ಮಳೆ ಬಿಡುವು ನೀಡಿರುವುದು ಕಾಫಿ ಬೆಳೆಗೆ ಅನುಕೂಲ

agri
Published on

ಮಡಿಕೇರಿ:

ಕೊಡಗಿನಲ್ಲಿ ಮೇ ಅಂತ್ಯಕ್ಕೆ ಸುರಿದ ಉತ್ತಮ ಮಳೆ ಕೃಷಿಗೆ ಪೂರಕ ವಾತಾವರಣ ಸೃಷ್ಟಿಸಿದೆ. ಮಳೆ ಬಿಡುವು ಕೊಟ್ಟಿರುವುದರಿಂದ ಕಾಫಿ ತೋಟಕ್ಕೆ ಗೊಬ್ಬರ ಹಾಕಲು ಉತ್ತಮ ವಾತಾವರಣ ನಿರ್ಮಾಣ ಆಗಿದೆ. ಕರಿ ಮೆಣಸು, ಏಲಕ್ಕಿ, ಶುಂಠಿ ರೀತಿಯ ಸಾಂಬಾರ ಬೆಳೆಗಳಿಗೂ ಈ ಮಳೆಯಿಂದ ಸಾಕಷ್ಟು ಪ್ರಯೋಜನವಾಗಿದೆ. ಭತ್ತ ಕೃಷಿಗೆ ಸಿದ್ಧತಾ ಕಾರ್ಯ ನಡೆಸಲು ಕೂಡ ಮುಂಗಾರು ಪೂರ್ವ ಮಳೆ ಸಾಕಷ್ಟು ಅನುಕೂಲತೆ ಮಾಡಿಕೊಟ್ಟಿದೆ.

ಸಾಮಾನ್ಯವಾಗಿ ಬಿಸಿಲಿನ ಪ್ರಖರತೆ ಇರುತ್ತಿದ್ದ ಮೇ ತಿಂಗಳ ಕೊನೆಯ ಭಾಗದಲ್ಲಿ ಈ ವರ್ಷ ಕೊಡಗಿನಲ್ಲೂ ಭಾರಿ ಮಳೆ ಸುರಿದಿತ್ತು. ಬಹುತೇಕ ಬತ್ತಿದ್ದ ನದಿಗಳಲೆಲ್ಲಾ ಜೀವಕಳೆ ತುಂಬಿಕೊಳ್ಳಲು ಈ ಮಳೆ ಕಾರಣವಾಯಿತು. ಚಿಕ್ಲಿಹೊಳೆ ಜಲಾಶಯ ಇದೇ ಮೊದಲ ಬಾರಿಗೆ ಮೇ ತಿಂಗಳಿನಲ್ಲಿ ಭರ್ತಿ ಆಗಿ ಕೋಡಿ ಬೀಳುವ ಮೂಲಕ ಸುದ್ದಿ ಆಯಿತು. ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲಿ ಒಂದಾದ ಕುಶಾಲನಗರ ತಾಲೂಕಿನ ಹಾರಂಗಿ ಅಣೆಕಟ್ಟೆ ಮೇ ತಿಂಗಳಿನಲ್ಲಿ ಗರಿಷ್ಠ ಮಟ್ಟದ ನೀರು ಸಂಗ್ರಹಿಸುವ ಮೂಲಕ ದಾಖಲೆ ಮಾಡಿತು.

ಮುಂಗಾರು ಪೂರ್ವದಲ್ಲಿ ಅಬ್ಬರಿಸಿದ ಮಳೆರಾಯ ಕೃಷಿಕರಿಗೂ ಸಾಕಷ್ಟು ಅನುಕೂಲ ಮಾಡಿಕೊಟ್ಟಿದ್ದಾನೆ. ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಕಾಫಿಗೆ ಈ ಮಳೆಯಿಂದ ಸಾಕಷ್ಟು ಅನುಕೂಲ ಆಗಿದೆ. ಮಳೆ ಬಂದು ಈಗ ಬಿಡುವು ಕೊಟ್ಟಿರುವುದರಿಂದ ಕಾಫಿ ತೋಟಗಳಿಗೆ ಕಾಫಿ ಮಂಡಳಿ ಶಿಫಾರಸ್ಸು ಮಾಡಿದಷ್ಟು ಗೊಬ್ಬರ ಹಾಕಬಹುದು. ಇದರಿಂದ ಮುಂದೆ ಮಳೆ ಬಂದಲ್ಲಿ ಕಾಫಿ ಉತ್ಪಾದನೆ ಹೆಚ್ಚಾಗಲು ಸಹಕಾರಿ ಆಗುತ್ತದೆ ಎನ್ನುತ್ತಾರೆ ಕಾಫಿ ಮಂಡಳಿ ಅಧಿಕಾರಿಗಳು. ಕೆಲವು ದಿನಗಳ ನಂತರ ಮಳೆಯಾಗುವ ಸೂಚನೆ ಹವಾಮಾನ ಇಲಾಖೆಯಿಂದ ಬಂದಿದೆ. ಹಾಗಾಗಿ ಉತ್ತಮವಾಗಿ ಸಕಾಲದಲ್ಲಿ ತೋಟ ನಿರ್ವಹಣೆ ಮಾಡುವುದನ್ನು ರೂಢಿಸಿಕೊಂಡಿರುವವರಿಗೆ ಗೊಬ್ಬರ ಹಾಕಲು ಇದು ಸಕಾಲ ಎನ್ನುವುದು ತಜ್ಞರ ಅಭಿಪ್ರಾಯ.

