

ಕೆ.ಆರ್.ಪೇಟೆ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿಯಾಗಿವೆ. ಇವುಗಳ ಅಭಿವೃದ್ಧಿಗೆ ಎಲ್ಲರೂ ಸಹಕಾರ ನೀಡಬೇಕು. ಆಗ ಮಾತ್ರ ರೈತರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಅಘಲಯ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎನ್.ಎಸ್.ಮಂಜೇಗೌಡ ಹೇಳಿದರು.
ತಾಲೂಕಿನ ಅಘಲಯ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಯಾವುದೇ ಸಂಘ ಅಥವಾ ಬ್ಯಾಂಕ್ ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ಸಾಲ ನೀಡುವ ಯೋಜನೆ ಇಲ್ಲ. ಆದರೆ ನಮ್ಮ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಮಾತ್ರ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ. ಹಾಗಾಗಿ ರೈತರು ಸಂಘದ ಷೇರುದಾರರಾಗುವ ಮೂಲಕ ಬಡ್ಡಿ ಇಲ್ಲದೇ ಇರುವ ಸಾಲ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಕಳೆದ ಸಾಲಿನಲ್ಲಿ ರೈತರಿಗೆ ಸುಮಾರು 4.58 ಕೋಟಿ ರೂ ಸಾಲ ನೀಡಲಾಗಿದೆ. ಅದೇ ರೀತಿ ಮಹಿಳಾ ಸ್ವಸಹಾಯ ಸಂಘಗಳಿಗೆ ಸುಮಾರು 79 ಲಕ್ಷ ರೂ ಸಾಲ ನೀಡಲಾಗಿದೆ ಎಂದು ತಿಳಿಸಿದರು.
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎ.ಎನ್.ಜಾನಕೀರಾಂ ಹಾಗೂ ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎ.ಎಸ್.ರಮೇಶ್ ಮಾತನಾಡಿದರು. ಸಂಘದ ಕಾರ್ಯದರ್ಶಿ ಎ.ಮುರುಳೀಧರ್ ವರದಿ ಮಂಡಿಸಿದರು. ಇದೇ ಸಂದರ್ಭದಲ್ಲಿ ಸಂಘಕ್ಕೆ ನೂತನವಾಗಿ ನಾಯಸಿಂಗನಹಳ್ಳಿ ಮತ್ತು ಸಿಂಗಾಪುರ ಗ್ರಾಮಗಳನ್ನು ಸೇರ್ಪಡೆ ಮಾಡಿಕೊಳ್ಳಲು ಒಮ್ಮತದಿಂದ ತೀರ್ಮಾನ ಕೈಗೊಳ್ಳಲಾಯಿತು.
ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಶ್ರೀಧರ್, ಎಂಡಿಸಿಸಿ ಬ್ಯಾಂಕ್ ಅಧಿಕಾರಿ ರಾಘವೇಂದ್ರ, ಸಂಘದ ಉಪಾಧ್ಯಕ್ಷೆ ಎನ್.ಸಿ.ಚಂದ್ರಿಕಾ, ನಿರ್ದೇಶಕರಾದ ಎ.ಎಸ್.ಶ್ರೀಧರ್, ಎ.ವೈ.ವಿಜಯಕುಮಾರ್, ಎನ್.ಆರ್.ರಾಮೇಗೌಡ, ದೊಡ್ಡಸೋಮನಹಳ್ಳಿ ಮಂಜುನಾಥ್, ಡಿ.ಆರ್.ಕುಮಾರಸ್ವಾಮಿ, ನಾಗರಘಟ್ಟ ಕೃಷ್ಣೇಗೌಡ, ಮಂಜು, ಅಘಲಯ ನಾಗಮ್ಮ, ದೇವಮ್ಮ, ರಾಜೇಶ್, ಹಿರಿಯ ಸಹಕಾರಿ ನಂಜಪ್ಪ, ನಿವೃತ್ತ ಸೈನಿಕ ಎ.ಟಿ.ಶ್ಯಾಮಣ್ಣ ಇತರರಿದ್ದರು.