

ಮಡಿಕೇರಿ:
ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆ ಗರಿಗೆದರಿದೆ. ಈಗಾಗಲೇ ಮುಸುಕಿನ ಜೋಳ ಬಿತ್ತನೆ ಕಾರ್ಯ 77 ಹೆಕ್ಟೇರ್ ಪ್ರದೇಶದಲ್ಲಿ ಪೂರ್ಣಗೊಂಡಿದೆ. ಭತ್ತ ಸಸಿ ಮಡಿ ಕಾರ್ಯ ಆರಂಭವಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಸೋಮಸುಂದರ ಮಾಹಿತಿ ನೀಡಿದ್ದಾರೆ.
ಮೇ ತಿಂಗಳಲ್ಲಿ 138 ಮಿ.ಮೀ.ವಾಡಿಕೆ ಮಳೆಗೆ 280 ಮಿ.ಮೀ. ಮಳೆಯಾಗಿದ್ದು, ಶೇ.102 ರಷ್ಟು ಹೆಚ್ಚು ಮಳೆಯಾಗಿತ್ತು. ಜೂನ್ ತಿಂಗಳಲ್ಲಿ 534 ಮಿ.ಮೀ. ವಾಡಿಕೆ ಮಳೆಗೆ 435 ಮಿ.ಮೀ. ಮಳೆಯಾಗಿದ್ದು, ಶೇ.18 ಕಡಿಮೆ ಮಳೆಯಾಗಿದೆ. ಜುಲೈ ತಿಂಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ.
ಜನವರಿಯಿಂದ ಇಲ್ಲಿಯವರೆಗಿನ ವಾಡಿಕೆ ಮಳೆ 786 ಮಿ.ಮೀ. ಆಗಿದ್ದು, ಈ ಬಾರಿ 775 ಮಿ.ಮೀ. ಮಳೆಯಾಗಿದ್ದು, ಶೇ.4 ರಷ್ಟು ಮಾತ್ರ ಮಳೆ ಕಡಿಮೆಯಾಗಿದೆ. ರೈತರು ಮುಂಗಾರು ಹಂಗಾಮಿನ ಪೂರ್ವ ಸಿದ್ಧ್ದತೆಯಲ್ಲಿದ್ದು, ಜಿಲ್ಲೆಯಲ್ಲಿ ಭತ್ತದ ಸಸಿಮಡಿ ಕಾರ್ಯ ಪ್ರಗತಿಯಲ್ಲಿದೆ. ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ನಾಟಿ ಕಾರ್ಯ ಕೈಗೊಳ್ಳಲಾಗುತ್ತದೆ. ಮುಸುಕಿನ ಜೋಳದ ಬಿತ್ತನೆ ಕಾರ್ಯ ಪ್ರಾರಂಭಗೊAಡಿದ್ದು, ರೈತರಿಗೆ ಅನುಕೂಲವಾಗುವಂತೆ ಅಗತ್ಯವಿರುವ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಇತರೆ ಕೃಷಿ ಪರಿಕರಗಳನ್ನು ಇಲಾಖೆಯ ರೈತ ಸಂಪರ್ಕ ಕೇಂದ್ರಗಳು, ಸಹಕಾರ ಸಂಘಗಳು ಹಾಗೂ ಖಾಸಗಿ ಮಾರಾಟಗಾರರಲ್ಲಿ ದಾಸ್ತಾನೀಕರಿಸಲಾಗಿದೆ.
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಒಟ್ಟು 2171 ಕ್ವಿಂಟಾಲ್ ಭತ್ತ ಮತ್ತು 41 ಕ್ವಿಂಟಾಲ್ ಮುಸುಕಿನ ಜೋಳದ ಬಿತ್ತನೆ ಬೀಜಗಳನ್ನು ಸರಬರಾಜು ಮಾಡುವ ಗುರಿ ಹೊಂದಲಾಗಿದ್ದು, ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಸ್ತುತ ಒಟ್ಟು 1552 ಕ್ವಿಂಟಾಲ್ ಭತ್ತ ಹಾಗೂ 2.4 ಕ್ವಿಂಟಾಲ್ ಮುಸುಕಿನ ಜೋಳದ ವಿವಿಧ ತಳಿಯ ಬಿತ್ತನೆ ಬೀಜಗಳು ಸರಬರಾಜಾಗಿದೆ, ಒಟ್ಟಾರೆ ಇಲ್ಲಿಯವರೆಗೆ 833.96 ಕ್ವಿಂಟಾಲ್ ಭತ್ತದ ಬಿತ್ತನೆ ಬೀಜ ವಿತರಣೆ ಮಾಡಲಾಗಿದೆ.