ಬಿತ್ತನೆಗೆ ಅಣಿಯಾದ ಬೆಳಗಾವಿ ರೈತರು ; ವಾಡಿಕೆಗೂ ಹೆಚ್ಚು ಮಳೆ ಕೃಷಿ ಕೆಲಸ ಚುರುಕು

IMG_20230518_184257.webp
Published on

ರವಿ ಗೋಸಾವಿ ಬೆಳಗಾವಿ
ಈ ಬಾರಿಯ ಮುಂಗಾರು ಆರಂಭದಲ್ಲೇ ವಾಡಿಕೆಗೂ ಅಧಿಕ ಮಳೆಯಾಗಿದ್ದರಿಂದ ಜಿಲ್ಲಾದ್ಯಂತ ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ಜಮೀನು ಉಳುಮೆ ಮಾಡಿ ಹಸನುಗೊಳಿಸುವ ಕಾರ್ಯ ಭರದಿಂದ ಸಾಗಿದೆ.
ಜಿಲ್ಲೆಯಲ್ಲಿ ಕಳೆದ ವರ್ಷದ ಮೇ 17ರ ವರೆಗೆ ವಾಡಿಕೆಗಿಂತಲೂ ಶೇ.38ರಷ್ಟು ಮಳೆ ಕಡಿಮೆಯಾಗಿದ್ದರಿಂದ ಬಿತ್ತನೆಗೆ ಹೊಲಗದ್ದೆಗಳನ್ನು ಅಣಿಗೊಳಿಸುವುದು ತಡವಾಗಿತ್ತು. ಆದರೆ, ಈ ವರ್ಷ ಏಪ್ರಿಲ್‌ನಿಂದ ಮೇ 17ರ ವರೆಗೆ ವಾಡಿಕೆಗಿಂತಲೂ ಶೇ.34 ಹೆಚ್ಚಾಗಿದೆ. ಇದರಿಂದ ರೈತರು ಕೃಷಿ ಕಾರ್ಯ ಚುರುಕುಗೊಳಿಸಿದ್ದಾರೆ.

ಜಿಲ್ಲಾದ್ಯಂತ ಭೂಮಿ ಹಾಗೂ ಹವಾಗುಣಕ್ಕೆ ತಕ್ಕಂತೆ ಬೈಲಹೊಂಗಲ, ಹುಕ್ಕೇರಿ ಹಾಗೂ ಚಿಕ್ಕೋಡಿ ಭಾಗದಲ್ಲಿ ಸೋಯಾಬಿನ್ ಹಾಗೂ ಅವರೆ. ಅಥಣಿ, ಸವದತ್ತಿ ಹಾಗೂ ರಾಮದುರ್ಗ ಭಾಗದಲ್ಲಿ ಹೆಸರು ಮತ್ತು ಉದ್ದು, ಖಾನಾಪುರ ಹಾಗೂ ಬೆಳಗಾವಿ ತಾಲೂಕಿನಲ್ಲಿ ಭತ್ತ ಹೆಚ್ಚಾಗಿ ಬೆಳೆಯಲಾಗುತ್ತದೆ. ಉಳಿದಂತೆ ಸಜ್ಜೆ, ತೊಗರಿ, ಶೇಂಗಾ, ಗೋವಿನ ಜೋಳ, ಹತ್ತಿ ಸೇರಿ ಮುಂಗಾರಿನ ಬೆಳೆಗಳ ಬಿತ್ತನೆಗೆ ರೈತರು ಅಣಿಯಾಗಿದ್ದಾರೆ.

ಕೃಷಿ ಕಾರ್ಯಕ್ಕೆ ಜಮೀನತ್ತ ಹೊರಟ ಕಟಕೋಳದ ರೈತರು
ಕೃಷಿ ಕಾರ್ಯಕ್ಕೆ ಜಮೀನತ್ತ ಹೊರಟ ಕಟಕೋಳದ ರೈತರು

ಜೂನ್ ಮೂರನೇ ವಾರದಿಂದ ಮಳೆಯಾಧರಿಸಿ ಇನ್ನಿತರ ಬೆಳೆಗಳನ್ನು ಬೆಳೆಯಲಾಗುತ್ತದೆ. ಈ ಬಾರಿ ಜಿಲ್ಲೆಯಲ್ಲಿ ಒಟ್ಟು 7.10 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಕಾರ್ಯ ನಡೆಯಲಿದೆ ಎಂದು ಕೃಷಿ ಇಲಾಖೆ ನಿರೀಕ್ಷಿಸಿದ್ದು, ಅದಕ್ಕೆ ಬೇಕಾದ ಬೀಜಗಳನ್ನು ಸಂಗ್ರಹಿಸಿಟ್ಟಿದ್ದು, ಸಬ್ಸಿಡಿ ದರದಲ್ಲಿ ವಿತರಿಸುತ್ತಿದೆ. ಮೇ ಕೊನೆಯ ಅಥವಾ ಜೂನ್ ಮೊದಲ ವಾರದಲ್ಲಿ ಜಿಲ್ಲಾದ್ಯಂತ ಬಿತ್ತನೆ ಕಾರ್ಯ ಆರಂಭವಾಗಲಿದೆ.

