

ಕುಂದಾಪುರ: ಹ್ವಯ್ ಅಗೆ ಹಾಕೀನಿ ಮಾರ‌್ರೆ... ಅಗೆ ಖಾಲಿ ಆಯೀತು... ಮತ್ತೆ ನಡೂಕೆ ಸಸಿ ಇಲ್ಲ್ಯೇ... ಬೇಗ ತೆಕ್ಕಬನ್ನಿ... ನಟ್ಟಿ ಮುಗಿಸಿ ಗದ್ದೆ ಹಾಳಿ ಹತ್ಕ್... ಕೆಸರ್ ಗದ್ಯಾಗ ಸೊಕ್ಕೂಕು... ಎನ್ನುವ ವಿದ್ಯಾರ್ಥಿಗಳ ಹುರುಪಿಗೆ ಎಣೆಯಂಟೇ? ಮೈ ಕೈಗೆ ಮತ್ತಿದ ಕೆಸರು ಮಣ್ಣು, ಬಟ್ಟೆಯೆಲ್ಲಾ ಒದ್ದೆ... ಕೆಸರು ಗದ್ದೆಯಲ್ಲಿ ಕುಣಿದು ಕುಪ್ಪಳಿಸಿದ ಅವರೊಟ್ಟಿಗೆ ದೊಡ್ಡವರೂ ಹೆಜ್ಜೆ ಹಾಕಿದರು. ಕೆಸರು ಗದ್ದೆಯಲ್ಲಿ ವಿದ್ಯಾರ್ಥಿಗಳದ್ದೇ ಕಾರುಬಾರ್. ಇದು ಭಾನುವಾರ ಬಾಂಡ್ಯದ ಕೆಸರು ಗದ್ದೆಯಲ್ಲಿ ಕಂಡುಬಂದ ದೃಶ್ಯ. ಮನೆಯಲ್ಲಿ ಆಟ, ಪಾಠದ ಜತೆಗೆ ಬ್ಯುಸಿ ಆಗಿರಬೇಕಾಗಿದ್ದ ಮಕ್ಕಳು ಭಾನುವಾರ ಕುಗ್ರಾಮ ಬಾಂಡ್ಯ ಗದ್ದೆ ಬಯಲಲ್ಲಿ ನಾಟಿ ಮಾಡಿ ಕೃಷಿ ಬಗ್ಗೆ ಮಾಹಿತಿ ಪಡೆದು ಖುಷಿ ಅನುಭವಿಸಿದರು.
ಕೋಟೇಶ್ವರ ವಕ್ವಾಡಿ ಬಾಂಡ್ಯಾ ಎಜುಕೇಶನ್ ಟ್ರಸ್ಟ್ ಗುರುಕುಲ ಶಾಲೆ 10ನೇ ತರಗತಿ ವಿದ್ಯಾರ್ಥಿಗಳು ಬಾಂಡ್ಯದ ಕೆಸರು ಗದ್ದೆಯಲ್ಲಿ ಶಾಲಾ ಆಡಳಿತ ಮಂಡಳಿ ಆಯೋಜಿಸಿದ ನಾಟಿ ಕಾರ್ಯದಲ್ಲಿ ಉತ್ಸಾಹದಿಂದ ಪಾಲ್ಗೊಂಡರು.
ಉಳುಮೆ ಮಾಡಿದ್ದ ಗದ್ದೆಗಿಳಿದು ನಾಟಿಗೆ ಮುಂದಾ ವಿದ್ಯಾರ್ಥಿಗಳಿಗೆ ಸ್ಥಳೀಯ ಕೃಷಿಕ ಮಹಿಳೆಯರು ಗುರುಗಳಾದರು. ಹಿರಿಯರು ಹೇಳಿಕೊಟ್ಟಂತೆಯೇ ನೇಜಿ ಹಿಡಿದು ಸಾಲು ನಾಟಿ ಮಾಡಿದರು. ವಿದ್ಯಾರ್ಥಿನಿಯರು ಸಾಲು ನಟ್ಟಿ ಬಳ್ಳಿ ಹಿಡಿದರು.ವಿದ್ಯಾರ್ಥಿಗಳ ಜತೆ ಶಿಕ್ಷಕರೂ ಭಾಗಿಯಾದರು. ಕೃಷಿಯಿಂದ ವಿಮುಖವಾಗುತ್ತಿರುವ ಯುವ ಜನತೆಗೆ ಪ್ರೇರಣೆ ನೀಡುವ ನಿಟ್ಟಿನಲ್ಲಿ ಈ ಪ್ರಯೋಗ ಮಾಡಲಾಯಿತು.
