ಕೃಷಿ ಕಾಯಕದಲ್ಲಿ ಮಾದರಿ ಪಾಂಡುರಂಗ -ಸಿಂಧೂ ದಂಪತಿ

12 KRN-1
Published on

ಮಿಶ್ರ ಬೆಳೆಯಲ್ಲಿ ಸಾಧನೆ-  ಆಧುನಿಕ ಬೇಸಾಯ ಪದ್ಧತಿ ಪಾಲನೆ

ರವಿಕುಮಾರ್ ಕೆ.ಆರ್.ನಗರ

ಕೃಷಿ ರಂಗದಲ್ಲಿ ಎದುರಾಗುವ ಸಮಸ್ಯೆ ಎದುರಿಸಲು, ನಷ್ಟದ ಸಂದರ್ಭಗಳನ್ನು ನಿಭಾಯಿಸಲು ಇವರು ತಮ್ಮದೆ ಆದ ಸೂತ್ರಗಳನ್ನು ಕಂಡುಕೊಂಡಿದ್ದಾರೆ. ಮಿಶ್ರ ಬೆಳೆ ಪದ್ಧತಿಯೊಂದಿಗೆ ಹೈನುಗಾರಿಕೆಯನ್ನೂ ಅಳವಡಿಸಿಕೊಂಡು ಲಕ್ಷಾಂತರ ರೂಪಾಯಿಗಳ ಆದಾಯಗಳಿಸುವ ಮೂಲಕ ವ್ಯವಸಾಯದಿಂದ ಬದುಕು ಕಟ್ಟಿಕೊಂಡಿದ್ದಾರೆ. ಪತಿ- ಪತ್ನಿ ಇಬ್ಬರೂ ಸಮನಾಗಿ ಕೃಷಿ ಕಾಕಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಮಾದರಿ ಆಗಿದ್ದಾರೆ. ಇವರೇ ಅರಸನಕೊಪ್ಪಲು ಗ್ರಾಮದ ಪಾಂಡುರಂಗ ಮತ್ತು ಎಸ್.ಸಿಂಧೂ ದಂಪತಿ. ಇವರಿಬ್ಬರೂ ಓದಿರುವುದು 10ನೇ ತರಗತಿವರೆಗೆ ಮಾತ್ರ. ತಮಗಿರುವ 8 ಎಕರೆ ಜಮೀನಿನಲ್ಲಿ ಸಾವಯವ ಕೃಷಿ ಪದ್ಧತಿಗೆ ಒತ್ತು ನೀಡಿದ್ದಾರೆ. ಮಿಶ್ರ ಬೇಸಾಯ ಪದ್ಧತಿ ಅಳವಡಿಸಿಕೊಂಡು ವಿವಿಧ ಬೆಳೆಗಳನ್ನು ಬೆಳೆಯುವ ಮೂಲಕ ಕೃಷಿ ಮತ್ತು ಹೈನುಗಾರಿಕೆಯಲ್ಲಿ ಸಂತೃಪ್ತ ಬದುಕು ಕಂಡುಕೊಂಡಿದ್ದಾರೆ. ವಾರ್ಷಿಕವಾಗಿ 10 ರಿಂದ 12 ಲಕ್ಷ ರೂಪಾಯಿ ನಿವ್ವಳ ಆದಾಯ ಗಳಿಸುವ ಮೂಲಕ ಹಲವು ರೈತರಿಗೆ ಮಾದರಿಯಾಗಿದ್ದಾರೆ. ಪ್ರಗತಿ ಪರ ರೈತರು ಎಂದು ಗುರುತಿಸಿಕೊಂಡಿದ್ದಾರೆ.

