ಮೆಕ್ಕೆಜೋಳ ಬಿತ್ತನೆ ಕಾರ್ಯ ಆರಂಭ

29myk1a
Published on

ಮಾಯಕೊಂಡ: ಮಾಯಕೊಂಡ ಹೋಬಳಿಯ ಹಲವು ಗ್ರಾಮಗಳಲ್ಲಿ ಮುಂಗಾರು ಹಂಗಾಮಿನ ಮೆಕ್ಕೆಜೋಳ ಬಿತ್ತನೆ ಕಾರ್ಯವನ್ನು ರೈತರು ಆರಂಭಗೊಳಿಸಿದ್ದಾರೆ.

ಈ ಬಾರಿ ಮಳೆ ಬೇಗ ಪ್ರಾರಂಭವಾಗಿದ್ದರಿಂದ ಕೃಷಿಕರು ಭೂಮಿಯನ್ನು ಹದಗೊಳಿಸಿಕೊಂಡು ಬಿತ್ತನೆಗೆ ತಯಾರಿ ಮಾಡಿಕೊಂಡಿದ್ದರು. ರೋಹಿಣಿ ಮಳೆಗೆ ಮೆಕ್ಕೆಜೋಳ ಬಿತ್ತನೆ ಮಾಡುವುದು ಉತ್ತಮ ಎಂದು ಬಿತ್ತನೆ ಕಾರ್ಯ ಶುರು ಮಾಡಿದ್ದಾರೆ. ಕೆಲ ಕಡೆ ಉಳುಮೆ ಮಾಡಿ ಉತ್ತಮ ಹದ ಮಳೆಗೆ ಕಾಯುತ್ತಿದ್ದು, ಮಳೆ ಸುರಿದ ಕೂಡಲೇ ಬೀಜ ಬಿತ್ತನೆ ಆರಂಭಿಸುವರು.

ಮಾಯಕೊಂಡ, ಆನಗೋಡು ಮತ್ತು ಕಸಬಾ ಹೋಬಳಿಯ ರೈತ ಸಂಪರ್ಕ ಕೇಂದ್ರಗಳಲ್ಲಿ ಈಗಾಗಲೇ ರಿಯಾಯಿತಿ ದರದಲ್ಲಿ ಮೆಕ್ಕೆಜೋಳ ಬಿತ್ತನೆ ಬೀಜ ವಿತರಿಸುತ್ತಿದ್ದಾರೆ. ಜತೆಗೆ ರಾಗಿ, ತೊಗರಿ ಬೀಜಗಳು ಕೃಷಿ ಇಲಾಖೆಯಲ್ಲಿ ಲಭ್ಯವಿದ್ದು, ಮೆಕ್ಕೆಜೋಳ ಒಂದೇ ಬಿತ್ತನೆ ಮಾಡದೆ ಮಿಶ್ರಬೆಳೆಯಾಗಿ ತೊಗರಿ ಹಾಗೂ ಅವರೆಯನ್ನು ಬೆಳೆದು ಬಹುಬೆಳೆ ಪದ್ಧತಿಯನ್ನು ಅನುಸರಿಸಿದರೆ ಇಳುವರಿಗೆ ಉತ್ತಮ. ಮೆಕ್ಕೆಜೋಳ ಬಿತ್ತನೆಗೆ ರೈತರು ಡಿಎಪಿ ಗೊಬ್ಬರವನ್ನು ಹೆಚ್ಚಾಗಿ ಬಳಸದೆ ಲಘು ಪೋಷಕಾಂಶಗಳ ಕಾಂಪ್ಲೆಕ್ಸ್ ಹಾಗೂ ಪೊಟ್ಯಾಷಿಯಂ ಗೊಬ್ಬರಗಳನ್ನು ಬಳಸಿದರೆ ಸಾಕಷ್ಟು ಉಪಯುಕ್ತವಾಗುತ್ತದೆ ಎನ್ನುತ್ತಾರೆ ಕೃಷಿ ಅಧಿಕಾರಿಗಳು.

ಇತ್ತೀಚೆಗೆ ಗ್ರಾಮಗಳಲ್ಲಿ ಎತ್ತುಗಳ ಸಂಖ್ಯೆ ತೀರಾ ಕಡಿಮೆಯಾಗಿದ್ದು ಬಿತ್ತನೆ ಮಾಡಲು, ಎಡೆಕುಂಟೆ ಹೊಡೆಯಲು ರೈತರು ಟ್ರ್ಯಾಕ್ಟರ್ ಗಳನ್ನು ಬಳಸುತ್ತಿದ್ದಾರೆ. ಕಳೆನಾಶಕ ಸಿಂಪಡಿಸುವುದರಿಂದ ಫಲವತ್ತತೆ ನೀಡುವ ಜೀವಕೋಶಗಳು ನಾಶವಾಗಿ ಭೂಮಿ ಸತ್ವ ಕಳೆದುಕೊಳ್ಳುತ್ತಿದೆ. ಆದ್ದರಿಂದ ಆದಷ್ಟು ಕಳೆನಾಶಕ ಬಳಕೆಯನ್ನು ಕಡಿಮೆ ಮಾಡಿ. | ಡಿ.ಎಂ. ಶ್ರೀಧರ್ ಮೂರ್ತಿ, ಕೃಷಿ ಸಹಾಯಕ ನಿರ್ದೇಶಕ. 2-3 ದಿನಗಳಿಂದ ಗ್ರಾಮದಲ್ಲಿ ಸಾಧಾರಣ ಮಳೆಯಾಗಿದೆ. ಮೆಕ್ಕೆಜೋಳ ಬಿತ್ತನೆಗೆ ಭೂಮಿ ಹದವಾಗಿದ್ದು, ಬೇಗ ಬಿತ್ತನೆ ಮಾಡುತ್ತಿದ್ದೇವೆ. ಸಕಾಲದಲ್ಲಿ ಬಿತ್ತನೆ ಮಾಡಿದರೆ ಮುಂದೆ ಗಿಡಗಳಿಗೆ ಯಾವುದೇ ರೋಗಗಳು ಬರುವುದಿಲ್ಲ. | ಡಿ.ಪಿ. ಸುರೇಶ್, ದಿಂಡದಹಳ್ಳಿ ರೈತ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net