ಗ್ರಾಮೀಣ ಕ್ರೀಡಾಕೂಟ: ಬಾಂಡ್ಯ ಎಜುಕೇಶನ್ ಟ್ರಸ್ಟ್ ಗುರುಕುಲ ವಿದ್ಯಾಸಂಸ್ಥೆ ಜಂಟಿ ಕಾರ್ಯನಿರ್ವಾಹಕ ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ- ಅನುಪಮಾ ಎಸ್.ಶೆಟ್ಟಿ ಅವರ ಕಲ್ಪನೆಯಾದ ವಿದ್ಯಾರ್ಥಿಗಳು ಕಲಿಕೆ ಜತೆ ನಮ್ಮ ಮಣ್ಣಿನ ಸಂಸ್ಕೃತಿ ಜತೆ ಬೆಳೆಯಬೇಕು ಎಂಬುವುದೇ ವಿದ್ಯಾರ್ಥಿಗಳು ಗದ್ದೆಗೆ ಇಳಿಯಲು ಕಾರಣ. 78 ವಿದ್ಯಾರ್ಥಿಗಳು ಕೃಷಿ ಅನುಭವಿಗಳ ಜತೆಗೆ ನಾಟಿ ಕಾರ್ಯದಲ್ಲಿ ಭಾಗಿಯಾದರು. ವಿದ್ಯಾರ್ಥಿಗಳಿಗೆ ಇನ್ನಷ್ಟು ಉತ್ಸಾಹ ತುಂಬುವ ನಿಟ್ಟಿನಲ್ಲಿ ಕೆಸರು ಗದ್ದೆ ಓಟ, ಹಗ್ಗಜಗ್ಗಾಟ ನಡೆಯಿತು.
ಕೃಷಿ ಪ್ರಧಾನದ ಕುಟುಂಬ ನಮ್ಮದು. ಭತ್ತದ ಕೃಷಿ ಇತ್ತೀಚೆಗೆ ಕಮ್ಮಿಯಾಗುತ್ತಿದೆ. ನಾವು ಕಳೆದ ದಶಕಗಳಿಂದ ರಾಸಾಯನಿಕ ರಹಿತವಾದ ಭತ್ತದ ಕೃಷಿ ಮಾಡುತ್ತಿದ್ದು, ನಮ್ಮ ಸಂಸ್ಥೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಕೃಷಿ ವಿಚಾರ, ಭತ್ತದ ಕೃಷಿ ಬಗ್ಗೆ ತಿಳಿವಳಿಕೆ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ
ಜಂಟಿ ಕಾರ್ಯನಿರ್ವಾಹಕ ನಿರ್ದೇಶಕ, ಬಾಂಡ್ಯ ಎಜುಕೇಶನ್ ಟ್ರಸ್ಟ್
ಶಾಲೆಯಲ್ಲಿ ತರಗತಿಯೊಳಗೆ ಓದುತ್ತೇವೆ. ಆದರೆ ಕೃಷಿ ಬಗ್ಗೆ ತಿಳಿಹೇಳುವ ಮೂಲಕ ನಮ್ಮಲ್ಲಿ ಕೃಷಿ ಆಸಕ್ತಿ ಮೂಡಿಸಲಾಗುತ್ತಿದೆ. ಇದೊಂದು ಖುಷಿಯ ಅನುಭವ.
ಕಾವ್ಯಾ, ವಿದ್ಯಾರ್ಥಿನಿ, ಗುರುಕುಲ ಪಬ್ಲಿಕ್ ಸ್ಕೂಲ್