ಅಂತರ ಬೆಳೆ ಪದ್ಧತಿ: ಮಳೆಗಾಲದಲ್ಲಿ ಭತ್ತ ಬೆಳೆಯುವ ಪಾಂಡುರಂಗ, ಅದೇ ಭೂಮಿಯಲ್ಲಿ ರಾಗಿ, ತೊಗರಿ, ಅಲಸಂದೆ, ಉದ್ದು ಇತ್ಯಾದಿಗಳನ್ನು ಪ್ರಮುಖ ಬೆಳೆಯಾಗಿ ಬೆಳೆಯುತ್ತಾರೆ. ಇದರ ಜತೆಗೆ ತರಕಾರಿ ಬೆಳೆಗಳಾದ ಬೆಂಡೆ, ಬದನೆ, ಬೀನ್ಸ್, ಟೊಮ್ಯಾಟೋ, ಮೆಣಸಿನಕಾಯಿ, ಅರಿಶಿನವನ್ನೂ ಸಮೃದ್ಧವಾಗಿ ಬೆಳೆಯುತ್ತಾರೆ. ಈಗ 3 ಎಕರೆ ಪ್ರದೇಶದಲ್ಲಿ ಮೆಣಸಿನ ಕಾಯಿ ಗಿಡ ಹಾಕಲಾಗಿದೆ. ಎರಡೂವರೆ ಎಕರೆ ಪ್ರದೇಶದಲ್ಲಿ ಕಬ್ಬನ್ನೂ ಬೆಳೆದು ಚುಂಚನಕಟ್ಟೆ ಸಕ್ಕರೆ ಕಾರ್ಖಾನೆಗೆ ಪೂರೈಸುತ್ತಿದ್ದಾರೆ. ಈ ಬಾರಿ ಬಣ್ಣಾರಿ ಅಮ್ಮನ್ ಕಾರ್ಖಾನೆಗೆ ಕಬ್ಬು ಪೂರೈಸಲಿದ್ದಾರೆ. ಉಳಿದ ಬೆಳೆಗಳನ್ನು ಹೆಬ್ಬಾಳು ಮಾರುಕಟ್ಟೆಯಲ್ಲಿಯೇ ಮಾರಾಟ ಮಾಡುತ್ತಾರೆ. ತೀರಾ ಅನಿವಾರ್ಯವಾದಲ್ಲಿ ಮಾತ್ರ ಕೆ.ಆರ್.ನಗರ ಪಟ್ಟಣಕ್ಕೆ ತೆಗೆದುಕೊಂಡು ಹೋಗುತ್ತಾರೆ. 2 ಎಕರೆಯಲ್ಲಿ ಪಾಂಡುರಂಗ ಅವರು ತೆಂಗಿನ ತೋಟ ಮಾಡಿದ್ದಾರೆ. ಜಮೀನಿನ ಬದುಗಳ ಮೇಲೆ ದಾಳಿಂಬೆ, ಸೀಬೆ, ಮಾವು, ಸಪೋಟಾ, ಹುಣಸೆ, ಬೇವು, ತೇಗದ ಮರಗಳನ್ನು ಬೆಳೆಸಿದ್ದಾರೆ. ಇದರೊಂದಿಗೆ ಹಸುಗಳ ಮೇವಿಗಾಗಿ ನೇಪಿಯಾರ್, ಕೆಂಪುಕಡ್ಡಿ ಹುಲ್ಲು, ಗಿನಿ ಹುಲ್ಲು, ಕುದುರೆ ಮಸಾಲೆ, ಮೇವಿನ ಜೋಳ, ಅಲಸಂದೆ ಬೆಳೆಯುತ್ತಿದ್ದಾರೆ. ಇದರಿಂದ ಹಸುಗಳು ಗುಣಮಟ್ಟದ ಹಾಲು ಕೊಡುತ್ತವೆ.

ಮಿಶ್ರ ಬೆಳೆ ಮತ್ತು ಅಂತರ ಬೆಳೆ ಪದ್ಧತಿಗೆ ಹೆಚ್ಚು ಒತ್ತು ನೀಡುವ ಪಾಂಡುರಂಗ ಅವರು, ತೋಟಗಾರಿಕೆ ಇಲಾಖೆ. ಕೃಷಿ ವಿಶ್ವವಿದ್ಯಾನಿಲಯಗಳು ಆಯೋಜಿಸುವ ತರಬೇತಿಗಳಲ್ಲಿ ಭಾಗವಹಿಸುತ್ತಾರೆ. ನಾಗನಹಳ್ಳಿ ವಿಸ್ತರಣಾ ಶಿಕ್ಷಣ ಘಟಕದ ವತಿಯಿಂದ ಅನೇಕ ಮುಂಚೂಣಿ ಪ್ರಾತ್ಯಕ್ಷಿಕೆಗಳು, ಕ್ಷೇತ್ರ ಪ್ರಯೋಗಗಳನ್ನು ಸತತವಾಗಿ ಕೈಗೊಳ್ಳುತ್ತಾರೆ. ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಅಭಿವೃದ್ಧಿಪಡಿಸಿದ್ದ ತೊಗರಿ ಬಿ.ಆರ್.ಜಿ.-5 ತಳಿಯನ್ನು ಸಮೃದ್ಧವಾಗಿ ಬೆಳೆದು ಕ್ಷೇತ್ರೋತ್ಸವ ಆಚರಿಸುವ ಮೂಲಕ ಇತರ ರೈತರಿಗೆ ಈ ತಳಿಯನ್ನು ಪರಿಚಯಿಸಿದ್ದಾರೆ.

