ಕೃಷಿಯಲ್ಲಿ ವೈಜ್ಞಾನಿಕತೆ ಅಳವಡಿಸಿಕೊಳ್ಳಬೇಕು

NANDAGUD UDFGATANE-6-2
Published on

ವಿಜಯವಾಣಿ ಸುದ್ದಿಜಾಲ ನಂದಗುಡಿ

ರೈತರಿಗೆ ಲಾಭದಾಯಕ ಕೃಷಿಯಾಗಬೇಕಾದರೆ ವೈಜ್ಞಾನಿಕತೆ ಅಳವಡಿಸಿಕೊಳ್ಳಬೇಕು. ಪೂರ್ವಜರು ಅನುಸರಿಸುತ್ತಿದ್ದ ಪದ್ಧತಿ ತೊರೆದು, ಸಮಗ್ರ ಕೃಷಿ, ಮೌಲ್ಯಧಾರಿತ ಸುಸ್ಥಿರ ಕೃಷಿಯ ಮೂಲಕ ರೈತರು ಲಾಭದತ್ತ ಮುನ್ನಡೆಯಲು ಸಾಧ್ಯ ಕೆಪಿಸಿಸಿ ಕಾರ್ಯದರ್ಶಿ ಬಿ.ಗೋಪಾಲ್ ಹೇಳಿದರು.

ಹಿಂಡಿಗನಾಳಯಲ್ಲಿ ಬೆಂಗಳೂರಿನ ಕೃಷಿ ಮಹಾವಿಶ್ವವಿದ್ಯಾಲಯ ಗಾಂಧಿ ಕೃಷಿ ವಿಜ್ಞಾನ ಕೇಂದ್ರ, ಹೊಸಕೋಟೆ ಕೃಷಿ, ತೋಟಗಾರಿಕೆ, ಮೀನುಗಾರಿಕೆ ಹಾಗೂ ಪಶು ಸಂಗೋಪನೆ ಇಲಾಖೆ ಮತ್ತು ನಂದಗುಡಿ ರೈತ ಸಂಪರ್ಕ ಕೇಂದ್ರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಚಾರ ಗೋಷ್ಠಿ ಹಾಗೂ ಕೃಷಿ ಮೇಳ, ವಸ್ತು ಪ್ರದರ್ಶನದಲ್ಲಿ ಮಾತನಾಡಿದರು. ಜನಸಂಖ್ಯೆ ಹೆಚ್ಚಾದಂತೆ ಅವಿಭಕ್ತ ಕುಟುಂಬಗಳು ಇಬ್ಬಾಗವಾಗಿ ದೊಡ್ಡ ರೈತರು ಅತೀ ಸಣ್ಣ ರೈತರಾಗಿ ಬದಲಾವಣೆಯಾಗುತ್ತಿದ್ದಾರೆ. ರೈತರಿಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಹೆಚ್ಚು ಖರ್ಚಾಗುತ್ತಿದೆ. ಬೆಳೆಯ ಮೌಲ್ಯಕ್ಕಿಂತ ಮೂರು ಪಟ್ಟು ಹಣ ವ್ಯಯವಾಗುತ್ತಿದ್ದು, ರೈತರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದೆ ಎಂದು ಹೇಳಿದರು.

3 ತಿಂಗಳು ವಾಸ್ತವ್ಯ: ಎಸ್‌ಎಫ್‌ಸಿಎಸ್ ನಿರ್ದೇಶಕ ಎಚ್.ಕೆ.ನಾರಾಯಣಗೌಡ ಮಾತನಾಡಿ, ರೈತರು ಬೇಸಾಯದಲ್ಲಿರುವ ಪರಿಣಿತೆಯನ್ನು ಕಲಿಯುವ ಸಲುವಾಗಿ 3 ತಿಂಗಳು ವಿದ್ಯಾರ್ಥಿಗಳು ಗ್ರಾಮದಲ್ಲೇ ವಾಸ್ತವ್ಯ ಹೂಡಿದ್ದು, ರೈತರಿಗೆ ವೈಜ್ಞಾನಿಕ, ಸಮಗ್ರ ಹಾಗೂ ಮೌಲ್ಯಧಾರಿತ ಕೃಷಿಯ ಬಗ್ಗೆ ಅರಿವು ಮೂಡಿಸಲು ಸಹಕಾರಿಯಾಗಿದೆ ಎಂದು ತಿಳಿಸಿದರು. ಜೀವನಕ್ಕೆ ಮೊದಲ ಆಧಾರವೇ ಆಹಾರ. ಇಡೀ ಜಗತ್ತು ಕೃಷಿಯ ಮೇಲೆ ಅವಲಂಬಿತವಾಗಿದೆ. ಹಸಿರು ಕ್ರಾಂತಿಯಿಂದಾಗಿ ಭಾರತವು ಕೃಷಿಯಲ್ಲಿ ಸ್ವಾವಲಂಬಿಯಾಗಿದೆ ಎಂದು ಗ್ರಾಪಂ ಅಧ್ಯಕ್ಷೆ ಸರೋಜಮ್ಮ ಜಯರಾಮ್ ಹೇಳಿದರು.

ಕೃಷಿ ವಸ್ತು ಪ್ರದರ್ಶನ:

ಅಂತಿಮ ವರ್ಷದ ವಿದ್ಯಾರ್ಥಿಗಳಿಂದ ಕೃಷಿವಸ್ತು ಪ್ರದರ್ಶನದಲ್ಲಿ ವಿವಿಧ ಬಗೆಯ ತರಕಾರಿ, ಕಾಯಿಪಲ್ಲೆ, ಸೊಪ್ಪು, ರಾಗಿ, ಮೇವಿನ ಬೆಳೆಗಳು, ಹೂ, ಮೀನು ಸಾಕಾಣಿಕೆ, ಡ್ರೋನ್ ಔಷಧ ಸಿಂಪಡಣೆಯ ಬಗ್ಗೆ ಪ್ರಾತ್ಯಕ್ಷಿಕೆ ನಡೆಯಿತು. ವಿವಿಧ ಇಲಾಖೆಗಳಿಂದ ರೈತರಿಗೆ ಸಿಗುವ ಸವಲತ್ತು, ಸಲಕರಣೆಗಳು, ರೋಗಕ್ಕೆ ಸಿಂಪಡಿಸುವ ಕೀಟ ನಾಶಕಗಳಿಗೆ ಸಂಬಂಧಪಟ್ಟಂತೆ ಹಲವು ಮಳಿಗೆ ತೆರೆದು ವಸ್ತು ಪ್ರದರ್ಶನದಿಂದ ರೈತರಿಗೆ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net