ಜಿಲ್ಲಾದ್ಯಂತ ಕೃಷಿ ಚಟುವಟಿಕೆ ಶುರು

Published on

ಬಳ್ಳಾರಿ ; ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಜಿಲ್ಲಾದ್ಯಂತ ಪ್ರಸ್ತಕ ಸಾಲಿನಲ್ಲಿ ಕೃಷಿ ಚಟುವಟಿಕೆ ಗರಿಗದರಿದೆ. ಪ್ರತಿ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಭತ್ತ ಬೆಳೆಯುತ್ತಿದ್ದ ರೈತರು ಈ ಬಾರಿ ಮುಸುಕಿನ ಜೋಳ ಹಾಗೂ ತೊಗರಿ ಬೆಳೆಯಲು ಆಸಕ್ತಿ ವಹಿಸಿದ್ದಾರೆ.

ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ 1,63,753 ಹೆಕ್ಟೇರ್ ಪ್ರದೇಶ ಬಿತ್ತನೆಯಾಗುವ ಗುರಿ ಹೊಂದಿದೆ. ಭತ್ತ 89,000 ಹೆ, ಮೆಕ್ಕೆಜೋಳ 20,000 ಹೆ , ಹತ್ತಿ 35,000 ಹೆ, ತೊಗರಿ 4,500 ಹೆ, ಜೋಳ 5,000 ಹೆ, ಶೇಂಗ 2,500 ಹೆ, ತೃಣಧಾನ್ಯಗಳು 2,300 ಹೆ, ಸೂರ್ಯಕಾಂತಿ 1,000 ಹೆ, ಮತ್ತು ಕಬ್ಬು 1000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಿದೆ. ಈಗಾಗಲೇ ಮಳೆಯಾಶ್ರೀತ ಪ್ರದೇಶದಲ್ಲಿ ಬಿತ್ತನೆ ಆರಂಭಿಸಿರುವ ರೈತರು ಹತ್ತಿ ಏಳು ಸಾವಿರ ಹೆ., ಮೆಕ್ಕಜೋಳ 1500 ಹೆಕ್ಟೇರ್ ಹಾಗೂ ತೊಗರಿ 500 ಹೆಕ್ಟೇರ್ ಸೇರಿ ಒಟ್ಟು 9000 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ನಡೆಸಿದ್ದು ಒಟ್ಟಾರೆ ಶೇ. 9ರಷ್ಟು ಪೂರ್ಣಗೊಂಡಿದೆ. ಮುಂದಿನ ವಾರದೊಳಗೆ ಸಂಪೂರ್ಣವಾಗಿ ಮಳೆಯಾಶ್ರೀತ ಪ್ರದೇಶವೆಲ್ಲ ಬಿತ್ತನೆಯಾಗಲಿದೆ. ಅಲ್ಲದೆ, ಜಿಲ್ಲೆಯ 13 ರೈತ ಸಂಪರ್ಕ ಮತ್ತು ಎರಡು ಹೆಚ್ಚುವರಿ ಕೇಂದ್ರ ಸೇರಿ ಒಟ್ಟು 15 ಕೇಂದ್ರಗಳ ಮೂಲಕ ವಿವಿಧ ಬೆಳೆಯ ಬಿತ್ತನೆ ಬೀಜಗಳನ್ನು ಸಹಾಯಧನದಡಿ ವಿತರಿಸಲು ಕೃಷಿ ಇಲಾಖೆ ವ್ಯವಸ್ಥೆ ಮಾಡಿಕೊಂಡಿದೆ.