ಜೋರು ಮಳೆ ಸುರಿದು ಈಗ ಸ್ವಲ್ಪ ಬಿಡುವು ನೀಡಿರುವುದರಿಂದ ಕೊಳೆ ರೋಗದ ಆತಂಕ ದೂರವಾಗಿದೆ. ಈಗ ಒಂದಿಷ್ಟು ದಿನ ಹೀಗೆ ಬಿಸಿಲು ಕಾದು ನಂತರ ಮಳೆಯಾದರೆ ಕಾಫಿ ತೋಟಗಳಿಗೆ ಸಾಕಷ್ಟು ಅನುಕೂಲತೆಗಳಿದೆ ಆದರೆ ಮಳೆಗಾಲದಲ್ಲಿ ಉತ್ತಮ ಮಳೆ ಬರುವ ಸಾಧ್ಯತೆ ಬಗ್ಗೆ ಹವಾಮಾನ ತಜ್ಞರು ಭವಿಷ್ಯ ನುಡಿದಿರುವುದರಿಂದ ಮಳೆಗೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕಿದೆ. ನೀರು ಬಸಿದು ಹೋಗಲು ವ್ಯವಸ್ಥೆ ಮಾಡಬೇಕು ಹಾಗೂ ನೆರಳಿನ ನಿರ್ವಹಣೆ ಮಾಡಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.

ಕೊಡಗಿನಲ್ಲಿ ಸಾಮಾನ್ಯವಾಗಿ ಬೆಳೆಯುವ ಕರಿಮೆಣಸು, ಏಲಕ್ಕಿ, ಶುಂಠಿಯAಥ ಸಾಂಬಾರ ಬೆಳೆಗಳಿಗೂ ಮೇ ಮಳೆಯಿಂದ ಸಾಕಷ್ಟು ಪ್ರಯೋಜನವಾಗಿದೆ. ಒಂದು ವೇಳೆ ಆ ಮಳೆ ಮುಂದುವರಿದಿದ್ದರೆ ಹಾನಿಯಾಗುವ ಸಂಭವ ಇತ್ತು. ಬೇಸಿಗೆಯ ಅತಿಯಾದ ಉಷ್ಣಾಂಶ ಇರುವುದಕ್ಕಿಂತ ಮಳೆಯಾಗಿದ್ದರಿಂದ ಒಳ್ಳೆಯದೇ ಆಗಿದೆ ಎನ್ನುತ್ತಾರೆ ಕೃಷಿ ತಜ್ಞರು. ಈಗ ಸುರಿದ ಮಳೆಯಿಂದ ಸಾಂಬಾರ ಬೆಳೆಗಳಿಗೆ ಉಪಯೋಗವೇ ಆಗಿದ್ದರೂ ಸದ್ಯ ಮಳೆ ನಿಂತಿರುವುದರಿAದ ಬೆಳೆ ಮತ್ತು ತೋಟವನ್ನು ಸೂಕ್ತವಾಗಿ ಬೆಳೆಗಾರರು ನಿರ್ವಹಣೆ ಮಾಡಲು ಇದು ಸಕಾಲ ಎನ್ನುವ ಸಲಹೆಯನ್ನೂ ತಜ್ಞರು ನೀಡುತ್ತಾರೆ.

