

ಶಿರಹಟ್ಟಿ: ಹರಿವ ಹಾವಿನ ಗಂಡ.. ಉರಿವ ಕಿಚ್ಚಿನ ಗಂಡ.. ಕದನ ಪ್ರಚಂಡ.. ಮೂರು ಲೋಕದ ಗಂಡ.. ಗಂಡುಗಲಿ ಶ್ರೀ ವೀರಭದ್ರೇಶ್ವರನೇ ಬಹುಪರಾಕ್…
ಹೀಗೆ ವೀರಭದ್ರೇಶ್ವರನ ಒಡಪುಗಳನ್ನು ಹೇಳುತ್ತಾ ಅಸಂಖ್ಯಾತ ಭಕ್ತರು ಭಕ್ತಿಯ ಪರವಶದಲ್ಲಿ ಮೈ ಮರೆಯುವಂತೆ ಮಾಡಿದ ಪ್ರಸಂಗ ಮಾಗಡಿ ಗ್ರಾಮದಲ್ಲಿ ನಡೆಯಿತು.
ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಗವಾಗಿ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಅಗ್ನಿ ಮಹೋತ್ಸವದಲ್ಲಿ ಪುರವಂತರ ಒಡಪುಗಳು ಭಕ್ತರನ್ನು ತನ್ಮಯತೆಯಲ್ಲಿ ತೇಲುವಂತೆ ಮಾಡಿತು. ಹರ ಹರ ಮಹಾದೇವ ಎಂಬ ಜಯಘೋಷಗಳ ನಡುವೆ ವೀರಪುರವಂತರು ಹಾಗೂ ಭಕ್ತರು ಅಗ್ನಿಕುಂಡದಲ್ಲಿ ಅಗ್ನಿ ಹಾಯ್ದು ಭಕ್ತಿ ಸಮರ್ಪಿಸಿದರು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ನಡೆಯಿತು. ಸೋಮವಾರ ಅಹೋರಾತ್ರಿ ಭಜನೆ, ಜಾಗರಣೆ ಜರುಗಿತು. ಮಂಗಳವಾರ ಬೆಳಗ್ಗೆ 5 ಗಂಟೆಗೆ ಶ್ರೀ ವೀರಭದ್ರ ದೇವರಿಗೆ ಮಹಾರುದ್ರಾಭಿಷೇಕ, ವೀರಗಾಸೆ ಪೂಜೆ ನಡೆಯಿತು. 8 ಗಂಟೆಗೆ ಸ್ವಾಮಿಯ ಉತ್ಸವ ಮೂರ್ತಿಯ ಮೆರವಣಿಗೆ ಸಾಗಿತು. ಪಲ್ಲಕ್ಕಿ ಸಮೇತ ಪುರವಂತರು, ನಂದಿ ಧ್ವಜಗಳ ಕುಣಿತ ಮತ್ತು ಸಮ್ಮಾಳಗಳ ಝೇಂಕಾರ ಸೇರಿದಂತೆ ಸಕಲ ವಾದ್ಯಗಳು ಮೆರವಣಿಗೆಗೆ ಮೆರುಗು ನೀಡಿದವು. ಗಂಗಾ ಪೂಜೆಯ ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪುರವಂತರಿಂದ ವೀರಭದ್ರ ದೇವರ ಪರಾಕುಗಳನ್ನು ಹೇಳುತ್ತಾ. ಖಡ್ಗವನ್ನು ಝಳಪಿಸುತ್ತ, ವೀರನಾಟ್ಯವನ್ನಾಡುತ್ತಾ ವೀರಭದ್ರ ದೇವರ ಚರಿತ್ರೆ, ಶಿವನ ಅವತಾರ ಸೇರಿದಂತೆ ವಿವಿಧ ಆಧ್ಯಾತ್ಮಿಕ ಕಥೆಗಳನ್ನು ತಮ್ಮದೇ ಧಾಟಿಯಲ್ಲಿ ಹೇಳುತ್ತಾ, ಶಸ್ತ್ರ ಪವಾಡ ಮಾಡಿದರು.
ಭಕ್ತರು ಗಲ್ಲ, ನಾಲಿಗೆ ಹಾಗೂ ತುಟಿಗೆ ಶಸ್ತ್ರಗಳನ್ನು ಧರಿಸಿ ಭಕ್ತಿ ಸಮರ್ಪಿಸಿದರು. ಮಾಗಡಿ ಸೇರಿದಂತೆ ವಿವಿಧ ಗ್ರಾಮಗಳಿಂದ ಬಂದ ಭಕ್ತರು ವೀರಭದ್ರೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಸಮಿತಿ ವತಿಯಿಂದ ಅನ್ನದಾಸೋಹ ಜರುಗಿತು.
ವೇದಮೂರ್ತಿ ಫಕೀರಯ್ಯ ಶಾಸ್ತ್ರೀಗಳು ಹಿರೇಮಠ, ಶೇಖಣ್ಣ ಬಡ್ನಿ, ಶೇಖಪ್ಪ ಅಂಗಡಿ, ಫಕೀರಶೆಟ್ರ ಅಂಗಡಿ, ವಿರುಪಾಕ್ಷಪ್ಪ ನವಲಿ, ಮಂಜುನಾಥ ಕಾಶೆಟ್ಟಿ, ಈರಣ್ಣ ಪಲ್ಲೇದ, ಲೋಕಯ್ಯ ಪೂಜಾರ, ಈರಯ್ಯ ಕಲ್ಯಾಣಮಠ, ಮುತ್ತು ವರವಿ, ಮಲಕಾಜಪ್ಪ ಪತ್ತಾರ, ಜಗದೀಶ ಮುಳಗುಂದ, ಚಂದ್ರು ಪಾಟೀಲ, ಗಂಗಯ್ಯ ಹಿರೇಮಠ ಇತರರಿದ್ದರು.