ಅಗತ್ಯಕ್ಕಿಂತ ಹೆಚ್ಚಿನ ಬೀಜ ದಾಸ್ತನು : ಭತ್ತ 4,000 ಕ್ವಿ ಂಟಾಲ್ ಬೇಡಿಕೆಯಿದ್ದು 4,300 ಕ್ವಿಂಟಾಲ್, ಮೆಕ್ಕೆಜೋಳ 3,600 ಕ್ವಿ ಂಟಾಲ್ ಬೇಡಿಕೆಯಿದ್ದು 4,000 ಕ್ವಿಂಟಾಲ್, ತೊಗರಿ 660 ಕ್ವಿಂಟಾಲ್ ಬೇಡಿಕೆಯಿದ್ದು 660 ಕ್ವಿಂಟಾಲ್, ನೆಲಕಡಲೆ 2,800 ಕ್ವಿಂಟಾಲ್ ಬೇಡಿಕೆಯಿದ್ದು 3,000 ಕ್ವಿಂಟಾಲ್, ಜೋಳನ 210 ಕ್ವಿಂಟಾಲ್ ಬೇಡಿಕೆಯಿದ್ದು, 210 ಕ್ವಿಂಟಾಲ್ ದಾಸ್ತಾನಿದೆ. ಒಟ್ಟು 11,766 ಕ್ವಿಂಟಾಲ್ ಬೇಡಿಕೆಯಿದ್ದು 11,800 ಕ್ವಿಂಟಾಲ್ ದಾಸ್ತಾನಿದೆ. ಒಟ್ಟಾರೆ ಈ ಬಾರಿ ಅಗತ್ಯಕ್ಕಿಂತ ಬೀಜಗಳ ದಾಸ್ತಾನು ಹೊಂದಲಾಗಿದೆ. ಅಲ್ಲದೆ, ಮುಂಗಾರು ಹಂಗಾಮಿಗೆ ಒಟ್ಟು 1,08,100 ಮೆಟ್ರಿಕ್ ಟನ್ ರಸಗೊಬ್ಬರ ಬೇಡಿಕೆಯಿದ್ದು, ಪ್ರಸ್ತುತ 40,228 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನಿದೆ. ಹಂತ ಹಂತವಾಗಿ ಬೇಡಿಕೆ ಅನುಗುಣವಾಗಿ ಉಳಿದ ರಸಗೂಬ್ಬರ ಕಾಲಕಾಲಕ್ಕೆ ಸರಬರಾಜು ಆಗಲಿದೆ ಎಂದು ಕೃಷಿ ಅಧಿಕಾರಿ ನಿಸಾರ್ ಅಹ್ಮದ್ ತಿಳಿಸಿದರು.

ಮೆಣಸಿನಕಾಯಿ ಬೆಳೆಗೆ ನಿರಾಸಕ್ತಿ : ಕಳೆದ ಎರಡ್ಮೂರು ವರ್ಷದಿಂದ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯುತ್ತಿದ್ದ ರೈತರು ಈ ಬಾರಿ ಮುಸುಕಿನ ಜೋಳ ಬೆಳೆಯಲು ಆಸಕ್ತಿ ವಹಿಸಿದ್ದಾರೆ. ಅಲ್ಲದೆ, ತುಂಗಭದ್ರ ಜಲಾಶಯದಿಂದ ಒಂದೇ ಬೆಳೆಗೆ ನೀರು ಹರಿಸಬಹುದು ಎಂಬ ಆಲೋಚನೆ ಒಂದಡೆಯಾದರೆ ಅತಿಯಾದ ಮಳೆಯಿಂದ ತಂಪು ಹೆಚ್ಚಾಗಿ ಮೆಣಸಿನಕಾಯಿ ಹಾಳಾಗಬಹುದು ಎಂಬ ಭೀತಿ ರೈತರಲ್ಲಿದೆ. ಅಲ್ಲದೆ, ಕಳೆದ ಬಾರಿ ಬೆಳೆದಿದ್ದ ಮೆಣಸಿಕಾಯಿಗೆ ಉತ್ತಮ ಬೆಲೆಯಿಲ್ಲದೆ ನಷ್ಟ ಹೊಂದಿದ್ದರು. ಮೆಕ್ಕೆಜೋಳ ಕಡಿಮೆ ಅವಧಿಯ ಬೆಳೆಯಾಗಿರುವುದರಿಂದ ಜಲಾಶಯದಿಂದ ನೀರು ಸ್ಥಗಿತಗೊಳ್ಳುವ ಮುನ್ನವೇ ಮತ್ತೋಂದು ಬೆಳೆ ಬೆಳೆಯಬಹುದು ಎಂಬ ಆಲೋಚನೆ ರೈತರಲ್ಲಿದೆ.

ಕೋಟ್... ಜಿಲ್ಲಾದ್ಯಂತ ಮಳೆಯಾಶ್ರೀತ ಪ್ರದೇಶದಲ್ಲಿ ಬಿತ್ತನೆ ಆರಂಭವಾಗಿದೆ. ಇನ್ನೊ ಒಂದು ವಾರದೊಳಗೆ ಬಿತ್ತನೆ ಕಾರ್ಯ ಮುಗಿಯಲಿದೆ. ರೈತರು ಅಧಿಕೃತ ಪರಿಕರ ಮಾರಾಟಗಾರರಿಂದಲೇ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಮತ್ತು ಇತರೆ ಕೃಷಿ ಪರಿಕರಗಳನ್ನು ಖರೀದಿಸಬೇಕು.

- ಟಿ.ಸೋಮಸುಂದರ್, ಜಂಟಿ ಕೃಷಿ ನಿರ್ದೇಶಕ, ಬಳ್ಳಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net