ಕಾರ್ಖಾನೆಗೆ ಭೂಮಿ ನೀಡಿದ ರೈತರಿಗೆ ಕೆಲಸ ಕೊಡಲು ಒಪ್ಪಿಗೆ

IMG-20240724-WA0133
Published on

ನಂಜನಗೂಡು: ತಾಲೂಕಿನ ಅಳಗಂಚಿ ಗ್ರಾಮದ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಗೆ ಭೂಮಿ ನೀಡಿದ ರೈತರು ಹಾಗೂ ಕೆಐಎಡಿಬಿ ಅಧಿಕಾರಿಗಳ ನಡುವೆ ಬುಧವಾರ ಸಭೆ ನಡೆದು 42 ರೈತರ ಮಕ್ಕಳನ್ನು ಹೊರಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ತೆಗೆದುಕೊಳ್ಳಲು ಕಾರ್ಖಾನೆ ಒಪ್ಪಿಗೆ ನೀಡಿರುವ ಪತ್ರವನ್ನು ಮುಷ್ಕರನಿರತ ರೈತರಿಗೆ ನೀಡಲಾಯಿತು.


ಒಪ್ಪಂದಕ್ಕೆ ಸ್ಪಂದಿಸಿದ ಕಾರ್ಖಾನೆಗೆ ಭೂಮಿ ನೀಡಿದ ರೈತರು ಕೆಲಸ ನೀಡುವಂತೆ ಒತ್ತಾಯಿಸಿ ಕಳೆದ 169 ದಿನಗಳಿಂದ ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು ಕೈಬಿಟ್ಟರು. ಕೊಟ್ಟ ಮಾತಿನಂತೆ ಕಾಯಂ ಉದ್ಯೋಗ ಕೊಡಲು ತಪ್ಪಿದರೆ ಮತ್ತೆ ತೀವ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದರು.
ಒಪ್ಪಂದದ ಅನುಸಾರ 42 ರೈತ ಮಕ್ಕಳನ್ನು, ಸದ್ಯಕ್ಕೆ ಹೊರಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ತೆಗೆದುಕೊಳ್ಳಲಾಗುತ್ತದೆ. ಕಾರ್ಖಾನೆಯಲ್ಲಿ ಕಾಯಂ ಉದ್ಯೋಗ ಮಾಡುತ್ತಿರುವ ಕಾರ್ಮಿಕರು ನಿವೃತ್ತಿ ಹೊಂದಿದ ನಂತರ ಅವರ ಸ್ಥಾನಗಳಿಗೆ ಈ 42 ಜನರನ್ನು ಕಾಯಂಗೊಳಿಸಲು ತೀರ್ಮಾನಿಸಲಾಗಿದೆ.

ಇವರೆಲ್ಲರಿಗೂ ಕಾನೂನಿನ ಪ್ರಕಾರ ನೀಡಬೇಕಿದ್ದ ಎಲ್ಲ ಸೌಲಭ್ಯಗಳನ್ನು ನೀಡಲಾಗುತ್ತದೆ. ಭವಿಷ್ಯದಲ್ಲಿ ಹೆಚ್ಚುವರಿ ಉದ್ಯೋಗಗಳು ಸೃಷ್ಟಿಯಾಗುವ ಸಂದರ್ಭದಲ್ಲಿ ಇವರನ್ನು ಆದ್ಯತೆ ಮೇರೆಗೆ ನೇಮಿಸಿಕೊಳ್ಳುವುದಾಗಿ ಕಾರ್ಖಾನೆಯವರು ತಿಳಿಸಿದ್ದಾರೆ. ಈ ಕುರಿತು ಒಮ್ಮತಕ್ಕೆ ಬರಲಾಗಿದೆ. ಈ ವಿಷಯವನ್ನು ಪ್ರಸ್ತಾಪಿಸಿ ಕೆಐಎಡಿಬಿಗೆ ಕಾರ್ಖಾನೆ ವತಿಯಿಂದ ಪತ್ರವನ್ನು ನೀಡಲಾಗಿದೆ. ಈ ವಿಷಯವನ್ನು ಕೆಐಎಡಿಬಿಯ ಪರವಾಗಿ ಸ್ಥಳಕ್ಕೆ ಆಗಮಿಸಿದ್ದ ಕೆಐಎಡಿಬಿಯ ಎಇಇ ಅರುಣ್‌ಕುಮಾರ್ ಹಾಗೂ ಎಇ ಶಬರೀಶ್ ತಿಳಿಸಿ, ರೈತ ಮುಖಂಡರಿಗೆ ಪತ್ರವನ್ನು ಹಸ್ತಾಂತರಿಸಿದರು.


ಜನಾಂದೋಲನಗಳ ಮಹಾಮೈತ್ರಿ ರಾಜ್ಯ ಸಂಚಾಲಕ ಉಗ್ರ ನರಸಿಂಹೇಗೌಡ, ಎಐಯುಟಿಯುಸಿ ಕಾರ್ಮಿಕ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ್ ಮೇಟಿ, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಬೊಕ್ಕಹಳ್ಳಿ ನಂಜುಂಡಸ್ವಾಮಿ, ಅಖಿಲ ಭಾರತ ರೈತ ಕೃಷಿ ಕಾರ್ಮಿಕ ಸಂಘಟನೆಯ ಜಿಲ್ಲಾ ಸಂಚಾಲಕ ಬಸವರಾಜು, ರೈತ ಮಹಿಳೆಯರಾದ ಕೆಂಬಾಳಮ್ಮ, ಲಕ್ಷ್ಮಮ್ಮ , ಮಹಾದೇವಮ್ಮ, ಪುಟ್ಟಮ್ಮ, ರಾಜು, ಪುನೀತ್, ಮಂಜು, ಮಹೇಶ್, ಮಹದೇವೇಗೌಡ, ಬಸವಣ್ಣ, ಮಹದೇವ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net