ಕೃಷಿ ರಪ್ತು ಉತ್ತೇಜನಕ್ಕೆ ಕೈಗಾರಿಕಾ ಇಲಾಖೆಯಲ್ಲಿ ಪ್ರತ್ಯೇಕ ವಿಭಾಗ

UDP-14-EXPORT
Published on

ಉಡುಪಿ: ಕೃಷಿ ರಪ್ತು ಉತ್ತೇಜನಕ್ಕೆ ಕೈಗಾರಿಕಾ ಇಲಾಖೆಯಲ್ಲಿ ಪ್ರತ್ಯೇಕ ವಿಭಾಗ ಪ್ರಾರಂಭಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ನೀಡಲಾಗಿದ್ದು, ಶೀಘ್ರ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಶುಕ್ರವಾರ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನ ರಪ್ತು ಅಭಿವೃದ್ಧಿ ಪ್ರಾಧಿಕಾರ, ಲಘು ಉದ್ಯೋಗ ಭಾರತಿ, ಐಎಂಎಸ್ ಫೌಂಡೇಶನ್ ಆಶ್ರಯದಲ್ಲಿ ನಡೆದ ಕರಾವಳಿ ಕರ್ನಾಟಕ ಕೃಷಿ ಉತ್ಪನ್ನ ರಪ್ತುದಾರರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಸ್ವಾತಂತ್ರ್ಯ ಬಂದ ಬಳಿಕ ಕೈಗಾರಿಕೀರಣಕ್ಕೆ ಹೆಚ್ಚು ಒತ್ತು ನೀಡಲಾಯಿತು. ಇದರಿಂದ ಕೃಷಿ ಕ್ಷೇತ್ರ ಹಿಂದುಳಿದಿದೆ. ಆರಂಭದಲ್ಲಿಯೇ ಕೃಷಿಗೆ ಆದ್ಯತೆ ನೀಡಿದ್ದರೆ ಅನ್ನಕ್ಕಾಗಿ ಬೇರೆ ದೇಶಕ್ಕೆ ಕೈಯೊಡ್ಡುವ ಪರಿಸ್ಥಿತಿ ಬರುತ್ತಿರಲಿಲ್ಲ. ಅಂದಿನ ಕಾಲದಲ್ಲಿ ಆರಂಭಿಸಿರುವ ಕೈಗಾರಿಕೆಗಳು ಈಗ ಬಾಗಿಲು ಮುಚ್ಚಿವೆ ಎಂದು ಹೇಳಿದರು.

ಭಾರತದಲ್ಲಿ ಬೆಳೆಯುವ ತರಕಾರಿ, ಹಣ್ಣು, ಧವಸ ಧಾನ್ಯಗಳಿಗೆ ವಿದೇಶದಲ್ಲಿ ಬೇಡಿಕೆ ಇದೆ. ಯಾವ ದೇಶದಲ್ಲಿ ಯಾವ ಉತ್ಪನ್ನಗಳಿಗೆ ಬೇಡಿಕೆ ಇದೆ ಎನ್ನುವುದನ್ನು ಗಮನಿಸಿಕೊಂಡು ಅದಕ್ಕೆ ಅನುಗುಣವಾಗಿ ಆಹಾರ ಪದಾರ್ಥಗಳನ್ನು ಬೆಳೆಯಬೇಕು. ಇದರಿಂದ ಜಾಗತಿಕ ಮಾರುಕಟ್ಟೆ ತಲುಪಬಹುದು. ರಪ್ತಿಗೆ ಪೂರಕವಾಗಿ ರೈತರು ಪ್ಯಾಕೇಜಿಂಗ್, ಬ್ರಾಂಡಿಂಗ್, ಮಾರುಕಟ್ಟೆ ಬಗ್ಗೆ ತರಬೇತಿ ಪಡೆಯಬೇಕು. ವಿಶೇಷವಾಗಿ ಕರಾವಳಿಯಲ್ಲಿ ಮೀನುಗಾರಿಕಾ ಉತ್ಪನ್ನಗಳಿಗೆ ಪಿಪಿಪಿ ಮಾದರಿಯಲ್ಲಿ ರಫ್ತು ಆಧಾರಿತ ಉದ್ಯಮ ಸ್ಥಾಪಿಸುವ ಅಗತ್ಯವಿದೆ ಎಂದರು.

ಕುಚ್ಚಲಕ್ಕಿ ಖರೀದಿ ಕೇಂದ್ರ ತೆರೆಯಲು ಸೂಚನೆ
ಕೇಂದ್ರ ಸರ್ಕಾರ ಕಳೆದ ಬಾರಿ ಎಂಒ4 ಭತ್ತ ಖರೀದಿಗೆ ಅನುಮತಿ ನೀಡುವಾಗ ತಡವಾದ ಕಾರಣ ನಿರೀಕ್ಷಿತ ಪ್ರಮಾಣದಲ್ಲಿ ಕುಚ್ಚಲಕ್ಕಿ ಲಭ್ಯವಾಗಿಲ್ಲ. ಆದರೆ ಈ ಬಾರಿ ಕಟಾವಿಗೆ ಪೂರ್ವದಲ್ಲೇ ಅನುಮತಿ ಲಭಿಸಿದ್ದು, ರಾಜ್ಯ ಸರ್ಕಾರ ಶೀಘ್ರದಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಬೇಕು. ಇದರಿಂದ ಕರಾವಳಿ ಭಾಗದ ಜನರಿಗೆ ಪಡಿತರದಲ್ಲಿ ಕುಚ್ಚಲಕ್ಕಿ ನೀಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರದ ಅಪೇಡಾ ಸಂಸ್ಥೆ ಅಧ್ಯಕ್ಷ ಡಾ. ಎಂ. ಅಂಗಮುತ್ತು, ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತ ಡಾ. ಎಂ.ವಿ. ವೆಂಕಟೇಶ್, ನಬಾರ್ಡ್ ಪ್ರಧಾನ ವ್ಯವಸ್ಥಾಪಕ ಟಿ.ರಮೇಶ್, ಕಪೆಕ್ ಎಂಡಿ ಪರ್ವೆಜ್ ಬಂಟನಾಳ್, ಕೃಷಿ ಸಚಿವರ ಪ್ರಧಾನ ಸಲಹೆಗಾರ ಡಾ.ಎ.ಬಿ.ಪಾಟೀಲ್, ಲಘುಉದ್ಯೋಗ ಭಾರತಿ ರಾಜ್ಯಾಧ್ಯಕ್ಷ ಸಚಿನ್ ಬಿ. ಸಬ್ನಿಸ್, ಪ್ರಧಾನ ಕಾರ್ಯದರ್ಶಿ ಕೆ. ನಾರಾಯಣ ಪ್ರಸನ್ನ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net