ಕಾಳು ಮೆಣಸು, ಏಲಕ್ಕಿ, ಶುಂಠಿ ಬೆಳೆಗಳಿಗೆ ಕೃಷಿ ತಜ್ಞರು ಶಿಫಾರಸ್ಸು ಮಾಡಿದ ಪ್ರಮಾಣದ ರಸಗೊಬ್ಬರ ಕೊಡಲು ಇದು ಸಕಾಲವಾಗಿದೆ. ಶೇ. 1ರ ಬೋಡೊ ದ್ರಾವಣ ಸಿಂಪಡಣೆ, ಶೇ 2ರ ಸಿಒಸಿ (ಕಾಪರ್ ಆಕ್ಸಿ ಫ್ಲೋರೈಡ್) ಅನ್ನು ಗಿಡದ ಬುಡಕ್ಕೆ ಹಾಕುವುದು ಸೇರಿದಂತೆ ಇನ್ನೂ ಅನೇಕ ಕ್ರಮಗಳನ್ನು ಕೃಷಿ ವಿಜ್ಞಾನಿಗಳ ಸಲಹೆ ಪಡೆದು ಮಾಡುವುದರಿಂದ ಅನುಕೂಲತೆಗಳಿದೆ. ಆದರೆ ಮಳೆ ಮುಂದುವರಿದರೆ ಅಥವಾ ಹೆಚ್ಚಿನ ಮಳೆಯಾದರೆ ಕೊಳೆರೋಗ ಬರುವ ಸಾಧ್ಯತೆ ಅಧಿಕ ಇದೆ. ಹಾಗಾಗಿ, ಈಗಲೇ ಕೊಳೆ ರೋಗ ಬಾರದಂತೆ ತಡೆಗಟ್ಟಲು ಅನುಸರಿಸಬೇಕಾದ ಕ್ರಮಗಳನ್ನು ತಜ್ಞರ ಸಲಹೆ ಮೇರೆಗೆ ಕೃಷಿಕರು ಪಾಲಿಸಬೇಕಿದೆ.

ಕಳೆದ ತಿಂಗಳ ಮಳೆಯಿಂದ ಕೆಲವೆಡೆ ಬಾಳೆ ತೋಟಗಳಿಗೆ ಹಾನಿಯಾಗಿರುವುದು ಹೊರತುಪಡಿಸಿದರೆ ಜಿಲ್ಲೆಯಲ್ಲಿ ತೋಟಗಾರಿಕಾ ಬೆಳೆಗಳಿಗೆ ಹೆಚ್ಚಿನ ಹಾನಿಯಾಗಿಲ್ಲ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು.

ಇನ್ನು ಮುಂಗಾರು ಪೂರ್ವ ಮಳೆ ಜಿಲ್ಲೆಯ ಪ್ರಮುಖ ಬೆಳೆಗಳಲ್ಲಿ ಒಂದಾಗಿರುವ ಭತ್ತಕ್ಕೂ ಹೆಚ್ಚಿನ ಅನುಕೂಲ ಕಲ್ಪಿಸಿದೆ. ಸಾಮಾನ್ಯವಾಗಿ ಮೇ ತಿಂಗಳಿನಲ್ಲಿ ಹೆಚ್ಚಿನ ಬಿಸಿಲು ಇದ್ದು, ಉಷ್ಣಾಂಶ ಹೆಚ್ಚಿರುತ್ತಿತ್ತು. ಭೂಮಿ ಹದ ಮಾಡಲು ಉತ್ತಮ ಮಳೆಗಾಗಿ ಕಾಯುವ ಸ್ಥಿತಿ ಇರುತ್ತಿತ್ತು. ಒಂದು ಕಡೆ ಮಳೆಯಾದರೆ ಮತ್ತೊಂದು ಕಡೆ ಮಳೆಯಾಗದಿರುವ ಸ್ಥಿತಿ ಇರುತ್ತಿತ್ತು. ಆದರೆ, ಈಗ ಜಿಲ್ಲೆಯ ಎಲ್ಲಡೆ ಸಮೃದ್ಧ ಮಳೆಯಾಗಿದ್ದು, ಸದ್ಯ ಒಂದಿಷ್ಟು ದಿನಗಳ ಕಾಲ ಮಳೆ ಬಿಡುವು ನೀಡಿದೆ. ಈ ಸಮಯದಲ್ಲಿ ಭೂಮಿಯನ್ನು ಉಳುಮೆ ಮಾಡುವುದು ಸೇರಿದಂತೆ ಭತ್ತ ನಾಟಿ ಮಾಡಲು ಮಾಡಬೇಕಾದ ಸಿದ್ಧತಾ ಕಾರ್ಯಗಳನ್ನು ನಡೆಸಬಹುದಾಗಿದೆ.

