

ಮಡಿಕೇರಿ:
ಜಿಲ್ಲೆಯಲ್ಲಿ ಯಾವುದೇ ರಸಗೊಬ್ಬರಗಳ ಕೊರತೆಯಿರುವುದಿಲ್ಲ. ಈ ಹಿನ್ನೆಲೆಯಲ್ಲಿ ರೈತರು ರಸಗೊಬ್ಬರಗಳ ಲಭ್ಯತೆ ಬಗ್ಗೆ ಯಾವುದೇ ಆತಂಕ ಪಡುವ ಅಗತ್ಯವಿರುವುದಿಲ್ಲ ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಚಂದ್ರಶೇಖರ್ ತಿಳಿಸಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ರೈತರು ಕೃಷಿ ಚಟುವಟಿಕೆಗಳಲ್ಲಿ ತಲ್ಲೀನರಾಗಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ ಭತ್ತ ಹಾಗೂ ಮುಸುಕಿನ ಜೋಳದ ಬೆಳೆಗಳ ಬಿತ್ತನೆ ಕಾರ್ಯಗಳು ಪ್ರಗತಿಯಲ್ಲಿವೆ. ಒಟ್ಟು 30,525 ಹೆಕ್ಟೇರ್ ಗುರಿಗೆ ಇಲ್ಲಿಯವರೆಗೆ 5,864 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮತ್ತು ನಾಟಿ ಕಾರ್ಯ ಪೂರ್ಣಗೊಂಡಿರುತ್ತದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಜಿಲ್ಲೆಯ ಕೃಷಿ, ತೋಟಗಾರಿಕೆ ಮತ್ತು ಕಾಫಿ ಬೆಳೆಗಳಿಗೆ 2025 ನೇ ಸಾಲಿನ ಮುಂಗಾರು ಹಂಗಾಮಿಗೆ ಸುಮಾರು 88,677 ಮೆ. ಟನ್ ರಸಗೊಬ್ಬರಗಳ ಅವಶ್ಯಕತೆ ಇದೆಯೆಂದು ಅಂದಾಜಿಸಲಾಗಿದೆ. ಏಪ್ರಿಲ್ ತಿಂಗಳ ಆರಂಭಿಕ ದಾಸ್ತಾನು 35,924 ಮೆ. ಟನ್ ಇದ್ದು, ಜು.28ರ ತನಕ 54,520 ಮೆ. ಟನ್ ರಸಗೊಬ್ಬರ ವಿವಿಧ ತಯಾರಕ ಸಂಸ್ಥೆಗಳಿAದ ಜಿಲ್ಲೆಗೆ ಸರಬರಾಜಾಗಿರುತ್ತದೆ. ಒಟ್ಟಾರೆಯಾಗಿ ಇಲ್ಲಿಯವರೆಗೆ 90,444 ಮೆ. ಟನ್ ರಸಗೊಬ್ಬರ ಜಿಲ್ಲೆಯ ರೈತರಿಗೆ ಲಭ್ಯವಿದ್ದು, ಸುಮಾರು 60,126 ಮೆ. ಟನ್ ರಸಗೊಬ್ಬರವನ್ನು ರೈತರಿಗೆ ವಿತರಣೆ ಮಾಡಲಾಗಿದೆ. ಯೂರಿಯಾ - 5855 ಮೆ ಟನ್, ಡಿ ಎ ಪಿ - 1643 ಮೆ ಟನ್, ಎಂ ಓ ಪಿ - 5526 ಮೆ ಟನ್, ಎನ್‌ಪಿಕೆ ಕಾಂಪ್ಲೆಕ್ಸ್ -16,250 ಮೆ ಟನ್ ಹಾಗೂ ಎಸ್ ಎಸ್ ಪಿ - 1043 ಮೆ ಟನ್ ಸೇರಿದಂತೆ ಒಟ್ಟು 30,318 ಮೆ. ಟನ್ ರಸಗೊಬ್ಬರ ಹಾಲಿ ದಾಸ್ತಾನು ಇದೆ ಎಂದು ತಿಳಿಸಿದ್ದಾರೆ.