

ಚಿಕ್ಕಬಳ್ಳಾಪುರ: ಹೆಚ್ಚುವರಿ ದರಕ್ಕೆ ಮಾರಾಟ ಮತ್ತು ಕೃತಕ ಅಭಾವ ಸೃಷ್ಟಿ ಸೇರಿದಂತೆ ವ್ಯಾಪಕ ಹಲವು ದೂರುಗಳ ಹಿನ್ನೆಲೆಯಲ್ಲಿ ಜಂಟಿ ಕೃಷಿ ನಿರ್ದೇಶಕಿ ಜಾವೀದಾ ನಾಸೀಮ ಖಾನಂ ನೇತೃತ್ವದ ತಂಡವು ರಸಗೊಬ್ಬರ ಮತ್ತು ಔಷಧ ಮಾರಾಟದ ವಿವಿಧ ಮಳಿಗೆಗಳಿಗೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿತು.
ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾಗಿರುವ ಬೆಳೆಗಳಿಗೆ ಪೋಷಕಾಂಶಗಳ ಅಗತ್ಯತೆಯನ್ನು ನೀಗಿಸಲು ರೈತರು ರಸಗೊಬ್ಬರಗಳನ್ನು ಖರೀದಿಸುತ್ತಿದ್ದು ಈ ಸಂದರ್ಭದಲ್ಲಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಜಾವೀದಾ ನಾಸೀಮ ತಿಳಿಸಿದರು.
ಈ ಸಂದರ್ಭದಲ್ಲಿ ಉಪ ಕೃಷಿ ನಿರ್ದೇಶಕ ಎಚ್.ಎಲ್.ಚಂದ್ರ ಕುಮಾರ್, ಜಾಗೃತಕೋಶದ ಉಪ ಕೃಷಿ ನಿರ್ದೇಶಕಿ ಅನೀಸ್ ಸಲ್ಮಾ, ಸಹಾಯಕ ಕೃಷಿ ನಿರ್ದೇಶಕ ಎ.ಕೇಶವರೆಡ್ಡಿ, ತಾಂತ್ರಿಕ ಅಧಿಕಾರಿಗಳಾದ ಶ್ರೀನಿವಾಸ, ಗಂಗಾಧರರೆಡ್ಡಿ, ರಾಮಚಂದ್ರ ಮತ್ತಿತರರು ಇದ್ದರು.
* ಮಾರಾಟಗಾರರಿಗೆ ಸೂಚನೆಗಳು
ರಸಗೊಬ್ಬರ ಮಾರಾಟಗಾರರಿಗೆ ಕಡ್ಡಾಯವಾಗಿ ಸೂಚನೆಗಳನ್ನು ಪಾಲಿಸಬೇಕು. ಇಲ್ಲದಿದ್ದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ಎಚ್ಚರಿಕೆ ನೀಡಿದರು.
ರಸಗೊಬ್ಬರಗಳ ದಾಸ್ತಾನು ಮತ್ತು ದರಪಟ್ಟಿಯ ನಾಮಫಲಕಗಳ ಪ್ರದರ್ಶನ, ನಿಗದಿತ ದರದಲ್ಲಿ ಮಾರಾಟ, ಖರೀದಿದಾರ ರೈತರ ಆಧಾರ್ ಮಾಹಿತಿ ಪಡೆದು, ರಸೀಧಿ ವಿತರಿಸುವುದು, ಕಾಲಕಾಲಕ್ಕೆ ವಹಿವಾಟಿನ ಮಾಹಿತಿಯನ್ನು ಕೃಷಿ ಇಲಾಖೆಗೆ ಒದಗಿಸುವುದು. ಕಾಯ್ದೆಯನುಸಾರ ರಸಗೊಬ್ಬರಗಳನ್ನು ಮಾತ್ರ ದಾಸ್ತಾನಿಕರಿಸಿ, ರೈತರಿಗೆ ವಿತರಿಸುವುದರ ಬಗ್ಗೆ ಸೂಚಿಸಲಾಯಿತು.