ನೇರಳೆ ಹಣ್ಣಿಗೆ ಭರ್ಜರಿ ಡಿಮ್ಯಾಂಡ್!

dj clk nerale
Published on

ಕೊರಲಕುಂಟೆ ತಿಪ್ಪೇಸ್ವಾಮಿ ಚಳ್ಳಕೆರೆ
ಆಯುರ್ವೇದದಲ್ಲಿ ಔಷಧ ಸ್ಥಾನ ಪಡೆದಿರುವ ನೇರಳೆ ಹಣ್ಣು ಸದೃಢ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಅತ್ಯುತ್ತಮವಾದುದು. ಹತ್ತಾರು ಔಷಧ ಗುಣ ಹೊಂದಿರುವ ಈ ಹಣ್ಣಿಗೆ ಇದೀಗ ಮಾರುಕಟ್ಟೆಯಲ್ಲಿ ಭರ್ಜರಿ ಡಿಮ್ಯಾಂಡ್!

ರಾಸಾಯನಿಕ ಗೊಬ್ಬರ, ಕೀಟನಾಶಕದ ಬಳಕೆ ಇಲ್ಲದೆ ನೈಸರ್ಗಿಕವಾಗಿ ವರ್ಷಕ್ಕೊಮ್ಮೆ ಫಲ ನೀಡುವ ಬಹು ಅಪರೂಪದ ಹಣ್ಣು. ಮೇ-ಜೂನ್ ತಿಂಗಳಲ್ಲಿ ಮಾತ್ರ ಇದರ ರುಚಿ ಸವಿಯಲು ಸಾಧ್ಯ.

ಮಳೆಯಾಧಾರಿತ ತಾಲೂಕಿನ ಕೃಷಿ ಚಟುವಟಿಕೆಗಳಲ್ಲಿ ನಷ್ಟ ಅನುಭವಿಸುತ್ತಿರುವ ರೈತರು, ಪರ್ಯಾಯ ಬೆಳೆ ಮೊರೆ ಹೋಗುತ್ತಿದ್ದು, ಕಡಿಮೆ ಖರ್ಚು ಮತ್ತು ಅಧಿಕ ಲಾಭ ತಂದುಕೊಡುತ್ತಿರುವ ನೇರಳೆಯತ್ತ ಒಲವು ತೋರುತ್ತಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ವಿವಿಧೆಡೆ ನೂರಾರು ಮಂದಿ ರೈತರು, ನೇರಳೆ ಕೃಷಿಯತ್ತ ಹೆಚ್ಚು ಆಸಕ್ತಿ ಬೆಳೆಸಿಕೊಂಡಿದ್ದು, ಎಕರೆಯಲ್ಲಿ ನೂರಾರು ಗಿಡಗಳನ್ನು ಬೆಳೆಸಿ, ಫಲ ಪಡೆಯುತ್ತಿದ್ದಾರೆ.

20 ಅಡಿ ಅಂತರ, 4 ಅಡಿ ಆಳ ಗುಂಡಿ ತೋಡಿ, ಹೊಂಗೆ ಸೊಪ್ಪು ಹಾಕಿ ನಾಟಿ ಮಾಡಿದರೆ ಬೇಗ ಫಲ ನೀಡುತ್ತವೆ.

ಹೂವು ಕಟ್ಟುವ ಸಮಯದಲ್ಲಿ ಯಾವುದೇ ಕೀಟ ಬಾಧೆ ತಾಕದಂತೆ ಕ್ಲೊರೋಪೆರಿಪಾಸ್ ಸಿಂಪಡಣೆ ಮಾಡಬೇಕು. ಬಳಿಕ ಕಡಿಮೆ ಖರ್ಚು ಮತ್ತು ಕಡಿಮೆ ನೀರು ಬಳಕೆಯಲ್ಲಿ ಪ್ರತಿ ಗಿಡವೂ ಫಲವತ್ತಾಗಿ ಬೆಳೆದು ಉತ್ತಮ ಫಸಲು ನೀಡುತ್ತವೆ.

