ಬಿಬಿಎಂಪಿ ವಾರ್ಡ್ ಹೆಚ್ಚಳಕ್ಕೆ ಸಮ್ಮತಿ

BBMP
Published on

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಾರ್ಡ್​ಗಳ ಸಂಖ್ಯೆಯನ್ನು 225ಕ್ಕೆ ಕಡಿಮೆಯಿಲ್ಲದಂತೆ 250ರವರೆಗೆ ಹೆಚ್ಚಿಸುವುದಕ್ಕೆ ವಿಧಾನಪರಿಷತ್ ಶುಕ್ರವಾರ ಅನುಮೋದನೆ ನೀಡಿದೆ. ವೈಜ್ಞಾನಿಕವಾಗಿ ವಾರ್ಡ್​ಗಳ ಮರುವಿಂಗಡಣೆ ಆಗಬೇಕು ಎಂಬ ಸಲಹೆ ನೀಡಿದೆ.

ಕರ್ನಾಟಕ ನಗರ ಪಾಲಿಕೆಗಳ (3ನೇ ತಿದ್ದುಪಡಿ) ಮಸೂದೆಯನ್ನು ಸಚಿವ ಸುರೇಶ್​ಕುಮಾರ್ ಮಂಡಿಸಿದರು. ಮುಂಬೈ ಮಾದರಿಯಲ್ಲಿ ಬಿಬಿಎಂಪಿಗೆ ಪ್ರತ್ಯೇಕ ಕಾಯ್ದೆ ರೂಪಿಸುವುದು, ವಾರ್ಡ್​ಗಳ ಸಂಖ್ಯೆಯನ್ನು ಈಗಿರುವ 198 ರಿಂದ 225 ಅಥವಾ ಗರಿಷ್ಠ 250ರವರೆಗೆ ಹೆಚ್ಚಳ ಹಾಗೂ ಮರುವಿಂಗಡಿಸಿದ ವಾರ್ಡ್​ಗಳು ಒಂದು ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಇರುವಂತೆ ನೋಡಿಕೊಳ್ಳುವುದು ಈ ಮಸೂದೆ ಉದ್ದೇಶವೆಂದು ವಿವರಿಸಿದರು.

ಬೆಂಗಳೂರು ಮಹಾನಗರದ ಸಮಗ್ರ ಅಭಿವೃದ್ಧಿ, ದಕ್ಷ ಆಡಳಿತದ ದೃಷ್ಟಿಯಿಂದ ಬಿಬಿಎಂಪಿ ವಿಭಜನೆ ಒಳಗೊಂಡು ಸಮಗ್ರ ವಿಧೇಯಕ ತರಬೇಕು ಎಂದು ಕಾಂಗ್ರೆಸ್​ನ ಹರಿಪ್ರಸಾದ್, ಎಸ್. ರವಿ, ಜೆಡಿಎಸ್​ನ ರಮೇಶ್ ಗೌಡ ಸಲಹೆ ನೀಡಿದರು.

ವಾರ್ಡ್ ಮರುವಿಂಗಡಣೆ ಸಂದರ್ಭ ದಲ್ಲಿ ಜನಸಂಖ್ಯೆ ಹಂಚಿಕೆ ಸಮಾನವಾಗಿರಬೇಕು. ಅಲ್ಲದೆ, ಒಂದು ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯೊಳಗೆ ವಾರ್ಡ್ ಇರುವಂತೆ ನೋಡಿಕೊಳ್ಳಬೇಕೆಂದು ಪ್ರತಿಪಕ್ಷಗಳು ನೀಡಿದ ಸಲಹೆಗೆ ಸಹಮತ ವ್ಯಕ್ತವಾಯಿತು. ಬಿಬಿಎಂಪಿ ವ್ಯಾಪ್ತಿಗೆ ಸೇರಿದ ಹಳ್ಳಿಗಳ ಮೂಲ ಸವಲತ್ತು ಅಭಿವೃದ್ಧಿ, ಕಂದಾಯ ಇಲಾಖೆ ಸಮಸ್ಯೆ ಬಗೆಹರಿಸಬೇಕು ಎಂದು ಹಲವು ಸದಸ್ಯರು ಒತ್ತಾಯಿಸಿದರು.

