ವೀರಭದ್ರ ದೇವರ ಅಗ್ನಿ ಮಹೋತ್ಸವ ಸಂಪನ್ನ

4srt-3
Published on

ಶಿರಹಟ್ಟಿ: ತಾಲೂಕಿನ ಮಾಗಡಿ ಗ್ರಾಮದಲ್ಲಿ ಶ್ರಾವಣ ಮಾಸದಲ್ಲಿ ನಡೆಯುವ ಶ್ರೀ ವೀರಭದ್ರೇಶ್ವರ ದೇವರ ಮೂರ್ತಿ ಮೆರವಣಿಗೆ ಹಾಗೂ ಅಗ್ನಿ ಮಹೋತ್ಸವ ಬುಧವಾರ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಯೊಂದಿಗೆ ನೆರವೇರಿತು.
ಬೆಳಗ್ಗೆ 5 ಗಂಟೆಗೆ ಶ್ರೀ ವೀರಭದ್ರ ದೇವರಿಗೆ ಮಹಾರುದ್ರಾಭಿಷೇಕ ನಂತರ ಅಗ್ನಿಕುಂಡಕ್ಕೆ ಎಡೆ ತಂದು ಗಂಗೆ ಪೂಜೆ ನೆರವೇರಿಸಿ ಬಳಿಕ ಅಲಂಕೃತ ಪಲ್ಲಕ್ಕಿಯಲ್ಲಿ ಶ್ರೀ ವೀರಭದ್ರ ದೇವರ ಮೂರ್ತಿ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಕೆಲವರು ಇಷ್ಟಾರ್ಥ ಸಿದ್ಧಿಗಾಗಿ ಗಲ್ಲ, ತುಟಿ, ನಾಲಿಗೆಯಲ್ಲಿ ಶಸ್ತ್ರಗಳನ್ನು ಹಾಕಿಕೊಂಡು ಭಕ್ತಿ ಪರಾಕಾಷ್ಠತೆ ಸಮರ್ಪಿಸಿದರು. ಮೆರವಣಿಗೆಯುದ್ದಕ್ಕೂ ಸಮ್ಮಾಳ, ನಂದಿಧ್ವಜಗಳ ಕುಣಿತ, ಕರಡಿ ಮಜಲು ಸಾಥ್ ನೀಡಿದವು. ಮಧ್ಯಾಹ್ನ ದೇವಸ್ಥಾನದ ಆವರಣದಲ್ಲಿದ್ದ ಅಗ್ನಿಕುಂಡದಲ್ಲಿ ಭಕ್ತರು ಅಗ್ನಿಹಾಯುವ ದೃಶ್ಯ ರೋಮಾಂಚನವನ್ನುಂಟು ಮಾಡಿತು. ಮಾಗಡಿ, ಸೊರಟೂರ, ಗೊಜನೂರ, ಶಿಗ್ಲಿ ಗ್ರಾಮದ ಪುರವಂತರು ಭಾಗವಹಿಸಿ ತಮ್ಮ ವಡಪುಗಳನ್ನು ಪವಡಿಸುವ ಮೂಲಕ ಭಕ್ತರ ಗಮನ ಸೆಳೆದರು.
ವಿರೂಪಾಕ್ಷ ಅಣ್ಣಿಗೇರಿ, ಫಕೀರಶೆಟ್ರ ಅಂಗಡಿ, ಶೇಖಪ್ಪ ಬಡ್ನಿ, ಪರಪ್ಪ ಶಿವಶಿಂಪಿ, ಫಕೀರಯ್ಯ ಹಿರೇಮಠ, ಈರಪ್ಪ ಪಲ್ಲೇದ, ಶೇಖಪ್ಪ ಅಂಗಡಿ, ವಿರೂಪಾಕ್ಷ ನವಲಿ, ಕಾಳಪ್ಪ ಬಡಿಗೇರ, ಮಂಜಪ್ಪ ಕಾಶೆಟ್ಟಿ, ಮಲ್ಲಿಕಾರ್ಜುನ ಪತ್ತಾರ, ಮುದಕಯ್ಯ ಮಠಪತಿ, ಗಂಗಯ್ಯ ಹಿರೇಮಠ, ಈರಯ್ಯ ಕಲ್ಯಾಣಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net