ಹುಬ್ಬಳ್ಳಿ: ತಾಲೂಕಿನಲ್ಲಿ ಪ್ರಸಕ್ತ ಪೂರ್ವ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗಿದ್ದು, ಕಪ್ಪು ಮಣ್ಣಿನಲ್ಲಿ ತೇವಾಂಶ ಸಾಕಷ್ಟು ಇರುವ ಕಡೆ ಹೆಸರು, ಉದ್ದು ಬಿತ್ತಲು ಸಕಾಲವಾಗಿದೆ. ಸದ್ಯ ಹವಾಮಾನ ಇಲಾಖೆ ಮಾಹಿತಿಯಂತೆ ಇನ್ನೂ ನಾಲ್ಕೈದು ದಿನ ಉತ್ತರ ಒಳನಾಡಿನಲ್ಲಿ ಮೋಡ ಮುಸುಕಿದ ವಾತಾವರಣ ಹಾಗೂ ಒಣಹವೆ ಇರುತ್ತದೆ ಎಂದು ಮೂನ್ಸೂಚನೆ ನೀಡಿದೆ.
ಹಾಗಾಗಿ ಸೋಯಾಬೀನ್ ಬಿತ್ತುವ ರೈತರು ಮಣ್ಣಿನ ತೇವಾಂಶ ಗಮನದಲ್ಲಿಟ್ಟುಕೊಂಡು ಬಿತ್ತನೆ ಕೈಗೊಳ್ಳಬೇಕು. ಸೋಯಾಬೀನ್ ಬೀಜವು ಸೂಕ್ಷ್ಮವಾಗಿದ್ದು ಸಾಕಷ್ಟು ತೇವಾಂಶ ಇಲ್ಲದಿದ್ದರೆ ಸರಿಯಾಗಿ ಮೊಳಕೆಯೊಡೆಯುವುದಿಲ್ಲ ಹಾಗೂ ಸಸಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತವೆ.
ಭೂಮಿಯಲ್ಲಿ ಕಡಿಮೆ ತೇವಾಂಶ ಅಥವಾ ಅರೆಹಸಿ ಇರುವಲ್ಲಿ ರೈತರು ಬಿತ್ತನೆ ಕೈಗೊಳ್ಳಬಾರದು ಎಂದು ಕೃಷಿ ಇಲಾಖೆ ಹಿರಿಯ ಅಧಿಕಾರಿಗಳು ಮನವಿ ಮಾಡಿದ್ದಾರೆ.
ರೈತರು ಬಿತ್ತನೆಗೆ ಮುಂಚೆ ಬೀಜ ಹಾಗೂ ಮಣ್ಣಿನಿಂದ ಬರಬಹುದಾದ ರೋಗ ಹತೋಟಿ ಮಾಡಲು ಕಡ್ಡಾಯಾವಾಗಿ ಬೀಜೋಪಚಾರ ಕೈಗೊಳ್ಳಬೇಕು.
ಹೆಸರು, ಉದ್ದು, ತೊಗರಿ ಹಾಗೂ ಸೋಯಾಬೀನ್ ಬೆಳೆಗಳಲ್ಲಿ ಸಿಡಿರೋಗ ಹಾಗೂ ರಸ ಹೀರುವ ಕೀಟಗಳ ಬಾಧೆಯಿಂದ ಬೆಳೆಗಳನ್ನು ಕಾಪಾಡಲು ವೈಬ್ರನ್ಸ್ ಇಂಟಿಗ್ರಲ್ ಮಿ.ಲಿ/ಕೆ.ಜಿ ಬೀಜಕ್ಕೆ ಉಪಚರಿಸಬೇಕು.
ಇದೇ ರೀತಿ ಮೆಕ್ಕೆಜೋಳ ಬೆಳೆಯಲ್ಲಿ ಸೈನಿಕ ಹುಳುವಿನ ಹತೋಟಿಗಾಗಿ ಫೊರ್ಟೆಂಜಾ ಡ್ಯುಒ 4 ಮಿಲಿ/ ಕೆಜಿ ಬೀಜಕ್ಕೆ ಉಪಚರಿಸಬೇಕು ಹಾಗೂ ಕೇದಿಗೆ ರೋಗಕ್ಕೆ 2 ಗ್ರಾಂ ಮೆಟಲಾಕ್ಸಿಲ್+ ಮ್ಯಾಂಕೊಜೆಬ್ ಎಂ.ಜೆಡ್ ಉಪಚರಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕಿ ಮಂಜುಳಾ ತೆಂಬದ ತಿಳಿಸಿದ್ದಾರೆ.