ಕೃಷಿ ಗಣತಿ ದತ್ತಾಂಶ ಪ್ರಗತಿ ಕಡಿಮೆ: ಜಿಲ್ಲಾಧಿಕಾರಿ ಡಾ.ಕುಮಾರ ಅತೃಪ್ತಿ

Agricultural Census Coordination Committee Meeting Mandya
Published on

ಮಂಡ್ಯ: ಹನ್ನೊಂದನೇ ಕೃಷಿ ಗಣತಿಯ ದತ್ತಾಂಶ ಪ್ರಗತಿಯು ಕಡಿಮೆ ಇದೆ. ಈ ಹಿನ್ನೆಲೆಯಲ್ಲಿ ಎಲ್ಲ ತಾಲೂಕಿನ ತಹಸೀಲ್ದಾರ್‌ಗಳು ಕೂಡಲೇ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಬೆಳೆ ಕಟಾವು, ಕೃಷಿ ಅಂಕಿ ಅಂಶ ಹಾಗೂ 11ನೇ ಕೃಷಿ ಗಣತಿಯ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 11ನೇ ಕೃಷಿ ಗಣತಿಯ ಎರಡನೇ ಹಂತದ ಕಾರ್ಯವು ಈಗಾಗಲೇ ಜಿಲ್ಲೆಯಾದ್ಯಂತ ಎಲ್ಲ ತಾಲೂಕಿನಲ್ಲಿ ಪ್ರಾರಂಭವಾಗಿದೆ. ಈ ಸಂಬಂಧ ಪ್ರಕ್ರಿಯೆ ಕೈಗೊಳ್ಳಲು ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ರಾಜಸ್ವ ನಿರೀಕ್ಷಕರಿಗೆ ತರಬೇತಿ ನೀಡಲಾಗಿರುತ್ತದೆ. ಹಿಡುವಳಿದಾರರು ಮತ್ತು ಸರ್ವೇ ನಂಬರ್‌ವಾರು 2021-22ರ ಅವಧಿಯಲ್ಲಿ ಸಾಗುವಳಿ ಹಿಡುವಳಿದಾರ ಭೂಮಿಯ ಬಳಕೆಯ ವಿವರದ ವಿಸ್ತೀರ್ಣವನ್ನು ನಿಗದಿತ ಕಾಲಂ ಗಳಲ್ಲಿ ಪರಿಶೀಲಿಸಿ ಅಳವಡಿಸಬೇಕು ಎಂದರು.

ಹಿಡುವಳಿವಾರು ಬೆಳೆದ ಒಟ್ಟು ಬೆಳೆಗಳ ವಿವರವನ್ನು ಕುರಿತು ಮಾಹಿತಿಯನ್ನು ವೆಬ್ ಆಧಾರಿತ ಅಥವಾ ಮೊಬೈಲ್ ಆ್ಯಪ್ ಮೂಲಕ ಕೈಗೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಶೇ.34ರಷ್ಟು ಅಂದರೆ 294 ಗ್ರಾಮ ಮತ್ತು 1,57,000 ಹಿಡುವಳಿದಾರರು ಎರಡನೇ ಹಂತದ 11ನೇ ಕೃಷಿ ಗಣತಿಯ ಕ್ಷೇತ್ರ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ. ಗ್ರಾಮ ಆಡಳಿತ ಅಧಿಕಾರಿಗಳು ಗಣತಿದಾರರಾಗಿ ಹಾಗೂ ರಾಜಸ್ವ ನಿರೀಕ್ಷಕರು ಮೇಲ್ವಿಚಾರಕರಾಗಿ ಮೇಲ್ವಿಚಾರಣೆಯನ್ನು ನಡೆಸಿ ಗ್ರಾಮವಾರು ಮತ್ತು ಸರ್ವೇ ನಂಬರ್ ವಾರು ಹಿಡುವಳಿದಾರರ ಭೂಮಿಯ ಬಳಕೆಯ ವಿವರದ ವಿಸ್ತೀರ್ಣವನ್ನು ಮತ್ತು ಬೆಳೆದ ಒಟ್ಟು ಬೆಳೆಗಳ ವಿವರವನ್ನು ಪರಿಶೀಲಿಸಿ ಅನುಮೋದಿಸಬೇಕು ಎಂದು ಸೂಚನೆ ನೀಡಿದರು.

