

ಬೆಳ್ತಂಗಡಿ: ಪಾರಂಪರಿಕ ಪದ್ಧತಿಯನ್ನು ವೈಜ್ಞಾನಿಕ ದೃಷ್ಟಿಯಿಂದ ಅವಲೋಕಿಸುವ ಗುಣ ನಮ್ಮಲ್ಲಿ ಬಂದರೆ ನಿಖರತೆಯಿಂದ ಕೃಷಿ ಕಾರ್ಯಗಳನ್ನು ಮಾಡಬಹುದುದು ಎಂದು ಪುತ್ತೂರು ವಿವೇಕಾನಂದ ಇಂಜಿನಿಯರ್ ಕಾಲೇಜಿನ ಉಪನ್ಯಾಸಕ ಡಾ.ಅಜಿತ್ ಆಠವಳೆ ಹೇಳಿದರು.
ಬೆಳ್ತಂಗಡಿ ತಾಲೂಕು ಚಿತ್ಪಾವನ ಬ್ರಾಹ್ಮಣ ಸಂಘದ ವತಿಯಿಂದ ಸೂಳಬೆಟ್ಟು ಬರಯ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವಠಾರದಲ್ಲಿ ಕೃಷಿ ವಿಚಾರ ವಿನಿಮಯ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು.
ಸುಲ್ಕೇರಿಯ ಕೃಷಿಕ ಪ್ರಕಾಶ ಜೋಶಿ ಅವರು ವಿವಿಧ ತರಕಾರಿ, ಹೂ ಬೆಳೆಗಳನ್ನು ವೈಜ್ಞಾನಿಕವಾಗಿ ಬೆಳೆಸುವ ರೀತಿ, ಕಸಿ ಕಟ್ಟುವ ಬಗೆ ಹಾಗೂ ಜೇನು ಕೃಷಿ ಕುರಿತು ಮಾಹಿತಿ ನೀಡಿದರು. ಪುತ್ತೂರು ಅಂಬಿಕಾ ಕಾಲೇಜಿನ ಉಪನ್ಯಾಸಕ ಚಂದ್ರಕಾಂತ ಗೋರೆ ಅಪೂರ್ವ ಔಷಧೀಯ ಭತ್ತದ ತಳಿಗಳನ್ನು ಸಂಗ್ರಹಿಸಿ ತನ್ನ ಒಂದು ಎಕರೆ ಜಮೀನಿನಲ್ಲಿ ಗದ್ದೆ ಬೇಸಾಯ ನಿರ್ವಹಿಸಿದ ಕುರಿತು ಮಾಹಿತಿ ನೀಡಿದರು. 42 ವರ್ಷಗಳಿಂದ ಅಡಕೆ ತೋಟಕ್ಕೆ ಸ್ವತಃ ಔಷಧ ಸಿಂಪಡಣೆ ಮಾಡುತ್ತಿರುವ ಸುರೇಶ್ ಗೋಖಲೆ ಔಷಧ ಸಿಂಪಡಣೆ ಕುರಿತು ಮಾಹಿತಿ ನೀಡಿದರು.
ಸಂಘದ ಅಧ್ಯಕ್ಷ ತ್ರಿವಿಕ್ರಮ ಕೇಳ್ಕರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ನಾರಾಯಣ ಫಡಕೆ ವಂದಿಸಿದರು.