ಸಾಗುವಳಿದಾರರ ಒಕ್ಕಲೆಬ್ಬಿಸುವ ಕಾರ್ಯ ಖಂಡನೀಯ

land, clearing, farmer, opposition,
Published on

ಜಮೀನು ತೆರವುಗೊಳಿಸುವ ಕ್ರಮಕ್ಕೆ ರೈತ ಸಂಘದ ವಿರೋಧ

ಚನ್ನಗಿರಿ: ತಾಲೂಕಿನ ಶೃಂಗಾರಬಾಗು ಗ್ರಾಮದ 52 ಎಕರೆ ಜಮೀನಿನಲ್ಲಿ 16 ಕುಟುಂಬಗಳ ಸಾಗುವಳಿ ತೆರವುಗೊಳಿಸಿದ ಅರಣ್ಯ ಇಲಾಖೆ ಕ್ರಮ ಖಂಡನೀಯ ಎಂದು ಹುಚ್ಚವ್ವನಹಳ್ಳಿ ಮಂಜುನಾಥ್ ಬಣದ ತಾಲೂಕು ರೈತ ಸಂಘದ ಅಧ್ಯಕ್ಷ ಯಲೋದಹಳ್ಳಿ ರವಿಕುಮಾರ್ ತಿಳಿಸಿದರು.

ಅರಣ್ಯ ಇಲಾಖೆ ಭೂಮಿಯಲ್ಲಿ ರೈತರು ಅನೇಕ ವರ್ಷಗಳಿಂದ ಉಳುಮೆ ಮಾಡಿಕೊಂಡು ಜೀವನ ಕಟ್ಟಿಕೊಂಡಿದ್ದರು. ಇಲಾಖೆ ಅಧಿಕಾರಿಗಳು ನ್ಯಾಯಾಲಯದ ಆದೇಶದ ನೆಪದಲ್ಲಿ ಜೆಸಿಬಿ ಮೂಲಕ ಸಾಗುವಳಿ ತೆರವುಗೊಳಿಸಿದ್ದು, ರೈತರ ಕುಟುಂಬಗಳ ಬದುಕು ಕಿತ್ತುಕೊಂಡಂತಾಗಿದೆ. ಅವರನ್ನು ಉಪವಾಸ ಬೀಳುವಂತೆ ಮಾಡಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಜಮೀನಿನಿಂದ ತೆರವುಗೊಳಿಸುವುದು ಸುಲಭ. ಅವರಿಗೆ ಜೀವನ ಕಟ್ಟಿಕೊಳ್ಳಲು ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು. ಇಲ್ಲದಿದ್ದರೆ ಸಾಗುವಳಿ ಮಾಡುವಂಥ ಜಮೀನು ಬಿಟ್ಟುಕೊಡಬೇಕು. ಎರಡನ್ನು ಮಾಡದೇ ಯಾವುದೇ ಮಾಹಿತಿ ನೀಡದೆ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸುಮಾರು 50 ವರ್ಷಗಳಿಂದ ಸಾಗುವಳಿ ಮಾಡುತ್ತ ಬಂದಿರುವ ಬಗ್ಗೆ ಎಲ್ಲ ದಾಖಲೆಗಳಿದ್ದರೂ ಪರಿಶೀಲನೆ ಮಾಡಿಲ್ಲ. ಏಕಾಏಕಿ ಅರಣ್ಯ ಇಲಾಖೆ ಎಸಿಎಫ್ ರತ್ನಪ್ರಭಾ ಮತ್ತು ಆರ್‌ಎಫ್‌ಒ ಜಗದೀಶ್ ನೇತೃತ್ವದ ತಂಡ ಜಮೀನು ತೆರವು ಕಾರ್ಯ ಕೈಗೊಂಡಿತು. ಆಗ ನಮ್ಮ ಸಂಘಟನೆಯ ಕಾರ್ಯಕರ್ತರು ಸ್ಥಳಕ್ಕೆ ಹೋಗಿ ತೆರವು ಕಾರ್ಯ ತಡೆದು ಚನ್ನಗಿರಿ, ಮಾಯಕೊಂಡ ಕ್ಷೇತ್ರದ ಶಾಸಕರು ಮತ್ತು ಜಿಲ್ಲಾಧಿಕಾರಿ ಗಮನಕ್ಕೆ ತಂದಾಗ ಇನ್ನೆರಡು ದಿನಗಳಲ್ಲಿ ಸ್ಥಳ ಪರಿಶೀಲನೆ ನಡೆಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದರು.

ಆದರೆ, ಶಾಸಕರು ಮತ್ತು ಜಿಲ್ಲಾಧಿಕಾರಿ ಸ್ಥಳ ಪರಿಶೀಲನೆ ನಡೆಸುವ ಮೊದಲೇ ಅರಣ್ಯ ಇಲಾಖೆ ಸಿಬ್ಬಂದಿ ಗುರುವಾರ ಬೆಳಗ್ಗೆಯೇ ರೈತರು ಸಾಗುವಳಿ ಮಾಡುತ್ತಿದ್ದ ಜಮೀನಿನಲ್ಲಿ ಸಸಿ ನೆಡಲು ಕಳುಹಿಸಿರುವುದು ಸರಿಯಲ್ಲ. ಇದರ ಹಿಂದಿರುವ ಉದ್ದೇಶವಾದರೂ ಏನು? ಎಂದು ಪ್ರಶ್ನಿಸಿದ ಅವರು, ಜಿಲ್ಲಾಧಿಕಾರಿ ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಬಡ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ಪ್ರಮುಖರಾದ ಪ್ರಭಾಕರ್, ಗಂಡುಗಲಿ, ಕುಮಾರ್, ಹನುಮಂತಪ್ಪ, ಆಂಜನೇಯ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net