

ಮಡಿಕೇರಿ
ಬಹಳಷ್ಟು ಜನರಿಗೆ ಬೆಳಗ್ಗೆ ದಿನಪತ್ರಿಕೆ ಮೇಲೆ ಕಣ್ಣಾಡಿಸದಿದ್ದರೆ ಅಂದಿನ ದಿನವೇ ಆರಂಭವಾಗುವುದಿಲ್ಲ. ಹೀಗೆ ಬೆಳ್ಳಂಬೆಳಗ್ಗೆ ಪ್ರತಿ ಮನೆಗೂ ದಿನಪತ್ರಿಕೆಗಳು ತಲುಪಬೇಕು ಅಂದರೆ ಅದರ ಹಿಂದೆ ಪತ್ರಿಕಾ ವಿತರಕರು ಶ್ರಮ ದೊಡ್ಡದಿದೆ. ಜಗತ್ತು ಎಚ್ಚರವಾಗುವ ಮೊದಲೇ ಪತ್ರಿಕಾ ವಿತರಕರು ತಮ್ಮ ಕೆಲಸ ಮುಗಿಸಿರುತ್ತಾರೆ. ಇದಲ್ಲದೇ ಪತ್ರಿಕೋದ್ಯಮದಲ್ಲಿ ಪತ್ರಿಕಾ ವಿತರಕರ ಪಾತ್ರ ಮಹತ್ವವಾಗಿದೆ. ಪತ್ರಿಕಾ ವಿತರಕರು ಇಲ್ಲದಿದ್ದರೆ ಪತ್ರಿಕೋದ್ಯಮದ ಸರಪಳಿ ಪೂರ್ಣ ಆಗುವುದಿಲ್ಲ. ಕೊಡಗಿನಂತಹ ಬಿರುಸು ಮಳೆ, ಮೈ ಕೊರೆಯುವ ಚಳಿ ಇರುವ ಪ್ರದೇಶಗಳಲ್ಲಿ ಪತ್ರಿಕಾ ವಿತರಕರ ದಿನಚರಿ ಒಂದು ರೀತಿಯಲ್ಲಿ ಹೋರಾಟವೇ ಸರಿ. ಸದ್ದಿಲ್ಲದೆ ಸೇವೆ ಸಲ್ಲಿಸುವ ಪತ್ರಿಕಾ ವಿತರಕರನ್ನು ಸ್ಮರಿಸುವ ಸಲುವಾಗಿ ಪ್ರತಿ ವರ್ಷ ಸೆ. 4ರಂದು ಪತ್ರಿಕಾ ವಿತರಕರ ದಿನ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ವಿಜಯವಾಣಿಯ ಹೆಮ್ಮೆಯ ಪತ್ರಿಕಾ ವಿತರಕರು ಲೌಡ್ ಸ್ಪೀಕರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊAಡಿದ್ದಾರೆ.
ಕನ್ನಡ ದಿನಪತ್ರಿಕೆಗಳು ರಾಜ್ಯ, ರಾಷ್ಟç ಮತ್ತು ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳು, ಮಾಹಿತಿ ಮತ್ತು ಅಭಿಪ್ರಾಯಗಳನ್ನು ಜನರಿಗೆ ಒದಗಿಸುತ್ತವೆ. ಸಮಾಜದ ವಿವಿಧ ಸ್ತರಗಳ ಜನರನ್ನು ತಲುಪುತ್ತವೆ ಮತ್ತು ಪ್ರಜಾಪ್ರಭುತ್ವದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ದಿನಪತ್ರಿಕೆಗಳು ಪ್ರಮುಖ ಘಟನೆಗಳು, ರಾಜಕೀಯ ಬೆಳವಣಿಗೆಗಳು, ಆರ್ಥಿಕ ಸಂಗತಿಗಳು, ಕ್ರೀಡೆ, ಮನರಂಜನೆ, ವಿಜ್ಞಾನ ಮತ್ತು ತಂತ್ರಜ್ಞಾನ ಮುಂತಾದ ವಿಷಯಗಳ ಬಗ್ಗೆ ಮಾಹಿತಿ ಒದಗಿಸುತ್ತವೆ. ಪತ್ರಿಕೆಗಳು ವಸ್ತುನಿಷ್ಠವಾಗಿರಬೇಕು ಮತ್ತು ಸತ್ಯವನ್ನು ಆಧರಿಸಿ ವರದಿ ಮಾಡಬೇಕು. ಪತ್ರಿಕಾ ವಿತರಣೆ ನಮ್ಮ ದೊಡ್ಡ ಜವಾಬ್ದಾರಿ.