ಆರೋಗ್ಯ ದೃಷ್ಟಿಯಿಂದ ಹಣ್ಣು ಖರೀದಿ ಮಾಡಲು ಗ್ರಾಹಕರು ತೋಟಗಳಿಗೆ ಲಗ್ಗೆ ಹಾಕುವುದು ಇತ್ತೀಚೆಗೆ ಸಾಮಾನ್ಯವಾಗಿದೆ.

ಸಕ್ಕರೆ, ರಕ್ತದೊತ್ತಡ, ಮಲಬದ್ಧತೆ, ವಾಕರಿಕೆ (ವಾಂತಿ), ಬೇಧಿಸಾರ ಸೇರಿ ಹೃದಯ ಸಂಬಂಧಿ ಕಾಯಿಲೆಗೆ ಅನುಕೂಲ ಇರುವ ಪೌಷ್ಟಿಕ ಹಣ್ಣು. ಇದನ್ನು ಬಳಸುವುದರಿಂದ ಜೀರ್ಣಕ್ರಿಯೆಯೂ ಉತ್ತಮವಾಗಿರುತ್ತದೆ.

ಮಾರಾಟ ಜೋರು: ಚಳ್ಳಕೆರೆಯ ನೆಹರು ವೃತ್ತ ಸೇರಿ ತಾಲೂಕು ಕಚೇರಿ ಮುಂಭಾಗ, ಸಂಗೊಳ್ಳಿರಾಯಣ್ಣ ರಸ್ತೆ ಮತ್ತು ವಾಲ್ಮೀಕಿ ವೃತ್ತದಲ್ಲೂ

ಬುಟ್ಟಿಗಳಲ್ಲಿ ನೇರಳೆ ಹಣ್ಣು ಮಾರಾಟ ಮಾಡುವವರ ಸಂಖ್ಯೆ ಹೆಚ್ಚು ಆಗಿದೆ. ನಮ್ಮ ತಾಲೂಕಿನಲ್ಲಿ ನೇರಳೆ ಬೆಳೆ ಬಹಳ ಕಡಿಮೆ ಇದೆ.

ಹಿರಿಯೂರು ಮತ್ತು ಬಳ್ಳಾರಿ ಭಾಗದ ರೈತರಿಂದ ಕೆಜಿಗೆ 180 ರೂ. ನಂತೆ ಖರೀದಿಸಿ 200 ರೂ.ನಂತೆ ದಿನಕ್ಕೆ 25ರಿಂದ 30 ಕೆಜಿ ಮಾರಾಟ ಮಾಡಿಕೊಳ್ಳುತ್ತೇವೆ.

ಮಧುಮೇಹ ಸೇರಿ ಇತರ ರೋಗಬಾಧಿತರು ಹೆಚ್ಚಾಗಿ ಖರೀದಿ ಮಾಡಿಕೊಳ್ಳುತ್ತಾರೆ ಎನ್ನುತ್ತಾರೆ ರಸ್ತೆಬದಿ ವ್ಯಾಪಾರಸ್ಥರಾದ ದೊಡ್ಡೇರಿ ಶಾಂತಮ್ಮ, ರತ್ನಮ್ಮ, ಶಿವಮ್ಮ, ತಿಮ್ಮಕ್ಕ ಇತರರು.

ಕೆಜಿಗೆ 200 ರೂ. ಬೆಲೆ: ಬೆಂಗಳೂರಿನ ಜಿಕೆವಿಕೆಯಿಂದ ದೂಪದಾಳ್, ಚಿಂತಾಮಣಿ, ಆರ್ಬಾವಿ ಎಜಿಜಿ-85 ಹೀಗೆ ಮೂರು ತಳಿಯ 90 ನೇರಳೆ ಗಿಡಗಳನ್ನು 2017ರಲ್ಲಿ ತಂದು ಒಂದು ಎಕರೆಯಲ್ಲಿ ಬೆಳೆಯಲಾಗಿದೆ ಎನ್ನುತ್ತಾರೆ ಮೀರಸಾಬಿಹಳ್ಳಿಯ ರೈತ ಮಹಿಳೆ ಬಿ.ಮಮತಾ.

