

ಮಂಡ್ಯ: ತಾಲೂಕಿನ ವಿ.ಸಿ. ಫಾರ್ಮ್‌ನಲ್ಲಿ ಆಯೋಜಿಸಿದ್ದ ಎರಡು ದಿನಗಳ ಕೃಷಿ ಮೇಳ ಮುಕ್ತಾಯಗೊಂಡಿತು.
ಈ ಅವಧಿಯಲ್ಲಿ ಲಕ್ಷಾಂತರ ರೈತರು, ರೈತ ಮಹಿಳೆಯರು ಹಾಗೂ ಯುವ ರೈತರು ಮೇಳದಲ್ಲಿ ಪಾಲ್ಗೊಂಡು ಕೃಷಿಯ ಹೊಸ ಅನುಭವ ಪಡೆದುಕೊಂಡರು.
ಆಹಾರ-ಆರೋಗ್ಯ-ಆದಾಯಕ್ಕಾಗಿ ಸಿರಿಧಾನ್ಯಗಳು ಶೀರ್ಷಿಕೆಯಡಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ವಿ.ಸಿ. ಫಾರ್ಮ್ ವಲಯ ಕೃಷಿ ಸಂಶೋಧನಾ ಕೇಂದ್ರ, ಕೃಷಿ ಮಹಾವಿದ್ಯಾಲಯ, ಸಹ ವಿಸ್ತರಣಾ ನಿರ್ದೇಶನಾಲಯ ಮತ್ತು ಕೃಷಿ ವಿಜ್ಞಾನ ಕೇಂದ್ರ ಸೇರಿದಂತೆ ವಿವಿಧ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಕೃಷಿ ಮೇಳ ರೈತರ ಮೆಚ್ಚುಗೆಗೆ ಪಾತ್ರವಾಯಿತು. ಮಾತ್ರವಲ್ಲದೆ ಕೂಲಿ ಕಾರ್ಮಿಕರ ಕೊರತೆ, ನೀರಿನ ಅಭಾವ, ಮಿಶ್ರ ಕೃಷಿ, ಆಧುನಿಕ ಯಂತ್ರೋಪಕರಣಗಳನ್ನು ಅಳವಡಿಸಿಕೊಂಡು ಬೇಸಾಯದ ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಬೇಕಾದ ಸಲಹೆ, ಮಾರ್ಗದರ್ಶನವನ್ನು ರೈತರಿಗೆ ನೀಡುವಲ್ಲಿ ಮೇಳ ಸಹಕಾರಿಯಾಯಿತು. ಗಮನಾರ್ಹ ಅಂಶವೆಂದರೆ ಎರಡು ದಿನವೂ ಯುವ ರೈತರು ಮೇಳಕ್ಕೆ ಬಂದು ಮಾಹಿತಿ ಪಡೆದುಕೊಂಡರು. ಜತೆಗೆ ವಿಶೇಷ ಪ್ರಾತ್ಯಕ್ಷಿಕೆ ಗಮನ ಸೆಳೆಯಿತು. ಒಟ್ಟಾರೆ ಆಯೋಜಕರ ಶ್ರಮ ಸಾರ್ಥಕ ಎನ್ನಿಸಿಕೊಂಡಿತು.
ಮಣ್ಣಿನ ಸವಕಳಿ ಹೆಚ್ಚಿಸಿ: ಹಾಸನ ಕೃಷಿ ವಿವಿ ಮುಖ್ಯಸ್ಥ ಡಾ.ಎಸ್.ಎನ್.ವಾಸುದೇವನ್ ಸಲಹೆ
ಅವೈಜ್ಞಾನಿಕ ರಾಸಾಯನಿಕ ಗೊಬ್ಬರದಿಂದ ಮಣ್ಣಿನ ಸವಕಳಿ ಉಂಟಾಗಿ ಇಳುವರಿ ಕಡಿಮೆಯಾಗುತ್ತಿದೆ. ರೈತಮಿತ್ರ ಎರೆಹುಳು ಹಾಗೂ ರಾಸಾಯನಿಕ ಮುಕ್ತ ಗೊಬ್ಬರ ಬಳಕೆ ಮಾಡಿ ಮಣ್ಣಿನ ಸವಕಳಿ ಹೆಚ್ಚಿಸಬೇಕು. ಜತೆಗೆ ರೈತರು ಪ್ರತಿ ಮೂರು ವರ್ಷಕೊಮ್ಮೆ ಮಣ್ಣಿನ ಪರೀಕ್ಷೆ ಮಾಡಿಸುವ ಮೂಲಕ ಕಾಳಜಿ ವಹಿಸಬೇಕು ಎಂದು ಹಾಸನ ಕೃಷಿ ವಿದ್ಯಾಲಯದ ಮುಖ್ಯಸ್ಥ ಡಾ.ಎಸ್.ಎನ್.ವಾಸುದೇವನ್ ಸಲಹೆ ನೀಡಿದರು.
