

ಹನೂರು: ತಾಲೂಕಿನ ಲೊಕ್ಕನಹಳ್ಳಿಯ ಶ್ರೀ ಸಂಪಿಗೇಶ್ವರಸ್ವಾಮಿ ದೇಗುಲದಲ್ಲಿ ಮಹಾ ಶಿವರಾತ್ರಿಯ ಹಿನ್ನೆಲೆಯಲ್ಲಿ ಶನಿವಾರ ಅಗ್ನಿ ಕುಂಡೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಮಹಾ ಶಿವರಾತ್ರಿ ಹಿನ್ನೆಲೆಯಲ್ಲಿ ಶುಕ್ರವಾರ ಹರಕೆ ಹೊತ್ತ ಭಕ್ತರು ಬಾಯಿಬೀಗ ಹಾಕಿಸಿಕೊಂಡು ಮೆರವಣಿಗೆ ನಡೆಸಿದ್ದರು. ರಾತ್ರಿ ದೇಗುಲದಲ್ಲಿ ವಿಶೇಷ ಪೂಜೆ ನೆರವೇರಿಸಲಾಗಿದ್ದು, ಭಕ್ತರು ಶಿವನ ಸ್ಮರಣೆಯೊಂದಿಗೆ ಜಾಗರಣೆಯಲ್ಲಿ ಭಾಗಿಯಾಗಿದ್ದರು. ಬೆಳಗಿನ ಜಾವ ಅಗ್ನಿ ಕುಂಡೋತ್ಸವದ ಅಂಗವಾಗಿ ಸ್ವಾಮಿಗೆ ಪುಷ್ಪಗಳಿಂದ ಅಲಂಕರಿಸಿ ವಿವಿಧ ಅಭಿಷೇಕ, ವಿಶೇಷ ಪೂಜೆ ಸಲ್ಲಿಸಲಾಯಿತು. ಜತೆಗೆ ದೇಗುಲದ ಮುಂಭಾಗದಲ್ಲಿ ಹಾಕಲಾಗಿದ್ದ ಮೂರು ಕವಡಿನ ಕಂಬದಲ್ಲಿನ ಅಗ್ನಿ ಕುಂಡಕ್ಕೂ ಧೂಪದಾರತಿ ಬೆಳಗಿಸಿ ಪೂಜೆ ಸಲ್ಲಿಸಲಾಯಿತು. ಬೆಳಗ್ಗೆ 6 ವೇಳೆಯಲ್ಲಿ ನೆರೆದಿದ್ದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅರ್ಚಕರು ಅಗ್ನಿ ಕುಂಡವನ್ನು ಎತ್ತುವುದರ ಮೂಲಕ ಅಗ್ನಿ ಕುಂಡೋತ್ಸವವು ವಿಜೃಂಭಣೆಯಿಂದ ನೆರವೇರಿತು.
ಹನೂರು, ಉದ್ದನೂರು, ಬೆಳತ್ತೂರು, ಸಿರಗೋಡು, ಕಂಡಯ್ಯನಪಾಳ್ಯ, ಮಾಲಾಪುರ, ಬೂದಿಪಡಗ, ಪಿ.ಜಿ.ಪಾಳ್ಯ ಸೇರಿದಂತೆ ವಿವಿಧೆಡೆಯಿಂದ ಭಕ್ತರು ಆಗಮಿಸಿದ್ದರು. ಕುಂಡೋತ್ಸವದ ಬಳಿಕ ದೇಗುಲಕ್ಕೆ ತೆರಳಿ ದೇವರ ದರ್ಶನ ಪಡೆದರು. ಹನೂರು ಪೊಲೀಸ್ ಠಾಣೆ ವತಿಯಿಂದ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.