

ಮೈಸೂರು: ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ಫೆ.21ರಿಂದ 23ರವರೆಗೆ ನಗರದಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ಕೃಷಿ ಮೇಳದಲ್ಲಿ ರೈತರಿಗೆ ಉಪಯುಕ್ತವಾಗುವ ಅನೇಕ ವಿಚಾರಗಳನ್ನು ಕೃಷಿ ತಜ್ಞರು ಮಂಡಿಸಲಿದ್ದಾರೆ. ಮಹಾರಾಜ ಕಾಲೇಜು ಮೈದಾನದಲ್ಲಿ ಮೂರು ದಿನಗಳ ರೈತ ಸಂಭ್ರಮ ಕಳೆಗಟ್ಟಲಿದ್ದು, ವಿಚಾರ ಮಂಡನೆ ಜತೆಗೆ ಕೃಷಿ, ರೈತಾಪಿ ಜನರ ಮನರಂಜನೆಯ ವಿವಿಧ ಸ್ಪರ್ಧೆ, ನಾಟಕಗಳನ್ನು ಆಯೋಜಿಸಲಾಗಿದೆ.
ಕೃಷಿಯಲ್ಲಿ ತಂತ್ರಜ್ಞಾನ ಬಳಕೆ, ಸುಸ್ಥಿರ ಕೃಷಿ ಮತ್ತು ಮಾರುಕಟ್ಟೆಯ ಸವಾಲುಗಳು, ಇ-ಮಾರುಕಟ್ಟೆ, ನೀರು ನಿರ್ವಹಣೆ, ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆಯ ಮೌಲ್ಯವರ್ಧಿತ ಅಂಶ ಸೇರ್ಪಡೆ ಹೇಗೆ ಇತ್ಯಾದಿ ವಿಷಯಗಳನ್ನು ಹಲವು ತಜ್ಞರು, ಪ್ರಗತಿಪರ ರೈತರು ಮಂಡಿಸಲಿದ್ದಾರೆ. ರೈತರು ಕೃಷಿಯಲ್ಲಿ ಅನುಭವಿಸುತ್ತಿರುವ ಸಂಕಷ್ಟಗಳು, ಎಲ್ಲಿ ತೊಂದರೆಗೆ ಒಳಗಾಗುತ್ತಿದ್ದಾರೆ. ರೈತರು ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಯಾವ ರೀತಿಯ ಸ್ಥಿತಿ ಇದೆ, ನೀರನ್ನು ಯಾವ ರೀತಿ ನಿರ್ವಹಣೆ ಮಾಡಿ ಕಡಿಮೆ ನೀರಿನಲ್ಲಿ ಹೆಚ್ಚು ಬೆಳೆ ಬೆಳೆಯಬಹುದು ಎನ್ನುವುದನ್ನು ತಜ್ಞರು ಮೇಳದಲ್ಲಿ ತಿಳಿಸಿಕೊಡಲಿದ್ದಾರೆ.
ಜಾಗತಿಕ ಪ್ರಭಾವದಿಂದ ರೈತರು ಎದುರಿಸುತ್ತಿರುವ ಮಾರುಕಟ್ಟೆಯ ಸವಾಲುಗಳು, ದಿಢೀರ್ ಬೆಲೆ ಕುಸಿತ, ಏರಿಕೆ ಕುರಿತ ಮಾಹಿತಿ ದೊರೆಯಲಿದೆ. ಇದಕ್ಕೆ ಪೂರಕವಾಗಿ ನಿರ್ವಣಗೊಳ್ಳಲಿರುವ 50ಕ್ಕೂ ಹೆಚ್ಚು ಮಳಿಗೆಗಳಿಂದ ಕೃಷಿ ಜ್ಞಾನ, ಆಧುನಿಕ ಯಂತ್ರೋಪಕರಣಗಳು, ಹೊಸ ಹೊಸ ತಂತ್ರಜ್ಞಾನಗಳ ಪ್ರದರ್ಶನ ಇರಲಿದೆ. ವಿಚಾರಗೋಷ್ಠಿ, ವಿಷಯ ಮಂಡನೆ ಜತೆಗೆ ರೈತರ ಮನೋಲ್ಲಾಸಕ್ಕೆ ಕೃಷಿ ಆಧಾರಿತ ಹಲವಾರು ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಹಗ್ಗಜಗ್ಗಾಟ, ಅಳಿಗುಳಿ ಮನೆ, ಕುಂಟೆಬಿಲ್ಲೆ, ಗಿಲ್ಲಿದಾಂಡು, ಲಗೋರಿ, ಜಾನಪದ ನೃತ್ಯ, ಕೃಷಿ ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ವೇಷಭೂಷಣ, ರಂಗೋಲಿ ಸೇರಿ ಇನ್ನಿತರ ಸ್ಪರ್ಧೆಗಳು ಇರಲಿವೆ. ಜತೆಗೆ ಮೈಸೂರು ವಿಭಾಗ ಅಲ್ಲದೆ ರಾಜ್ಯದ ವಿವಿಧೆಡೆಗಳಿಂದ ಆಗಮಿಸುವ ತಂಡಗಳಿಂದ ನಾಟಕ ಸ್ಪರ್ಧೆಯೂ ನಡೆಯಲಿದೆ. ಉದ್ಘಾಟನೆಯ ದಿನ ನಗರದ ವಿವಿಧ ರಸ್ತೆಗಳಲ್ಲಿ ಅಲಂಕೃತ ಎತ್ತಿನ ಗಾಡಿ, ಟ್ರ್ಯಾಕ್ಟರ್ಗಳಿಂದ ಕೃಷಿಯನ್ನು ಬಿಂಬಿಸುವ ಮಾಹಿತಿ ಯೊಂದಿಗೆ ಮೆರವಣಿಗೆ ಮಹಾರಾಜ ಕಾಲೇಜು ಮೈದಾನದವರೆಗೆ ಸಾಗಲಿದೆ.