ದಿವ್ಯಾ, ಚಾರ್ವಿ ಮೆಸ್ ಮತ್ತು ಪೇಪರ್ ಏಜನ್ಸಿ, ನಾಪೋಕ್ಲು
ಇಂದು ಮೊಬೈಲ್ ಫೋನುಗಳ ಮೂಲಕ ಎಷ್ಟೆ ವಿಚಾರಗಳೂ ಗೊತ್ತಾದರೂ ಪತ್ರಿಕೆಗಳನ್ನು ಓದಿದಂತೆ ಆಗುವುದಿಲ್ಲ. ಪತ್ರಿಕೆ ಓದುವುದರಿಂದ ಪ್ರತಿ ನಿತ್ಯ ದೇಶ ವಿದೇಶದಲ್ಲಿ ನಡೆಯುವ ವಿದ್ಯಮಾನಗಳ ಬಗ್ಗೆ ಗೊತ್ತಾಗುತ್ತದೆ. ನೈಜ ಸುದ್ದಿಗಳು ಇಂದು ಪತ್ರಿಕೆಗಳಲ್ಲಿ ಮಾತ್ರ ಓದುವುದಕ್ಕೆ ಸಿಗುತ್ತದೆ. ಅನೇಕರು ದಿನದ ಪ್ರಾರಂಭ ಮಾಡುವುದು ದಿನಪತ್ರಿಕೆಗಳನ್ನು ಓದಿದ ನಂತರ. ಕಡಿಮೆ ಬೆಲೆಯಲ್ಲಿ ಹೆಚ್ಚು ಮಾಹಿತಿ ತಿಳಿದುಕೊಳ್ಳಬಹುದಾದ ಮಾಧ್ಯಮ ಪತ್ರಿಕೆಯಾಗಿದೆ. ಇಂಥ ಪತ್ರಿಕೆಯನ್ನು ಮನೆ ಮನೆಗೆ ತಲುಪಿಸುವ ವಿತರಕರಿಗೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ಸಣ್ಣ ಮಳಿಗೆ ನೀಡುವಂತಾಗಬೇಕು.
ಮಾಲಂಬಿ ದಿನೇಶ್, ಪತ್ರಿಕಾ ವಿತರಕ, ಶನಿವಾರಸಂತೆ
ಪತ್ರಿಕೆ ಓದುವುದರಿಂದ ನಮ್ಮ ಜ್ಞಾನ ಹೆಚ್ಚಾಗುತ್ತದೆ. ಸಮಾಜದಲ್ಲಿ ಸಕ್ರಿಯವಾಗಿ ಭಾಗವಹಿಸಲು ಪತ್ರಿಕೆಗಳು ಸಹಕಾರ ನೀಡುತ್ತವೆ. ಪತ್ರಿಕೆಗಳನ್ನು ಓದುವುದರಿಂದ ಮಾಹಿತಿ ಮತ್ತು ಮನೋರಂಜನೆ ಸಿಗುತ್ತದೆ. ಸ್ಥಳೀಯ, ರಾಜ್ಯ, ರಾಷ್ಟç, ಅಂತಾರಾಷ್ಟಿçÃಯ ವಿಷಯಗಳು ಓದುಗರ ಅರಿವಿಗೆ ಬರುತ್ತದೆ. ಪತ್ರಿಕೆಗಳನ್ನು ಓದುವ ಮೂಲಕ ಭಾಷೆಯ ಬೆಳವಣಿಗೆ ಸಾಧ್ಯವಾಗುತ್ತದೆ. ಇಂಥ ಪತ್ರಿಕೆಗಳ ವಿತರಕರು ನಾವು ಎಂಬುದು ನಮಗೆ ಹೆಮ್ಮೆಯ ವಿಷಯ.
ಪ್ರಸಾದ್, ಪತ್ರಿಕಾ ವಿತರಕ, ಕಾನೂರು.
ಪತ್ರಿಕೆ ಓದುವ ಅಭ್ಯಾಸ ಇರುವವರಿಗೆ ಇದನ್ನು ಬಿಟ್ಟಿರಲು ಅಸಾಧ್ಯ. ಈಗಿನ ತಂತ್ರಜ್ಞಾನದ ಬಳಕೆ ಎಷ್ಟೇ ಇದ್ದರೂ ಪತ್ರಿಕೆಗಳನ್ನು ಓದುವ ಹವ್ಯಾಸ ಇದ್ದವರಿಗೆ ಮನಸಿನಲ್ಲಿರುವ ದುಗುಡಗಳನ್ನು ಹೊರಹಾಕುವುದು ಸುಲಭ. ಸ್ಪಷ್ಟವಾದ ಶಿರ್ಷಿಕೆಗಳು, ಸರಳ ಭಾಷೆ, ಸ್ಥಳೀಯ ಸುದ್ದಿಗಳ ಉತ್ತಮ ಮೆಲುಕು ಭಾನುವಾರದ ವಿಶೇಷ ಸಂಚಿಕೆಗಳು ಪ್ರೇರಣಾದಾಯಕ ಆಗಿರುತ್ತದೆ. ವಿಷಯವಾರು ಸುದ್ದಿಗಳನ್ನು ಓದುವುದರಿಂದ ಮನಸ್ಸಿಗೆ ಹಿತಾನುಭವ ತಂದುಕೊಡುತ್ತದೆ. ಕೊಡಗಿನಂಥ ಮಳೆಯ ಅಬ್ಬರವಿರುವ ಪ್ರದೇಶಗಳಲ್ಲಿ ಸಕಾಲಕ್ಕೆ ಪತ್ರಿಕೆ ತಲುಪಿಸುವಲ್ಲಿ ವಿತರಕರ ಪಾತ್ರ ಬಹಳ ದೊಡ್ಡದು.