ಅಡಕೆ ಬೆಳೆಗಿಂತ ನೇರಳೆ ಬೆಳೆಯಲ್ಲಿ ವೆಚ್ಚ ಕಡಿಮೆ, ಲಾಭ ಅಧಿಕ. ಒಂದು ಕೆಜಿಗೆ 200 ರೂ. ನಂತೆ ದಿನಕ್ಕೆ 200 ಕೆಜಿ ಹಣ್ಣನ್ನು ಸ್ಥಳೀಯ ವ್ಯಾಪಾರಸ್ಥರು ಖರೀದಿ ಮಾಡಿಕೊಳ್ಳುತ್ತಾರೆ.

ನಾಟಿ ಮಾಡಿದಾಗಿನಿಂದ ಫಸಲಿನ ತನಕ ಗಿಡಗಳಿಗೆ ಯಾವುದೇ ರೋಗ ಬಾಧೆಯು ತಾಕಿಲ್ಲ. ಆದರೆ, ಹಣ್ಣು ಕಟಾವು ಮಾಡುವುದೇ ಸ್ವಲ್ಪ ಕಷ್ಟದ ಕೆಲಸ ಎನ್ನುತ್ತಾರೆ ಮಮತಾ.

ರಾಜ್ಯದ ಯಾವ ಭಾಗದಲ್ಲೂ ನೇರಳೆ ಫಸಲನ್ನು ಒಂದು ಪ್ರಮುಖ ಬೆಳೆಯಾಗಿ ಬೆಳೆಯುತ್ತಿಲ್ಲ. ಇದರಿಂದಲೂ ಈ ಹಣ್ಣಿಗೆ ಬೇಡಿಕೆ ಬಹಳ ಇದೆ. ತಾಲೂಕಿನಲ್ಲಿ 20 ಎಕರೆ ಭೂಮಿಯಲ್ಲಿ ನೇರಳೆ ಫಸಲಿದೆ. ಕಡಿಮೆ ಖರ್ಚು ಮತ್ತು ಮಿತ ನೀರಿನ ಬಳಕೆಯಲ್ಲಿ ಉತ್ತಮ ಫಸಲು ಬೆಳೆದುಕೊಳ್ಳಬಹುದು. ಖಾತ್ರಿ ಯೋಜನೆಯಡಿಯಲ್ಲಿ ನೇರಳೆ ಬೆಳೆದುಕೊಳ್ಳಲು ಸರ್ಕಾರದ ಅನುದಾನ ಸಿಗಲಿದೆ.ಡಾ.ಆರ್.ವಿರೂಪಾಕ್ಷಪ್ಪ, ಸ.ನಿರ್ದೇಶಕ, ತೋಟಗಾರಿಕೆ ಇಲಾಖೆ, ಚಳ್ಳಕೆರೆ ಕರಿಮಣ್ಣಿನ ನೆಲ ಅಂದರೆ ಕರುನಾಡು. ಇಲ್ಲಿ ಕಪ್ಪು ಬಣ್ಣದ ಹಣ್ಣುಗಳಿಗೆ ಜಗತ್‌ಪ್ರಸಿದ್ಧಿ ಇದೆ. ಹಾಗಾಗಿ ನೇರಳೆ ಹಣ್ಣು ಈ ಮಣ್ಣಿನ ಗುಣವನ್ನು ಹೊತ್ತುಕೊಂಡಿರುವ ಫಲವಾಗಿದೆ. ಆರೋಗ್ಯಕ್ಕೆ ಬಹಳ ಉಪಯುಕ್ತ ಹಣ್ಣು ಇದಾಗಿದೆ.ಡಾ.ವಡ್ಡಗೆರೆ ನಾಗರಾಜಯ್ಯ, ಚಿಂತಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net