ಮುಂದೆ ಭಾರಿ ಮಳೆ ಸುರಿಯುವ ಮುನ್ಸೂಚನೆ ಹವಾಮಾನ ಇಲಾಖೆ ಅಧಿಕಾರಿಗಳು ನೀಡಿರುವುದರಿಂದ ಈಗ ಪೂರಕ ಉಳುಮೆ, ಸಸಿಮಡಿ ತಯಾರಿ ಮಾಡಿಕೊಳ್ಳಬಹುದಾಗಿದೆ. ಮಳೆ ಬಂದ ನಂತರ ಗದ್ದೆಯಲ್ಲಿ ನಾಟಿ ಮಾಡಬಹುದಾಗಿದೆ. ಈ ಮಧ್ಯೆ ಯುದ್ದ ಹಾಗೂ ಇನ್ನಿತರ ಕಾರಣಗಳಿಂದ ಸದ್ಯ ದೇಶದಲ್ಲಿ ಡಿಎಪಿ ಗೊಬ್ಬರಕ್ಕೆ ಕೊರತೆ ಎನ್ನುವ ಸ್ಥಿತಿ ಇದೆ. ಹಾಗಾಗಿ ಡಿಎಪಿಗಿಂತಲೂ ಹೆಚ್ಚಿನ ಪೋಷಕಾಂಶ ಹೊಂದಿರುವ 'ಕಾಂಪ್ಲೆಕ್ಸ್' ಗೊಬ್ಬರ ಯಥೇಚ್ಛವಾಗಿ ಲಭ್ಯವಿದ್ದು, ಅದ್ನನು ಬಳಕೆ ಮಾಡುವಂತೆಯೂ ಕೃಷಿ ಇಲಾಖೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಸಸ್ಯಗಳ ಬೆಳವಣಿಗೆಗೆ 17 ಪೋಷಕಾಂಶಗಳ ಅಗತ್ಯ ಇದೆ. ಇವುಗಳಲ್ಲಿ ಸಾರಜನಕ, ರಂಜಕ, ಪೊಟ್ಯಾಷ್ ಹೆಚ್ಚಿನ ಪ್ರಮಾಣದಲ್ಲಿ ಬೇಕಿದ್ದು, ಇವುಗಳನ್ನು ಪ್ರಧಾನ ಪೋಷಕಾಂಶಗಳೆAದು ಹಾಗೂ ಕ್ಯಾಲ್ಸಿಯಂ, ಮೆಗ್ನಿಷಿಯಂ, ಗಂಧಕ, ಕಬ್ಬಿಣ, ಜಿಂಕ್, ಬೋರಾನ್, ತಾಮ್ರ, ಮ್ಯಾಂಗನೀಸ್, ಕ್ಲೋರಿನ್, ನಿಕಲ್‌ಗಳನ್ನು ಲಘು ಪೋಷಕಾಂಶಗಳೆAದು ಕರೆಯಲಾಗುತ್ತದೆ. ಇವುಗಳಲ್ಲಿ ಯಾವುದೇ ಒಂದು ಪೋಷಕಾಂಶದ ಕೊರತೆ ಉಂಟಾದರೂ ಸಸ್ಯದ ಬೆಳೆವಣಿಗೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎನ್ನುವ ಕೃಷಿ ಇಲಾಖೆ ಅಧಿಕಾರಿಗಳು, ರೈತರು ಕೇವಲ ಒಂದು ಅಥವಾ ಎರಡು ಪೋಷಕಾಂಶಗಳನ್ನು ಒದಗಿಸುವ ಯೂರಿಯ ಹಾಗೂ ಡಿಎಪಿಯನ್ನು ರೂಢಿಗತವಾಗಿ ಬಳಕೆ ಮಾಡುತ್ತಿದ್ದಾರೆ. ಇದಕ್ಕೆ ಬದಲಾಗಿ ವಿವಿಧ ಪೋಷಕಾಂಶಗಳ ಸಂಯೋಜನೆ ಹೊಂದಿರುವ 'ಕಾಂಪ್ಲೆಕ್ಸ್' ಗೊಬ್ಬರಗಳನ್ನು ಬಳಕೆ ಮಾಡಬೇಕು ಎಂದು ಸಲಹೆ ನೀಡುತ್ತಾರೆ.