ಪ್ರತಿ ವರ್ಷ ಋತುವಾರ ಬೆಳೆ ವಿಮಾ ಯೋಜನೆ ಅಡಿ ಅಧಿಸೂಚಿತ ಬೆಳೆಗೆ ಹೋಬಳಿವಾರು ಗ್ರಾಮ ಪಂಚಾಯಿತಿ ಅವರು ಬೆಳೆಕಟ್ಟವು ಪ್ರಯೋಗ ಯೋಜಿಸಲಾಗುತ್ತದೆ. 2024-25ನೇ ಮುಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆಯಡಿ ಬೆಳೆಕಟಾವು ಪ್ರಯೋಗಗಳು ನಮೂನೆ-1 ಪೂರ್ಣಗೊಂಡಿದೆ. ಬೆಳೆ ಕಟಾವು ಪ್ರಯೋಗಗಳ ಬೆಳೆವಾರು ನಮೂನೆ-2 ರಲ್ಲಿ ಬಾಕಿ ಉಳಿದಿರುವ ಪ್ರಯೋಗವನ್ನು ಯಾವುದೇ ವಿಳಂಬ ಮಾಡದೆ ಆದಷ್ಟು ಬೇಗ ಪೂರ್ಣಗೊಳಿಸಿ ಎಂದರು.

ಪ್ರತಿ ವರ್ಷವೂ ಬೆಳೆ ಸಮೀಕ್ಷೆಯನ್ನು ಜಿಪಿಎಸ್ ಆಧಾರಿತ ಮೊಬೈಲ್ ಆ್ಯಪ್ ಮೂಲಕ ಪ್ರತಿ ಫ್ಲಾಟ್‌ಗಳ ಬೆಳೆ ಸಮೀಕ್ಷೆ ನಡೆಸಿ, ಇದರಿಂದ ಬಂದ ದತ್ತಾಂಶಗಳನ್ನು ಮೇಲ್ವಿಚಾರಕರು ಪರಿಶೀಲನೆ ಮಾಡಿ ಅನುಮೋದಿಸಿರುತ್ತಾರೆ. ಬೆಳೆ ಸಮೀಕ್ಷೆಯ ಬೆಳೆವಾರು ದತ್ತಾಂಶಗಳನ್ನು ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಸಮನ್ವಯದೊಂದಿಗೆ ತಾಲೂಕು ಮಟ್ಟದಲ್ಲಿ ಬೆಳೆ ಕ್ಷೇತ್ರ ವರದಿಯನ್ನು ತಯಾರಿಸಿ ತಾಲೂಕು ಮಟ್ಟದ ಸಮನ್ವಯ ಸಮಿತಿಯಿಂದ ಅನುಮೋದನೆಗೊಂಡ ವರದಿಯನ್ನು ದೃಢೀಕರಿಸಿ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದರು.

2024-25ನೇ ಸಾಲಿನ ಮುಂಗಾರು ಋತುವಿನ ಬೆಳೆ ಸಮೀಕ್ಷೆಯ ವರದಿಯನ್ನು ಪರಿಶೀಲಿಸಿದಾಗ ಅಕ್ಟೋಬರ್ ಮಾಹಿತಿಯಲ್ಲಿ ಬಿತ್ತನೆಯಾಗಿರುವ ಹಿಂಗಾರು ಋತುವಿನ ಹುರುಳಿ ಬೆಳೆಯನ್ನು ಮುಂಗಾರು ಋತುವಿನ ಬೆಳೆ ಸಮೀಕ್ಷೆಯಲ್ಲಿ ಜುಲೈ ಮತ್ತು ಆಗಸ್ಟ್ ಮಾಹಿತಿ ಎಂದು ಖಾಸಗಿ ನಿವಾಸಿಗಳು ಬೆಳೆ ಸಮೀಕ್ಷೆ ಆ್ಯಪ್‌ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಮೇಲ್ವಿಚಾರಕರು ಪರಿಶೀಲನೆ ಮಾಡದೆ ಅನುಮೋದನೆ ನೀಡಿರುತ್ತಾರೆ. ಆದ್ದರಿಂದ ಖಾಸಗಿ ನಿವಾಸಿಗಳಿಗೆ ಬೆಳೆ ಸಮೀಕ್ಷೆ ಕೈಗೊಳ್ಳುವ ಸಂದರ್ಭದಲ್ಲಿ ಋತುಗಳಿಗೆ ಅನುಗುಣವಾಗಿ ಬೆಳೆಗಳ ಬಿತ್ತನೆ ದಿನಾಂಕವನ್ನು ನಮೂದಿಸಲು ಹಾಗೂ ಮೇಲ್ವಿಚಾರಕರು ಈ ಬಗ್ಗೆ ಪರಿಶೀಲನೆ ಮಾಡಿ ಅನುಮೋದನೆ ನೀಡಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೇಶವಮೂರ್ತಿ, ಕೆಆರ್‌ಎಸ್‌ನ ಆಧುನೀಕರಣ ಮತ್ತು ಮಧ್ಯಮ ನೀರಾವರಿ ಯೋಜನೆಗಳ ವೃತ್ತ ಸಹಾಯಕ ಇಂಜಿನಿಯರ್ ಎಂ.ವಿಶ್ವನಾಥ, ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ್, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕಚೇರಿಯ ಸಹಾಯಕ ನಿರ್ದೇಶಕಿ ಸೌಮ್ಯಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net