

ಮಂಡ್ಯ: ಜಿಲ್ಲೆಯ ಕೃಷಿ ಪದ್ಧತಿಯನ್ನು ಬದಲಾವಣೆ ಮಾಡುವ ನಿಟ್ಟಿನಲ್ಲಿ ಪೈಲೆಟ್ ಯೋಜನೆ ಮೂಲಕ ತ್ವರಿತವಾಗಿ ಸಂಶೋಧನೆ ನಡೆಸಿ ರೈತರಿಗೆ ಮಾರ್ಗದರ್ಶನ ನೀಡುವಂತೆ ಕೃಷಿ ವಿವಿಯ ಕುಲಪತಿಗೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೂಚಿಸಿದರು.
ವಿ.ಸಿ ಫಾರ್ಮ್‌ನಲ್ಲಿ ಎರಡು ದಿನದ ಕೃಷಿ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಬೇರೆ ಕಡೆ ಒಂದು ಪ್ರಾಂತ್ಯದಿಂದ ಮತ್ತೊಂದಕ್ಕೆ ಮಣ್ಣಿನ ಗುಣ ಬದಲಾವಣೆ ಆಗುವುದನ್ನು ನೋಡಿದ್ದೇವೆ. ಆದರೆ ಮಂಡ್ಯ ಜಿಲ್ಲೆಯಲ್ಲಿ ಒಂದು ತಾಲೂಕಿಗೂ ಮತ್ತೊಂದು ತಾಲೂಕಿಗೂ ವ್ಯತ್ಯಾಸವನ್ನು ಕಾಣಬಹುದು. ಆದ್ದರಿಂದ ಜಿಲ್ಲೆಗೆ ಪ್ರತ್ಯೇಕ ಯೋಜನೆ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಕಡಿಮೆ ಅವಧಿಯಲ್ಲಿ ಸಂಶೋಧನೆ ನಡೆಸಬೇಕು. ಆ ಮೂಲಕ ಕಡಿಮೆ ನೀರಿನಲ್ಲಿ ಬೆಳೆ ಬೆಳೆಯುವುದರ ಜತೆಗೆ ರೈತರು ನೆಮ್ಮದಿಯಿಂದ ಇರುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಸಂವಾದವನ್ನೂ ಆಯೋಜಿಸಿ. ವಿ.ಸಿ ಫಾರ್ಮ್‌ನಲ್ಲಿ ರೈತ ಭವನ ಲೋಕಾರ್ಪಣೆಗೊಂಡಿದ್ದು, ಇಲ್ಲಿಯೇ ತರಬೇತಿ ಆಯೋಜಿಸಿ. ಅದಕ್ಕೆ ತಗಲುವ ವೆಚ್ಚವನ್ನು ವಿವಿಯೇ ಭರಿಸಲಿದೆ ಎಂದರು.
ಬದಲಾದ ಹವಾಮಾನ ಪರಿಸ್ಥಿತಿಯಲ್ಲಿ ಕೃಷಿಯಲ್ಲಿ ಉತ್ತಮ ಇಳುವರಿ ಪಡೆಯಲು ಜ್ಞಾನ, ವಿಜ್ಞಾನ ಹಾಗೂ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕಿದೆ. ಹಿಂದಿನ ಕಾಲಘಟ್ಟದಲ್ಲಿ ಪ್ರಕೃತಿ ನಮ್ಮ ಮೇಲೆ ಕರುಣೆ ತೋರಿಸಿ ಸರಿಯಾದ ಸಮಯಕ್ಕೆ ಮಳೆ ಬೆಳೆ ಆಗುತ್ತಿತ್ತು. ಆದರೆ ಇಂದಿನ ಕಾಲಘಟ್ಟದಲ್ಲಿ ಹವಮಾನ ವ್ಯವಸ್ಥೆ ಬದಲಾಗಿದೆ. ಸಂಶೋಧಕರು ಹವಾಮಾನ ಪರಿಸ್ಥಿತಿಗೆ ಅನುಗುಣವಾಗಿ ಬೆಳೆಯಬೇಕಿರುವ ತಳಿಗಳ ಬಗ್ಗೆ ಸಹ ಮಾಹಿತಿ ನೀಡುತ್ತಿದ್ದಾರೆ. ಕೃಷಿಯಲ್ಲಿ ಆಧುನಿಕ ಕೃಷಿ ತಂತ್ರಜ್ಞಾನವನ್ನು ಅಳವಡಿಸಿಕೊಂಡರೆ ಬೆಳೆದ ಬೆಳೆ ಕೈ ಸೇರಿ ರೈತರು ಆರ್ಥಿಕವಾಗಿ ಸದೃಢರಾಗುತ್ತಾರೆ ಎಂದು ಹೇಳಿದರು.