ಭಾರತೀಯ ಹವಾಮಾನ ಇಲಾಖೆಯ ಜೂ.7ರಿಂದ ಜೂ.11ರ ಅವಧಿಯ ಹವಾಮಾನ ಮುನ್ಸೂಚನೆ ಪ್ರಕಾರ ಕೊಡಗಿನಲ್ಲಿ ಮೋಡ ಕವಿದ ವಾತಾವರಣವಿದ್ದು, ತುಂತುರು ಮಳೆ ಬರುವ ಸಂಭವವಿದೆ. ನೀರು ನಿಲ್ಲುವುದು, ಬೆಳೆ ಹಾನಿಯನ್ನು ತಡೆಗಟ್ಟಲು ಎಲ್ಲಾ ಹೊಲಗಳಲ್ಲಿ ಮತ್ತು ಕೃಷಿ ಭೂಮಿ ಸುತ್ತಲೂ ನೀರು ಹರಿದು ಹೋಗಲು ವ್ಯವಸ್ಥೆ ಮಾಡಬೇಕು. ಹೆಚ್ಚಿನ ಆರ್ದ್ರತೆಯೊಂದಿಗೆ ಮೋಡ ಕವಿದ ಆಕಾಶವು ಕಾಫಿ, ಮೆಣಸು ಮತ್ತು ಭತ್ತದಂತಹ ಬೆಳೆಗಳಲ್ಲಿ ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾದ ರೋಗಗಳನ್ನು ಉತ್ತೇಜಿಸುವ ಸಾಧ್ಯತೆಯಿದೆ

ಡಾ. ಜಿ.ವಿ. ಸುಮಂತ್ ಕುಮಾರ್, ತಾಂತ್ರಿಕ ಅಧಿಕಾರಿ, ಕೃಷಿ ಹವಾಮಾನ ಕ್ಷೇತ್ರ ವಿಭಾಗ, ನಾಗನಹಳ್ಳಿ, ಮೈಸೂರು

ಕೊಡಗು ಜಿಲ್ಲೆಯಲ್ಲಿ ಈಗ ಸಾಕಷ್ಟು ಮಳೆ ಬಂದು, ಬಿಡುವು ನೀಡಿದೆ. ಸಾಂಬಾರ ಬೆಳೆಗಳಿಗೆ ಇದು ಉತ್ತಮ ವಾತಾವರಣ ಕಲ್ಪಿಸಿದೆ. ಈಗ ತೋಟಗಳನ್ನು, ಬೆಳೆಯನ್ನು ಸರ್ಮಪಕವಾಗಿ ನಿರ್ವಹಿಸಬೇಕು. ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ರಸಗೊಬ್ಬರ ಹಾಕುವುದು, ಮುಂದೆ ಕಾಯಿಲೆ ಬಾರದಂತೆ ತಡೆಗಟ್ಟಲು ತಜ್ಞರು ಹೇಳಿದ ಪ್ರಕಾರ ಕ್ರಮಗಳನ್ನು ಕೈಗೊಳ್ಳಬೇಕು

ಡಾ. ಎಸ್.ಜೆ. ಅಂಕೇಗೌಡ, ಮುಖ್ಯಸ್ಥ, ಭಾರತೀಯ ಸಾಂಬರ ಬೆಳೆಗಳ ಸಂಶೋಧನಾ ಸಂಸ್ಥೆ, ಅಪ್ಪಂಗಳ

ಕೊಡಗು ಜಿಲ್ಲೆಯಲ್ಲಿ ಈಚೆಗೆ ಸುರಿದ ಹೆಚ್ಚಿನ ಮಳೆಯಿಂದ ತೋಟಗಾರಿಕೆ ಬೆಳೆಗಳಿಗೆ ದೊಡ್ಡ ಮಟ್ಟದ ಹಾನಿಯಾಗಿಲ್ಲ. ಕೆಲವೆಡೆ ಬಾಳೆ ತೋಟಗಳಿಗೆ ಹಾನಿಯಾಗಿರುವುದು ಬಿಟ್ಟರೆ ಹೆಚ್ಚಿನ ಹಾನಿ ವರದಿಯಾಗಿಲ್ಲ. ಈಗ ಮಳೆ ಬಿಡುವು ನೀಡಿರುವುದರಿಂದ ತೋಟಗಳಲ್ಲಿ ಬೆಳೆಯನ್ನು ಸರ್ಮಪಕವಾಗಿ ನಿರ್ವಹಿಸಬೇಕು. ತಜ್ಞರ ಸಲಹೆಯಂತೆ ಬೆಳೆಗಳ ನಿರ್ವಹಣೆ ಮಾಡಬೇಕು.

ಹೆಚ್.ಆರ್. ಯೋಗೇಶ್, ಉಪನಿರ್ದೇಶಕ, ತೋಟಗಾರಿಕೆ ಇಲಾಖೆ, ಕೊಡಗು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net