ವಿ.ಸಿ ಫಾರ್ಮ್‌ನಲ್ಲಿ ಆಯೋಜಿಸಿದ್ದ ಕೃಷಿಮೇಳದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ರೈತರು ವೈಜ್ಞಾನಿಕವಾಗಿ ಕೃಷಿ ಮಾಡಬೇಕು. ಬೇಸಾಯ ಕ್ರಮದಲ್ಲಿ ಹೊಸ ಆಯಾಮ ಸೃಷ್ಟಿಮಾಡಿಕೊಂಡು, ಬೇಸಾಯ ಕ್ರಮದಲ್ಲಿ ಹೊಸ ತಾಂತ್ರಿಕತೆ ಅಳವಡಿಸಿಕೊಳ್ಳಬೇಕು. ಭಾರತದ ಜನಸಂಖ್ಯೆ ಈಗಾಗಲೇ 140 ಕೋಟಿಗೂ ಅಧಿಕವಾಗಿದೆ. ಪ್ರಪಂಚದ ಜನಸಂಖ್ಯೆ 2050 ರ ಹೊತ್ತಿಗೆ ಸುಮಾರು 900 ಕೋಟಿ ತಲುಪುವ ನೀರಿಕ್ಷೆ ಇದೆ. ಇದಕ್ಕೆ ಪೂರಕವಾಗಿ ಆಹಾರ ಉತ್ಪಾದನೆ ಮಾಡುವ ಅವಶ್ಯಕತೆ ಇದೆ. ಹಾಗಾಗಿ ರೈತರು ವೈಜ್ಞಾನಿಕ ಕೃಷಿ ಬೇಸಾಯ ಉಪಕ್ರಮಗಳನ್ನು ಅಳವಡಿಸಿಕೊಂಡು ಉತ್ಪಾದನೆ ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.
ವಿ.ಸಿ. ಫಾರ್ಮ್ ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಎಸ್.ಎಸ್.ಪ್ರಕಾಶ್ ಮಾತನಾಡಿ, ಎರಡು ದಿನದ ಕೃಷಿ ಮೇಳವು ಅತ್ಯಂತ ಯಶಸ್ವಿಯಾಗಿ ನಡೆದಿದೆ. ಮೊದಲನೇ ದಿನ ಸುಮಾರು 40 ಸಾವಿರ ಜನ ಕೃಷಿ ಮೇಳದಲ್ಲಿ ನೋಂದಾಯಿಸಿಕೊಂಡಿದ್ದರು. ಒಟ್ಟಾರೆ ಎರಡು ದಿನಗಳಲ್ಲಿ 1.5 ಲಕ್ಷ ಜನ ಕೃಷಿ ಮೇಳಕ್ಕೆ ಭೇಟಿ ಕೊಟ್ಟಿ ಮಾಹಿತಿ ಪಡೆದುಕೊಂಡಿದ್ದಾರೆ. ಮೇಳದಲ್ಲಿ 200ಕ್ಕೂ ಹೆಚ್ಚು ಮಳಿಗೆಗಳು ಸ್ಥಾಪಿಸಿದ್ದು, ಇದಕ್ಕೆ ಸಹಕರಿಸಿ ಎಲ್ಲರಿಗೂ ಧನ್ಯವಾದಗಳು ಎಂದರು.
ಕೃಷಿ ವಿವಿ ಸಂಶೋಧನಾ ನಿರ್ದೇಶಕ ಡಾ.ವೆಂಕಟೇಶ್, ವಿಸ್ತರಣಾ ನಿರ್ದೇಶಕ ಡಾ.ವಿ.ಎಲ್.ಮಧುಪ್ರಸಾದ್, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ನರೇಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕಿ ಎಸ್.ಎಚ್.ನಿರ್ಮಲಾ ಇತರರಿದ್ದರು. ಇದೇ ಸಂದರ್ಭದಲ್ಲಿ ಕೃಷಿ ಮೇಳದಲ್ಲಿದ್ದ ಉತ್ತಮ ಮಳಿಗೆಗಳಿಗೆ ಪ್ರಶಸ್ತಿ ನೀಡಲಾಯಿತು.