ಬಿಜೆಪಿಯ ಎನ್. ರವಿಕುಮಾರ್ ಮಾತನಾಡಿ, ಪ್ರಾದೇಶಿಕ ಅನ್ಯಾಯ ತಡೆಗಟ್ಟಿ, ಜನಸಂಖ್ಯೆ ಅಸಮತೋಲನ ನಿವಾರಿಸಲು ವಿಧೇಯಕ ನೆರವಾಗಲಿದೆ ಎಂದು ಹೇಳಿದರು. ಪರಿಣಾಮಕಾರಿ ಆಡಳಿತ, ಆರ್ಥಿಕ ಸಂಪನ್ಮೂಲ ವೃದ್ಧಿ ಮತ್ತು ಉತ್ತರದಾಯಿತ್ವ ನಿಗದಿಗೆ ಅನುಕೂಲವಾಗುತ್ತದೆ ಎಂದು ತೇಜಸ್ವಿನಿಗೌಡ ತಿಳಿಸಿದರು. ಬಳಿಕ ಮಸೂದೆಯನ್ನು ಅನುಮೋದಿಸುವುದಕ್ಕೆ ಸದನ ಅಸ್ತು ಎಂದಿತು. ಚರ್ಚೆಯಲ್ಲಿ ಪ್ರಸನ್ನಕುಮಾರ್, ಕಾಂತರಾಜ್, ಅಪ್ಪಾಜಿಗೌಡ, ಬಸವರಾಜ ಹೊರಟ್ಟಿ, ಪಿ.ಆರ್. ರಮೇಶ್ ಭಾಗವಹಿಸಿದ್ದರು.

ನಾಮನಿರ್ದೇಶನ ಅಧಿಕಾರ

ಬೆಂಗಳೂರು: ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ, ಕನ್ನಡ ವಿಶ್ವ ವಿದ್ಯಾಲಯ ಗೌರ್ನಿಂಗ್ ಕೌನ್ಸಿಲ್, ಸಂಸ್ಕೃತ ವಿ.ವಿ. ಶಾಸನ ಸಭೆ ಹಾಗೂ ರಾಜ್ಯ ಗ್ರಂಥಾಲಯ ಪ್ರಾಧಿಕಾರ ಸಮಿತಿಗೆ ವಿಧಾನ ಪರಿಷತ್ತಿನ ಒಬ್ಬ ಸದಸ್ಯರನ್ನು ಚುನಾಯಿಸುವ ಬದಲು ನಾಮ ನಿರ್ದೇಶನ ಮಾಡುವ ಅಧಿಕಾರವನ್ನು ಸಭಾಪತಿಗೆ ನೀಡಲಾಯಿತು. ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಪ್ರಸ್ತಾವನೆ ಮಂಡಿಸಿದರು. ಯಾವುದೇ ಚರ್ಚೆಯಿಲ್ಲದೆ ಸಭಾಪತಿ ಈ ಪ್ರಸ್ತಾವನೆ ಅಂಗೀಕರಿಸಿದರು. ಸಚಿವ ಶ್ರೀರಾಮುಲು ಮಂಡಿಸಿದ ಕರ್ನಾಟಕ ಸಾಂಕ್ರಾಮಿಕ ರೋಗಗಳ ವಿಧೇಯಕವೂ ಹೆಚ್ಚಿನ ಚರ್ಚೆಯಿಲ್ಲದೆ ಅನುಮೋದನೆ ಪಡೆಯಿತು.

198 ವಾರ್ಡ್​ಗಳಿಗೆ ಚುನಾವಣೆ ಮಾಡಿ

ಬೆಂಗಳೂರು: ಬಿಬಿಎಂಪಿಯನ್ನು 250 ವಾರ್ಡ್​ಗಳಿಗೆ ಹೆಚ್ಚಿಸಬಾರದು ಹಾಗೂ 198 ವಾರ್ಡ್​ಗಳಿಗೇ ಚುನಾವಣೆ ನಡೆಸಬೇಕೆಂದು ಸರ್ಕಾರವನ್ನು ಮಾಜಿ ಮೇಯರ್​ಗಳು ಆಗ್ರಹಿಸಿದ್ದಾರೆ.

ಈಗ ಇರುವ 198 ವಾರ್ಡ್​ಗಳಿಗೆ ಮೂಲಸೌಕರ್ಯ ಕಲ್ಪಿಸಲು ಸಾಧ್ಯ ವಾಗಿಲ್ಲ. 250 ವಾರ್ಡ್​ಗಳಿಗೆ ಹೆಚ್ಚಿಸುವ ನಿರ್ಧಾರ ಅವೈಜ್ಞಾನಿಕ ಎಂದು ಮಾಜಿ ಮೇಯರ್​ಗಳಾದ ಎಂ. ರಾಮಚಂದ್ರಪ್ಪ, ಜೆ. ಹುಚ್ಚಪ್ಪ ಹೇಳಿದ್ದಾರೆ.

