಜ್ಯ ಬೆಲೆ ಆಯೋಗದ ಅಧ್ಯಕ್ಷ ಡಾ. ಅಶೋಕ ಎಂ. ದಳವಾಯಿ ಹೇಳಿದರು.
ನಗರ ಹೊರವಲಯದ ಹಿಟ್ನಳ್ಳಿ ಕೃಷಿ ಮಹಾವಿದ್ಯಾಲಯದಲ್ಲಿ ಕೃಷಿ ವಿಶ್ವವಿದ್ಯಾಲಯ ಧಾರವಾಡ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ‘ಆಹಾರ ಮತ್ತು ಪೌಷ್ಟಿಕ ಭದ್ರತೆಗಾಗಿ ಸುಸ್ಥಿರ ಕೃಷಿ’ ಶೀರ್ಷಿಕೆಯೊಂದಿಗೆ ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದ ‘ಕೃಷಿ ಮೇಳ 2024-25’ರ ಶನಿವಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೃಷಿ ಮೇಳಗಳು ರೈತರ ಪಾಲಿಗೆ ಮಾಹಿತಿ ನೀಡುವ ಒಂದು ವ್ಯವಸ್ಥಿತ ಕೇಂದ್ರಗಳಾಗಿವೆ. ರೈತರು ಕೃಷಿಯಲ್ಲಿ ಬದಲಾವಣೆಯಾಗುತ್ತಿರುವ ಸಂದರ್ಭಕ್ಕೆ ಅನುಗುಣವಾಗಿ ಆಧುನಿಕ ಕೃಷಿ ತಂತ್ರಜ್ಞಾನ ಮಾಹಿತಿಯನ್ನು ಪಡೆಯಬೇಕಾಗುತ್ತದೆ ಎಂದರು.
ರೈತರು ಪ್ರಸಕ್ತ ಸಂದರ್ಭದಲ್ಲಿ ಸಾವಯವ, ಸಿರಿಧಾನ್ಯ ಬೆಳೆ, ನೈಸರ್ಗಿಕ ಕೃಷಿ ವಿಧಾನಗಳನ್ನು ಅನುಸರಿಸಬೇಕು. ರೈತರಿಗೆ ತಾವು ಬೆಳೆದ ಬೆಳೆೆಗೆ ಯೋಗ್ಯ ಬೆಲೆ ದೊರಕುವಂತಾಗಲು ಮುಂಬರುವ ದಿನಗಳಲ್ಲಿ ಪ್ರಯತ್ನಿಸಲಾಗುವುದು ಎಂದರು.
ಪ್ರಗತಿಪರ ರೈತ ಎಂ.ಎಸ್. ರುದ್ರಗೌಡರ ಮಾತನಾಡಿ, ರೈತರು ಈ ಭಾಗದಲ್ಲಿ ತೋಟಗಾರಿಕೆ ಬೆಳೆಗಳನ್ನು ಹೆಚ್ಚಾಗಿ ಬೆಳೆಯುತ್ತಿದ್ದು, ಅದರಲ್ಲೂ ದ್ರಾಕ್ಷಿಯನ್ನು 26 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಈ ಭಾಗದಲ್ಲಿ ದ್ರಾಕ್ಷಿಯನ್ನು ಹೆಚ್ಚಾಗಿ ಒಣ ದ್ರಾಕ್ಷಿಯನ್ನಾಗಿ ಬೆಳೆದು ಮಾರಿದಾಗ ರೈತರಿಗೆ ಕಡಿಮೆ ಬೆಲೆ ದೊರಕುತ್ತಿದೆ. ಹೆಚ್ಚಿನ ಪಾಲು ದಲ್ಲಾಳಿಗಳ ಪಾಲಾಗುತ್ತಿದೆ. ಕಾರಣ ರೈತರಿಗೆ ಶೀತಲ ಗೃಹ ಹಾಗೂ ಹೆಚ್ಚಿನ ಬೆಲೆ ದೊರೆಯುವಂತಾಗಲು ಬೆಲೆ ಆಯೋಗದ ಅಧ್ಯಕ್ಷರಿಗೆ ವಿನಂತಿಸಿದರು.
ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಮಾತನಾಡಿ, ರೈತರು ಸಮಗ್ರ ಕೃಷಿ ಪದ್ಧತಿ ಅನುಸರಿಸಬೇಕು. ಕಬ್ಬು ಹಾಗೂ ಸಿರಿಧಾನ್ಯ ಬೆಳೆಯುವ ರೈತರಿಗೆ ಉತ್ತಮ ಮಾರ್ಗದರ್ಶನ ಅಗತ್ಯವಿದ್ದು, ಕೃಷಿ ಮೇಳ ಪೂರಕವಾಗಿ ಕೆಲಸ ಮಾಡಿದೆ ಎಂಬ ವಿಶ್ವಾಸವಿದೆ ಎಂದರು.
ಕೃಷಿ ಮಹಾವಿದ್ಯಾಲಯದ ಡೀನ್ ಡಾ. ಅಶೋಕ ಸಜ್ಜನ ಕೃಷಿಮೇಳ ಕುರಿತು ವರದಿ ಮಂಡಿಸಿದರು. ವ್ಯವಸ್ಥಾಪನಾ ಮಂಡಳಿ ಸದಸ್ಯೆ ಪಾರ್ವತಿ ಕುರ್ಲೆ, ಕೃಷಿಕ ಸಮಾಜದ ಮುಖಂಡ ರವಿ ಪಾಟೀಲ, ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ, ಉಪ ಕೃಷಿ ನಿರ್ದೇಶಕ ಡಾ. ಪ್ರಕಾಶ ಚವಾಣ್, ಡಾ.ಎಸ್.ವಿ. ನಾಡಗೌಡ, ಡಾ. ಶೋಭಾ ನಾಗನೂರ, ಡಾ. ಎಂ.ವೈ. ತೆಗ್ಗಿ, ಡಾ. ಎಸ್.ಎಂ. ವಸ್ತ್ರದ, ಡಾ. ಎ.ಪಿ. ಬಿರಾದಾರ ಮತ್ತಿತರರಿದ್ದರು.
ಡಾ. ಸಾವಿತ್ರಿ ಪಾಟೀಲ ನಿರೂಪಿಸಿದರು. ಸಹ ಸಂಶೋಧನಾ ನಿರ್ದೇಶಕ ಡಾ. ಎಸ್.ಬಿ. ಜಗ್ಗಿನವರ ವಂದಿಸಿದರು.