ಜಿಲ್ಲೆಯಲ್ಲಿ ಮೇ ತಿಂಗಳಲ್ಲಿ ರೈತರ ಬೇಡಿಕೆಗಳಿಗಿಂತ ಹೆಚ್ಚು ಗೊಬ್ಬರ ಸಂಗ್ರಹವಿದೆ. ಯೂರಿಯಾ 12,130 ಟನ್ ಅಗತ್ಯವಿದ್ದು 46,103 ಟನ್ ದಾಸ್ತಾನಿದೆ. ಡಿಎಪಿ 7,500 ಟನ್ ಬೇಡಿಕೆ ಇದ್ದು, 17,646 ಟನ್ ಸಂಗ್ರಹವಿದೆ. ಎನ್‌ಪಿಕೆ 10,971 ಟನ್ ಅಗತ್ಯವಿದ್ದು, 60,416 ಟನ್ ದಾಸ್ತಾನಿದೆ ಹಾಗೂ ಎಂಒಪಿ 2,659 ಟನ್ ಬೇಡಿಕೆ ಇದ್ದು, 3,128 ಟನ್ ಸಂಗ್ರಹಿಸಲಾಗಿದೆ. ಮಳೆಗಾಲದಲ್ಲಿ ಬೇಡಿಕೆ ಹೆಚ್ಚಾಗಿದ್ದು, ಅಗತ್ಯಕ್ಕೆ ತಕ್ಕಂತೆ ಪೂರೈಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಮದುರ್ಗ ತಾಲೂಕಿನ ಚಂದರಗಿ ಗ್ರಾಮದಲ್ಲಿ ರೈತರು ಬಿತ್ತನೆಗೆ ಟ್ರಾೃಕ್ಟರ್ ಮೂಲಕ ಭೂಮಿ ಹಸನುಗೊಳಿಸಿದರು.
ರಾಮದುರ್ಗ ತಾಲೂಕಿನ ಚಂದರಗಿ ಗ್ರಾಮದಲ್ಲಿ ರೈತರು ಬಿತ್ತನೆಗೆ ಟ್ರಾೃಕ್ಟರ್ ಮೂಲಕ ಭೂಮಿ ಹಸನುಗೊಳಿಸಿದರು.


ಇನ್ನೂ ಹದಗೊಂಡಿಲ್ಲ ಇಳೆ :
ಏಪ್ರಿಲ್‌ನಲ್ಲಿ ಟ್ರಾೃಕ್ಟರ್ ಮೂಲಕ ನೇಗಿಲು ಹೊಡೆದಿದ್ದ ಜಮೀನುಗಳನ್ನು ಎತ್ತುಗಳ ಸಹಾಯದಿಂದ ಉಳುಮೆ ಮಾಡುತ್ತ ಹೊಲ ಹಸನಾಗಿಸಿ ಬಿತ್ತನೆಗೆ ಅಣಿಗೊಳಿಸುತ್ತಿದ್ದಾರೆ. ಆದರೆ, ಬಿತ್ತನೆ ಆರಂಭಿಸಲು ಭೂಮಿ ಇನ್ನು ಹದಗೊಂಡಿಲ್ಲ. ಹೀಗಾಗಿ ರೈತರು ಮಳೆಗಾಗಿ ಎದುರು ನೊಡುತ್ತಿದ್ದಾರೆ. ಸದ್ಯ ನೇಗಿಲ ಹಾಯ್ದ ಭೂಮಿ ಹಸನಾಗಿಸಿದ್ದೇವೆ. ಬಿತ್ತನೆ ಮಾಡುವಷ್ಟು ತೇವಾಂಶ ಭೂಮಿಯಲ್ಲಿಲ್ಲ. ಇನ್ನೆರಡು ವಾರದಲ್ಲಿ ದೊಡ್ಡ ಮಳೆಯಾಗಲಿದೆ. ಹೀಗಾಗಿ, ಅಗತ್ಯ ಎಲ್ಲ ಬೀಜ ಮತ್ತು ರಸಗೊಬ್ಬರ ಸಂಗ್ರಹಿಸಿಟ್ಟುಕೊಳ್ಳುತ್ತಿದ್ದೇವೆ ಎನ್ನುತ್ತಾರೆ ಕಾಗವಾಡದ ರೈತ ಬಸಪ್ಪ ಪಾಟೀಲ.

ಜಿಲ್ಲೆಯಲ್ಲಿ ಮುಂಗಾರು ಬಿತ್ತನೆಗೆ ಬೇಕಾಗಿರುವ ಗುಣಮಟ್ಟದ ಬೀಜ ಹಾಗೂ ರಸಗೊಬ್ಬರದ ದಾಸ್ತಾನ ಬೇಡಿಕೆಗಿಂತಲೂ ಹೆಚ್ಚಿದೆ. ರೈತರು ಆತಂಕಪಡಿವ ಅಗತ್ಯವಿಲ್ಲ. ರೈತ ಸಂಪರ್ಕ ಕೇಂದ್ರಗಳಿಂದ ಹಾಗೂ ಪಿಕೆಪಿಎಸ್ ಸೇರಿ ರಿಟೇಲ್ ಮಳಿಗೆಗಳ ಮೂಲಕ ಬಿತ್ತನೆ ಬೀಜ ವಿತರಣೆ ನಡೆದಿದೆ. ರಾಜಶೇಖರ ಬಿಜಾಪುರ, ಜಂಟಿ ಕೃಷಿ ನಿರ್ದೇಶಕ, ಬೆಳಗಾವಿ

ರಾಜಶೇಖರ ಬಿಜಾಪುರ, ಜಂಟಿ ಕೃಷಿ ನಿರ್ದೇಶಕ, ಬೆಳಗಾವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net