100 ವಾರ್ಡ್​ಗಳಿದ್ದ ಬೆಂಗಳೂರನ್ನು 198 ವಾರ್ಡ್​ಗಳಿಗೆ ಹೆಚ್ಚಿಸಲಾಯಿತು. ಹೊಸದಾಗಿ ಸೇರ್ಪಡೆಯಾದ ವಾರ್ಡ್​ಗಳಿಗೆ ಈವರೆಗೆ ಮೂಲಸೌಕರ್ಯ ಕೊಡಲು, ನೀರು, ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಿಲ್ಲ. ನಿವಾಸಿಗಳಿಗೆ ಎ- ಖಾತಾ ನೀಡಿಲ್ಲ. ಹೀಗಿರುವಾಗ ಸರ್ಕಾರ ಇನ್ನೂ 52 ವಾರ್ಡ್​ಗಳನ್ನು ಹೆಚ್ಚಿಸಿ ಬೆಂಗಳೂರು ನಗರವನ್ನು ಅದ್ವಾನ ಮಾಡಲು ಹೊರಟಿದೆ. ಕೆಂಪೇಗೌಡರ ಕನಸನ್ನು ನುಚ್ಚುನೂರು ಮಾಡಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರೊನಾ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸದೆ ಜನಪ್ರಿಯತೆ ಕಳೆದುಕೊಂಡಿರುವ ಬಿಜೆಪಿ ಸರ್ಕಾರ, ಚುನಾವಣೆಗೆ ಹೋದರೆ ಸೋಲುವ ಭೀತಿಯಿಂದ ವಾರ್ಡ್​ಗಳನ್ನು ಹೆಚ್ಚಿಸುವ ಷಡ್ಯಂತ್ರ ಮಾಡುತ್ತಿದೆ. ಪ್ರಸ್ತುತ ಬಿಬಿಎಂಪಿ ಕೌನ್ಸಿಲ್ ಸಭಾಂಗಣದಲ್ಲಿ ಸದಸ್ಯರು, ಸಂಸದರು, ಪರಿಷತ್ ಸದಸ್ಯರಿಗೆ ಕುಳಿತುಕೊಳ್ಳಲು ಜಾಗವಿಲ್ಲ. 250 ಸದಸ್ಯರಾದರೆ, ಮತ್ತೆ ಹೊಸ ಸಭಾಂಗಣ ಕಟ್ಟಬೇಕಾಗುತ್ತದೆ. ಬಿಬಿಎಂಪಿಯಲ್ಲಿ ಅಧಿಕಾರ ಹಿಡಿಯಲು ಮತ್ತು ಚುನಾವಣೆ ಮುಂದೂಡುವ ಏಕೈಕ ಉದ್ದೇಶದಿಂದ ಸರ್ಕಾರ ಈ ತಂತ್ರ ಅನುಸರಿಸುತ್ತಿದೆ ಎಂದು ದೂರಿದ್ದಾರೆ.

ನಗರವನ್ನು ಸೌಲಭ್ಯರಹಿತ ಮಾಡಿದರೆ ಹೂಡಿಕೆದಾರರು ಎಲ್ಲಿ ಬರುತ್ತಾರೆ? ಈ ಹಿಂದೆ ಪಾಲಿಕೆ ಆಡಳಿತಾಕಾರಿಗಳ ಅವಧಿಯಲ್ಲಿ ಎಷ್ಟು ಅದ್ವಾನಗಳಾದವು? ಪಾಲಿಕೆಯ ಎಷ್ಟು ಸ್ವತ್ತುಗಳನ್ನು ಅಡಮಾನ ಮಾಡಲಾಗಿದೆ ಎಂಬ ಅರಿವಿದ್ದರೂ ಬಿಬಿಎಂಪಿಯಲ್ಲಿ ಮತ್ತೆ ಆಡಳಿತಾಧಿಕಾರಿ ನೇಮಕ ಮಾಡಲಾಗಿದೆ. ಶಾಸಕರು ಏಕಪಕ್ಷೀಯ ಆಡಳಿತ ನಡೆಸಲು ಈ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net