ಮಂಡ್ಯ ಜಿಲ್ಲೆ ಎಂದರೆ ರೈತರ ನಾಡು. ಆದರೆ ನಮ್ಮ ಜಿಲ್ಲೆಯ ರೈತರಿಗಿಂತ ಮಹಾರಾಷ್ಟ್ರ, ಬೆಳಗಾವಿ ಭಾಗದ ರೈತರೆ ಕೃಷಿಯಲ್ಲಿ ಹೆಚ್ಚಾಗಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಮುಂದಿದ್ದಾರೆ, ಬೆಳಗಾವಿ ಭಾಗದ ರೈತರು ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ 1 ಎಕರೆಗೆ 120 ಟನ್ ಕಬ್ಬು ಬೆಳೆಯುತ್ತಾರೆ. ಮಂಡ್ಯ ಜಿಲ್ಲಾ ಭಾಗದ ರೈತರು ಎಕರೆಗೆ 60-70 ಟನ್ ಅಷ್ಟೇ ಬೆಳೆಯುತ್ತಾರೆ. ಜಿಲ್ಲೆಯ ರೈತರು ಎಕರೆಗೆ ಹೆಚ್ಚು ಇಳುವರಿ ಗಳಿಸುವ ಸಂಶೋಧನೆ ಅಥವಾ ಪದ್ಧತಿಯನ್ನು ಅಳವಡಿಸಿಕೊಂಡು ಆರ್ಥಿಕವಾಗಿ ಬಲಾಢ್ಯರಾಗಬೇಕು ಎಂದು ಸಲಹೆ ನೀಡಿದರು.
ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಜಿಲ್ಲೆಯ ಒಟ್ಟಾರೆ ಭೂಭಾಗದಲ್ಲಿ ಶೇ.45 ರಷ್ಟು ಭಾಗ ಮಳೆಯಾಶ್ರಿತ ಪ್ರದೇಶವಾಗಿದೆ. ಕಬ್ಬು, ಭತ್ತ, ರಾಗಿ, ಹುರುಳಿ ಧಾನ್ಯಗಳನ್ನು ಬೆಳೆಯುತ್ತಾರೆ. ಹೀಗಾಗಿ ಕೃಷಿ ಇಲಾಖೆ ಹಾಗೂ ಕೃಷಿ ವಿವಿ ರೈತರಿಗೆ ನೆರವಾಗಬೇಕು. ಪ್ರಮುಖವಾಗಿ ಬೇಡಿಕೆಗೆ ತಕ್ಕಂತೆ ಬೆಳೆ ಹಾಕುವ ಸಲಹೆಯನ್ನು ರೈತರಿಗೆ ನೀಡಬೇಕು ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಆಹಾರವಿಲ್ಲದೇ ಮನುಷ್ಯ ಪ್ರತಿನಿತ್ಯದ ಕೆಲಸ ಮಾಡಲು ಹಾಗೂ ಜೀವಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಜಗತ್ತಿನಲ್ಲಿ ಕೃಷಿಗೆ ಪ್ರಥಮ ಸ್ಥಾನ ನೀಡಲಾಗಿದೆ. ಸನಾತನ ಕಾಲದಿಂದಲೂ ರೈತರು ಕೃಷಿ ಪದ್ಧತಿ ನಡೆಸಲಾಗುತ್ತಿದೆ. ಕೆಲವು ದಶಕಗಳ ಹಿಂದೆ ಭಾರತದಲ್ಲಿ ಆಹಾರದ ಕೊರತೆ ಇತ್ತು. ಆದರೆ ಇಂದು ಬೇರೆ ದೇಶಕ್ಕೆ ಕೊಡುವಷ್ಟು ಬೆಳೆದಿದ್ದೇವೆ. ಈ ನಡುವೆ ರಾಸಾಯನಿಕ ಬಳಕೆ ಹೆಚ್ಚಾಗುತ್ತಿರುವುದರಿಂದ ಮುಂದಿನ 30-40 ವರ್ಷದಲ್ಲಿ ಮಣ್ಣಿನ ಫಲವತತ್ತೆ ಹಾಳಾಗಿ ಆಹಾರದ ಕೊರತೆ ಮತ್ತೆ ಎದುರಾಗಬಹುದು. ಈ ನಿಟ್ಟಿನಲ್ಲಿ ಎಚ್ಚೆತ್ತುಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಕೃಷಿ ವಿವಿ ಕುಲಪತಿ ಡಾ.ಎಸ್.ವಿ.ಸುರೇಶ್, ಕೃಷಿ ವಿವಿ ವ್ಯವಸ್ಥಾಪಕ ಮಂಡಳಿ ಸದಸ್ಯರಾದ ಬಿ.ಎಸ್.ಉಲ್ಲಾಸ್, ಎನ್.ದಿನೇಶ್, ಡಾ.ಎಂ.ಚಂದ್ರೇಗೌಡ, ವಿ.ಸಿ ಫಾರ್ಮ್ ಕೃಷಿ ಮಹಾವಿದ್ಯಾಲಯದ ಡೀನ್(ಕೃಷಿ) ಡಾ.ಎಸ್.ಎಸ್.ಪ್ರಕಾಶ್, ಜಂಟಿ ಕೃಷಿ ನಿರ್ದೇಶಕ ಡಾ.ವಿ.ಎಸ್.ಅಶೋಕ್ ಇತರರಿದ್ದರು.