

ಮಂಡ್ಯ: ಜಿಲ್ಲೆಯ ಅಸ್ಮಿತೆ ಎನ್ನಿಸಿಕೊಂಡಿರುವ ವಿ.ಸಿ ಫಾರ್ಮ್‌ನಲ್ಲಿ ಆಯೋಜಿಸಿರುವ ಕೃಷಿಮೇಳಕ್ಕೆ ಮೊದಲ ದಿನವೇ ನಿರೀಕ್ಷೆಗಿಂತ ಹೆಚ್ಚು ಜನರು ಆಗಮಿಸಿದರು. ಅದರಲ್ಲಿಯೂ ರೈತ ಮಹಿಳೆಯರು, ಯುವ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕೃಷಿಯ ಮಜಲುಗಳನ್ನು ಆಸಕ್ತಿಯಿಂದ ತಿಳಿದುಕೊಂಡರು.
‘ಆಹಾರ-ಆರೋಗ್ಯ-ಆದಾಯಕ್ಕಾಗಿ ಸಿರಿಧಾನ್ಯಗಳು’ ಶೀರ್ಷಿಕೆಯಡಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ವಿ.ಸಿ ಫಾರ್ಮ್ ವಲಯ ಕೃಷಿ ಸಂಶೋಧನಾ ಕೇಂದ್ರ, ಕೃಷಿ ಮಹಾವಿದ್ಯಾಲಯ, ಸಹ ವಿಸ್ತರಣಾ ನಿರ್ದೇಶನಾಲಯ ಮತ್ತು ಕೃಷಿ ವಿಜ್ಞಾನ ಕೇಂದ್ರ ಸೇರಿದಂತೆ ಹಲವು ಇಲಾಖೆ ಸಹಯೋಗದಲ್ಲಿ ಆಯೋಜಿಸಿರುವ ಎರಡು ದಿನದ ಕೃಷಿ ಮೇಳಕ್ಕೆ ಭರ್ಜರಿ ಸ್ಪಂದನೆ ವ್ಯಕ್ತವಾಯಿತು.
ಮಳೆಯ ಅಭಾವದಿಂದಾಗಿ ಬರಗಾಲ ಎದುರಾಗಿರುವುದರಿಂದ ಕಡಿಮೆ ನೀರನ್ನು ಬಳಸಿಕೊಂಡು ಬೆಳೆ ಬೆಳೆಯುವ ಬಗ್ಗೆ ರೈತರಿಗೆ ಸಲಹೆ ನೀಡಲು ಈ ಬಾರಿಯ ಮೇಳದಲ್ಲಿ ವಿಶೇಷ ಆದ್ಯತೆ ನೀಡಲಾಗಿತ್ತು. ಅದರಂತೆ ಕೃಷಿ ಇಲಾಖೆಯಿಂದ ಅನುಷ್ಠಾನಗೊಳಿಸಿರುವ ಹನಿ ನೀರಾವರಿ ಪದ್ಧತಿ ಪ್ರಾತ್ಯಕ್ಷಿಕೆ, ಹನಿ ನೀರಾವರಿಗೆ ಅವಶ್ಯಕವಿರುವ ಸೌಲಭ್ಯ ಹಾಗೂ ಸಾಮಗ್ರಿಗಳ ಪ್ರದರ್ಶನದ ಜತೆಗೆ ಮಾರಾಟ ನಡೆಯಿತು. ಇದಲ್ಲದೆ ಕಡಿಮೆ ಅವಧಿ ಹಾಗೂ ನೀರಿನಲ್ಲಿ ಆಡು, ಕುರಿ ಹಾಗೂ ಜಾನುವಾರುಗಳಿಗೆ ಬೆಳೆದುಕೊಳ್ಳಬಹುದಾದ ಮೇವಿನ ಬೀಜಕ್ಕೆ ಹೆಚ್ಚಿನ ಡಿಮಾಂಡ್ ಇತ್ತು. ಈ ಮಳಿಗೆಯಲ್ಲಿ ರೈತರು ಮುಗಿ ಬಿದ್ದರು. ಅಂತೆಯೇ ವಿವಿಧ ಜಾತಿಗಳ ಹಣ್ಣು, ತರಕಾರಿ, ತೆಂಗಿನಕಾಯಿ ಸೇರಿದಂತೆ ಹಲವು ಸಸಿಗಳನ್ನು ಖರೀದಿಸಲು ಹೆಚ್ಚಿನ ಆಸಕ್ತಿ ತೋರಿದರು.
ಇನ್ನು ಕೃಷಿಯಿಂದ ದೂರಾಗುತ್ತಿರುವ ಯುವ ಸಮೂಹವನ್ನು ಸೆಳೆಯುವ ಉದ್ದೇಶವನ್ನು ಮೇಳ ಹೊಂದಿದೆ. ಅದರಂತೆ ಯುವ ರೈತರು ಕೂಡ ಹುಮ್ಮಸಿನಿಂದಲೇ ಮೇಳದಲ್ಲಿ ಪಾಲ್ಗೊಂಡರು. ಅದರಲ್ಲಿಯೂ ವಿವಿಧ ಯಂತ್ರೋಪಕರಣಗಳನ್ನು ಸ್ವತಃ ಚಲಾಯಿಸಿ ಅನುಭವ ಪಡೆದುಕೊಂಡರು. ಇದಲ್ಲದೆ ಸುಧಾರಿತ ತಳಿ ಹಾಗೂ ಹೈಬ್ರಿಡ್‌ಗಳ ಪ್ರಾತ್ಯಕ್ಷಿಕೆ, ಏರೋಬಿಕ್ ಹಾಗೂ ಶ್ರೀ ಪದ್ಧತಿಯಲ್ಲಿ ಭತ್ತದ ಬೇಸಾಯ ಪ್ರಾತ್ಯಕ್ಷಿಕೆ, ಡ್ರಂ ಸೀಡರ್ ಹಾಗೂ ಯಂತ್ರಚಾಲಿತ ನಾಟಿ ಪ್ರಾತ್ಯಕ್ಷಿಕೆ, ಭತ್ತದ ನೇರ ಬಿತ್ತನೆ ಪ್ರಾತ್ಯಕ್ಷಿಕೆ, ಸಿರಿಧಾನ್ಯ/ರಾಗಿ, ಸುಧಾರಿತ ಸಿರಿಧಾನ್ಯ ತಳಿಗಳ ಪ್ರಾತ್ಯಕ್ಷಿಕೆ ಹಾಗೂ ಸಿರಿಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನ, ನೂತನ ರಾಗಿ ತಳಿ, ಮುಸುಕಿನ ಜೋಳದ ಹೈಬ್ರಿಡ್ ತಳಿಗಳ ಪ್ರಾತ್ಯಕ್ಷಿಕೆ, ಮುಸುಕಿನ ಜೋಳದ ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನ ಸೇರಿದಂತೆ ವಿವಿಧ ನೀರು ನಿರ್ವಹಣಾ ತಂತ್ರಜ್ಞಾನದ ಬಗ್ಗೆ ಪ್ರಾತ್ಯಕ್ಷಿಕೆಗಳು ಗಮನಸೆಳೆದವು.