ಮೈಸೂರಿನಲ್ಲಿ ಕೃಷಿ ಪ್ರದರ್ಶನ; ನಿನ್ನಿಥಾಯ್ ಹಲಸು ಗಿಡಕ್ಕೆ ಮುಗಿಬಿದ್ದ ರೈತರು

Krishi 22 Feb 20
Published on
ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ವಿಜಯವಾಣಿ ಮತ್ತು ದಿಗ್ವಿಜಯ 247 ಸುದ್ದಿವಾಹಿನಿ ಶುಕ್ರವಾರದಿಂದ 3 ದಿನ ಆಯೋಜಿಸಿರುವ ಕೃಷಿ ಮೇಳದಲ್ಲಿ ಹಲಸಿನ ವಿವಿಧ ತಳಿಯ ಗಿಡಗಳು ಗಮನ ಸೆಳೆಯುತ್ತಿವೆ.

ಹಲಸಿನ ಹಣ್ಣಿನ ವಿವಿಧ ತಳಿಗಳನ್ನು ಸಂರಕ್ಷಣೆ ಮಾಡಿರುವ ಪುತ್ತೂರಿನ ಆಲೆಕಲ್ಲುಮಜಲು ಗ್ರಾಮದ ನಿನ್ನಿಕಲ್ಲು ನರ್ಸರಿ ಮಾಲೀಕ ಅನಿಲ್ ಅಲಿಯಾಸ್ ಜಾಕ್ ಅನಿಲ್ ಕೃಷಿಮೇಳದಲ್ಲಿ ಎರಡೇ ವರ್ಷದಲ್ಲಿ ಕುಂಡದಲ್ಲಿದ್ದಾಗಲೇ ಕಾಯಿ ಬಿಡುವ ಥಾಯ್ಲೆಂಡ್ ತಳಿಯ ನಿನ್ನಿಥಾಯ್ ಗಿಡವನ್ನು ಪ್ರದರ್ಶನಕ್ಕಿಟ್ಟಿದ್ದು, ಭರ್ಜರಿ ವ್ಯಾಪಾರ ಮಾಡುತ್ತಿದ್ದಾರೆ. ಗಿಡ್ಡ ಗಿಡಗಳ ಜಾತಿಯ ಈ ತಳಿ ಇಡೀ ದೇಶದಲ್ಲಿ ಅನಿಲ್ ಬಳಿ ಮಾತ್ರ ಇರುವುದು ವಿಶೇಷ.

ನಿನ್ನಿಥಾಯ್ ವಿಶೇಷ: ಇದನ್ನು ಕುಂಡದಲ್ಲಿ ಬೆಳೆಸಬಹುದಾಗಿದ್ದು, ಗಿಡ ಹಾಕಿದ ಎರಡೇ ವರ್ಷಕ್ಕೆ 4 ರಿಂದ 6 ಕೆ.ಜಿ.ವರೆಗೆ ತೂಗುವ ರುಚಿಯಾದ ಹಣ್ಣುಗಳನ್ನು ಬಿಡುತ್ತದೆ. 5 ರಿಂದ 6 ಅಡಿ ಎತ್ತರದಲ್ಲಿ ಗೊಂಚಲು ಗೊಂಚಲಾಗಿ ಕಾಯಿ ಬರುವ ಈ ಗಿಡ ಅತಿ ಅಪರೂಪವಾಗಿದೆ. ಅಂಟಿಲ್ಲದೆ ಸುಲಭವಾಗಿ ಸುಲಿಯಬಹುದಾದ ಹಣ್ಣಾಗಿದ್ದು, ಸಾವಯವ ಪದ್ಧತಿಯಲ್ಲಿ ಬೆಳೆದು ಸಾಧನೆ ಮಾಡಿದ್ದಾರೆ.

ಅನಿಲ್ ಅವರ ಬಳಿಕ 20 ಜಾತಿಯ ವಿವಿಧ ತಳಿಗಳ ಹಲಸಿನ ಗಿಡಗಳಿದ್ದು, ಚಂದ್ರ ಹಲಸು ಪ್ರಮುಖವಾಗಿದೆ. ಅರ್ಧ ಕೆ.ಜಿ.ಯಿಂದ 50 ಕೆ.ಜಿಗಳ ವರೆಗೆ ತೂಗುವ ಹಣ್ಣುಗಳನ್ನು ಬೆಳೆದು ಸಾಧನೆ ಮಾಡಿದ್ದಾರೆ. ದೇಶದ ವಿವಿಧೆಡೆ ಜರುಗುವ ಕೃಷಿ ಮೇಳಗಳಲ್ಲಿ ಭಾಗವಹಿಸಿ ಬಹುಮಾನ ಗೆಲ್ಲುವ ಮೂಲಕ ಜಾಕ್ ಅನಿಲ್ ಎಂದೇ ಹೆಸರುವಾಸಿಯಾಗಿದ್ದಾರೆ. ಇವರ ಬಳಿ ಇರುವ ಎಲ್ಲ ತಳಿಗಳಿಗೆ ಬೇಡಿಕೆಯಿದ್ದು, ದೇಶ ವಿದೇಶಗಳಿಂದ ಬಂದು ಗಿಡಗಳನ್ನು ಖರೀದಿಸುತ್ತಿದ್ದಾರೆ.

ದೇಸಿ ತಳಿ ಹಲಸಿನ ಸಸಿಗೆ ಬೇಡಿಕೆ

ದೇಸಿ ತಳಿಯಾದ ಚಂದ್ರ ಹಲಸು ಗಿಡವೊಂದಕ್ಕೆ 200 ರೂ., ನಿನ್ನಿಥಾಯ್ ಗಿಡಕ್ಕೆ 250 ರೂ.ಗಳನ್ನು ನಿಗದಿ ಮಾಡಲಾಗಿದೆ. ಕೃಷಿ ಮೇಳಕ್ಕೆ ಬಂದ ರೈತರು ಮುಗಿಬಿದ್ದು ಗಿಡಗಳನ್ನು ಕೊಂಡೊಯ್ಯುತ್ತಿದ್ದರು. ಪಾಟ್​ನಲ್ಲಿ ಬೆಳೆಯಬಹುದು ಎಂಬ ವಿಚಾರ ತಿಳಿದ ಕೆಲ ನಗರ ನಿವಾಸಿಗಳು ಸೇರಿ ಹಲವು ರೈತರು ನಿನ್ನಿಥಾಯ್ ಗಿಡಗಳನ್ನು ಖರೀದಿಸಿದರು.

ನನ್ನ ಬಳಿ ಇರುವುದೊಂದೆ ವಿದೇಶಿ ತಳಿ. ಆದರೆ ಹಲವು ದೇಸಿ ತಳಿಗಳನ್ನು ಸಂರಕ್ಷಣೆ ಮಾಡಿದ್ದು, ಚಂದ್ರ ಹಲಸಿಗೆ ದೇಶದ ವಿವಿಧ ಭಾಗಗಳಿಂದ ಸಾಕಷ್ಟು ಬೇಡಿಕೆ ಇದೆ. ಖುದ್ದಾಗಿ ಬಂದು ಗಿಡಗಳನ್ನು ಖರೀದಿಸುತ್ತಾರೆ. | ಜಾಕ್ ಅನಿಲ್ ನಿನ್ನಿಕಲ್ಲು ನರ್ಸರಿ ಮಾಲೀಕ

| ಶಿವಶಂಕರ್ ಎಂ.ಹೆಬ್ಬಳ್ಳ ಮೈಸೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net