

ಕೆ.ಆರ್.ನಗರ : ಪ್ರಸಕ್ತ ದಿನಗಳಲ್ಲಿ ರಸಾಯನಿಕ ಗೊಬ್ಬರ ಮತ್ತು ವಿವಿಧ ರೀತಿಯ ಔಷಧ ಬಳಕೆಯಿಂದ ಕೃಷಿ ಭೂಮಿ ವಿಷಮಯವಾಗುತ್ತಿದ್ದು, ಮಣ್ಣಿನ ಫಲವತ್ತತೆ ಹೆಚ್ಚಿಸಲು ರೈತರು ಶ್ರಮಿಸಬೇಕಾಗಿದೆ ಎಂದು ಸಂಪನ್ಮೂಲ ವ್ಯಕ್ತಿ ಯದುನಂದನ ತಿಳಿಸಿದರು.
ಪಟ್ಟಣದ ಹೊರವಲಯದ ಚೌಕಹಳ್ಳಿ ಗ್ರಾಮದಲ್ಲಿ ಸೋಮವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ರೈತರಿಗಾಗಿ ಏರ್ಪಡಿಸಿದ್ದ ‘ಮಣ್ಣು ಪರೀಕ್ಷೆ ಮತ್ತು ಸಸ್ಯ ಪೋಷಕಾಂಶಗಳ ನಿರ್ವಹಣೆ’ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.
ಮಣ್ಣಿನ ಫಲವತ್ತತೆ ಹೆಚ್ಚಿಸಲು ಹಸಿರೆಲೆ ಗೊಬ್ಬರ ಮತ್ತು ಕೊಟ್ಟಿಗೆ ಗೊಬ್ಬರಗಳನ್ನು ಹಾಕಬೇಕು. ಇದರಿಂದ ಮಣ್ಣಿನ ಗುಣಮಟ್ಟವನ್ನು ಹೆಚ್ಚಿಸಬಹುದು ಎಂದರು. ಅಧಿಕ ಇಳುವರಿ ಗಳಿಸಲು 16 ಪೋಷಕಾಂಶಗಳ ಅಗತ್ಯವಿದೆ. ರೈತರು ತಮ್ಮ ಜಮೀನುಗಳಲ್ಲಿನ ಮಣ್ಣನ್ನು ಪರೀಕ್ಷೆ ಮಾಡಿಸಿ, ಅಗತ್ಯ ಪೋಷಕಾಂಶಗಳನ್ನು ಸಾಂಪ್ರದಾಯಿಕ ಪದ್ಧತಿಯಲ್ಲೇ ನೀಡಬೇಕು. ರಾಸಾಯನಿಕಗಳಿಂದ ದೂರ ಇದ್ದರೆ ಉತ್ತಮ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಸಿ.ಮಹದೇವ ಸ್ವಾಮಿ, ಮಾತನಾಡಿ, ಕೃಷಿ ಇಲಾಖೆಯ ತಜ್ಞರನ್ನು ಕರೆಸಿ ಮಣ್ಣು ಮತ್ತು ಸಸ್ಯ ಪೋಷಕಾಂಶಗಳ ಬಗ್ಗೆ ರೈತರಿಗೆ ಆಗಾಗ್ಗೆ ಮಾಹಿತಿ ಕೊಡಿಸಲಾಗುತ್ತಿದೆ. ಇದರ ಸದುಪಯೋಗ ಪಡೆದು ಗುಣಮಟ್ಟದ ಸಾವಯವ ಫಸಲು ಪಡೆಯಬೇಕು ಎಂದರು.
ರೈತರು ದೇಶ ಬೆನ್ನೆಲುಬು. ಬೆಳೆಯಲ್ಲಿ ಅನುಸರಿಸಬಹುದಾದ ಪದ್ಧತಿಗಳ ಬಗ್ಗೆ ಆಗಾಗ್ಗೆ ಕೃಷಿಕರು ಜಾಗೃತರಾಗಬೇಕು. ತರಬೇತಿ ಶಿಬಿರಗಳ ಲಾಭ ಪಡೆಯಬೇಕು.
ರಾಸಾಯನಿಕ ರಹಿತ ಆಹಾರ ನಮ್ಮದಾಗಬೇಕು ಎಂದರು. ಗ್ರಾಪಂ ಸದಸ್ಯ ಶೇಖರ್ ಮಾತನಾಡಿದರು. ಸಂಸ್ಥೆ ಅಧ್ಯಕ್ಷೆ ನಾಗರತ್ನಾ ಗೌರೀಶ್, ರೈತರಾದ ಮಲ್ಲಿಕಾರ್ಜುನ, ವಿಜಯಕುಮಾರ್, ರಾಜೇಶ್, ಚಂದ್ರ, ಶಿವಕುಮಾರ್, ವಲಯದ ಮೇಲ್ವಿಚಾರಕ ಚಂದ್ರಶೇಖರ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಯು.ಸಿ.ಅನುಷಾ, ಸೇವಾ ಪ್ರತಿನಿಧಿ ಸುಜಾತಾ ಹಾಜರಿದ್ದರು.