ಹೈನುಗಾರಿಕೆಯಿಂದಲೂ ಲಾಭ: ಕೃಷಿಗೂ ಹೈನುಗಾರಿಕೆಗೂ ಅವಿನಾಭಾವ ಸಂಬಂಧ ಇದೆ ಎನ್ನುತ್ತಾರೆ ಪಾಂಡುರಂಗ. ಕೃಷಿ ಕಾಯಕದೊಂದಿಗೆ ಹಸುಗಳನ್ನೂ ಸಾಕಿದ್ದಾರೆ. ಪ್ರತಿನಿತ್ಯ 5 ಲೀಟರ್ ಹಾಲನ್ನು ಡೇರಿಗೆ ಹಾಕುತ್ತಾರೆ. 6 ಕುರಿ, 50 ಕೋಳಿ ಸಾಕಿದ್ದಾರೆ. ಕೋಳಿ ಮತ್ತು ಕುರಿ ಸಾಕುವುದು ಉಪ ಕಸುಬಾಗಿದ್ದು, ಇದರಿಂದ ಜಮೀನಿಗೆ ಬೇಕಾದ ಕೊಟ್ಟಿಗೆ ಗೊಬ್ಬರವನ್ನೂ ಇವರೇ ಸಿದ್ಧ ಮಾಡಿಕೊಳ್ಳುತ್ತಾರೆ. ಹಸು, ಕುರಿಗೆ ಬೇಕಾದ ಮೇವನ್ನು ತಮ್ಮ ಭೂಮಿಯಲ್ಲಿಯೇ ಉತ್ಪಾದನೆ ಮಾಡಿಕೊಳ್ಳುವ ಮೂಲಕ ಕಡಿಮೆ ಖರ್ಚಿನಲ್ಲಿ ಹೈನುಗಾರಿಕೆಯನ್ನು ಹೆಚ್ಚು ಲಾಭಕರ ಮಾಡಿಕೊಂಡಿದ್ದಾರೆ.

ಆಧುನಿಕ ಹನಿ ನೀರಾವರಿ ಪದ್ಧತಿ:

ಒಂದು ಕೊಳವೆ ಬಾವಿ ಮತ್ತು ಒಂದು ತೆರೆದ ಬಾವಿ ಇವರ ಜಮೀನಿನಲ್ಲಿ ಇದೆ. ಪೂರ್ತಿ ಜಮೀನಿನ ಬೆಳೆಗೆ ಬೇಕಾಗುವಷ್ಟು ನೀರನ್ನು ಇಲ್ಲಿಂದಲೇ ಪೂರೈಕೆ ಮಾಡಿಕೊಳ್ಳುವ ವ್ಯವಸ್ಥೆ ಇದೆ. ಹನಿ ನೀರಾವರಿ ಮತ್ತು ತುಂತುರು ನೀರಾವರಿ ಅಳವಡಿಸಿಕೊಂಡು ಗುಣಮಟ್ಟದ ತರಕಾರಿಗಳನ್ನು ಪಾಂಡುರಂಗ ಬೆಳೆಯುತ್ತಾರೆ. ಹೆಚ್ಚು ಇಳುವರಿ ಪಡೆಯುತ್ತಿದ್ದಾರೆ. ಕೊಟ್ಟಿಗೆ ಗೊಬ್ಬರ, ಹಸಿರೆಲೆ ಗೊಬ್ಬರ, ಹಾಗೂ ಜೀವಾಮೃತ ಬಳಸಿ ಮಣ್ಣಿನ ಫಲವತ್ತತೆ ಹೆಚ್ಚಿಸಲು ದಂಪತಿ ಶ್ರಮಪಡುತ್ತಿದ್ದಾರೆ.

ಪ್ರಶಸ್ತಿ- ಪುರಸ್ಕಾರ

ಕೃಷಿ ರಂಗದಲ್ಲಿ ಸಾಧನೆ ಮಾಡಿದ ದಂಪತಿಗೆ ಹಲವು ಪ್ರಶಸ್ತಿ- ಪುರಸ್ಕಾರ ಅರಸಿ ಬಂದಿವೆ. ಕೃಷಿ ವಿಶ್ವವಿದ್ಯಾನಿಲಯದ ನೂತನ ತಾಂತ್ರಿಕತೆಗಳನ್ನು ಅರಿತು ತಮ್ಮ ತಾಲೂಕಿನಲ್ಲಿ ಮೊದಲ ಬಾರಿಗೆ ಪ್ರಯೋಗಿಸಿ ಉತ್ತಮ ಫಸಲು ಪಡೆದ ಸಿಂಧೂ ಅವರು ಇತರರಿಗೆ ಮಾದರಿಯಾಗಿದ್ದಾರೆ. ಪ್ರಗತಿಪರ ರೈತ ಮಹಿಳೆ ಎನಿಸಿಕೊಂಡಿದ್ದಾರೆ. 2024ನೇ ಸಾಲಿನಲ್ಲಿ ಕೆ.ಆರ್.ನಗರ ತಾಲೂಕು ಮಟ್ಟದ ರೈತ ಮಹಿಳೆ ಪ್ರಶಸ್ತಿಗೆ ಭಾಜನ ರಾಗಿದ್ದಾರೆ. ಪಾಂಡುರಂಗ ಅವರಿಗೂ ಅನೇಕ ಪುರಸ್ಕಾರ ದೊರಕಿದೆ. ದಂಪತಿಗೆ ಮೂವರು ಮಕ್ಕಳು ಇದ್ದಾರೆ. ಸುಖ ಸಂಸಾರಕ್ಕೆ ಕೃಷಿ ಪೂರಕವಾಗಿದೆ ಎಂಬುದೇ ಸಂತಸದ ಸಂಗತಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net