ಮಂಜುಳಾ, ಪತ್ರಿಕಾ ವಿತರಕಿ, ಮಡಿಕೇರಿ
ಕಳೆದ 38 ವರ್ಷಗಳಿಂದ ಪತ್ರಿಕಾ ವಿತರಕನಾಗಿ ಇಷ್ಟಪಟ್ಟು ಕೆಲಸ ಮಾಡುತ್ತಿದ್ದೇನೆ. ಇದರಿಂದಲೇ ಜೀವನ ಕಟ್ಟಿಕೊಂಡಿದ್ದೇನೆ. ನಮ್ಮ ಮೂಲಕ ಪತ್ರಿಕೆಗಳು ಓದುಗರಿಗೆ ತಲುಪಿಸುವ ಖುಷಿ ಇದೆ. ದೇಶ ವಿದೇಶಗಳಲ್ಲಿ ನಡೆದ ಸುದ್ದಿಗಳು, ಉದ್ಯೋಗದ ಮಾಹಿತಿಗಳು, ವಿದ್ಯಾರ್ಥಿಗಳಿಗೆ ಬೇಕಾದಂಥ ಅಗತ್ಯ ಮಾಹಿತಿಗಳು ಈ ಮೂಲಕ ಪ್ರತಿ ಮನೆಯ ಓದುಗರಿಗೆ ತಲುಪುತ್ತಿದೆ. ಇಷ್ಟೇ ಅಲ್ಲದೆ ಪತ್ರಿಕೆಯಿಂದ ಹಲವಾರು ಕುಟುಂಬಗಳು ಜೀವನ ಸಾಗಿಸುತ್ತಿವೆ. ವಿದ್ಯಾರ್ಥಿಗಳಿಗೂ ಕೂಡ ಪಾರ್ಟ್ ಟೈಮ್ ಕೆಲಸ ಸಿಗುತ್ತಿದೆ. ವಿದ್ಯಾರ್ಥಿಗಳು ಮೊಬೈಲ್ ಬಳಕೆ ಕಡಿಮೆ ಮಾಡಿ, ದಿನ ಪತ್ರಿಕೆ ಹೆಚ್ಚು ಓದಲು ಸಮಯ ನೀಡಬೇಕಿದೆ.
ಟಿ.ಜಿ. ಸತೀಶ್, ಜನಪ್ರಿಯ ನ್ಯೂಸ್ ಏಜೆನ್ಸಿ, ಮಡಿಕೇರಿ
ಇಂದಿನ ಮೊಬೈಲ್ ಯುಗದಲ್ಲಿ ಪತ್ರಿಕೆ ಓದುವವರ ಸಂಖ್ಯೆ ತುಂಬಾ ಕಡಿಮೆಯಾಗಿದೆ. ಅದರಲ್ಲೂ ಇಂದಿನ ಯುವ ಜನತೆ ಪತ್ರಿಕೆ ಓದುವುದನ್ನು ಬಹುತೇಕ ಬಿಟ್ಟಿದ್ದಾರೆ. ಪತ್ರಿಕೆ ಓದುವ ಹವ್ಯಾಸವನ್ನು ಎಲ್ಲರೂ ಬೆಳೆಸಿಕೊಳ್ಳುವಂತಾಗಬೇಕು. ಪತ್ರಿಕೆ ಓದುವುದರಿಂದ ಆಗುವ ಅನುಲೂಲತೆ ಬಗ್ಗೆ ಅರಿತುಕೊಂಡು ಯುವ ಜನತೆ ಪತ್ರಿಕೆಯನ್ನು ಕೊಂಡು ಓದುವಂತಾಗಬೇಕು. ಪತ್ರಿಕಾ ವಿತರಕರಾಗಿ ಓದುಗರು ಮತ್ತು ಪತ್ರಿಕೆಗಳ ಮಧ್ಯೆ ನಾವು ಸೇತುವೆಯಂತೆ ಕೆಲಸ ಮಾಡುತ್ತಿದ್ದೇವೆ. ಈ ಕೆಲಸದಿಂದ ಸಮಾಜದಲ್ಲಿ ಉತ್ತಮ ಸ್ಥಾನ ಮಾನ ಸಿಕ್ಕಿದೆ.
ಶಿವಕುಮಾರ್, ಪತ್ರಿಕಾ ವಿತರಕ, ಸೋಮವಾರಪೇಟೆ
ಪತ್ರಿಕೆಗಳಿಂದಾಗಿಯೇ ನಮಗೆ ವಿವಿಧ ಭಾಷೆಗಳ ಪರಿಚಯ ಆಗಿದೆ. ಸುಮಾರು 65 ವರ್ಷಗಳಿಂದ ಪತ್ರಿಕೆಗಳ ವಿತರಣೆ ಮಾಡುತ್ತಿದ್ದೇನೆ. ನಮ್ಮಲ್ಲಿಗೆ ದೇಶದ ಬಹುತೇಕ ಭಾಷೆಗಳ ಪ್ರಮುಖ ಪತ್ರಿಕೆಗಳು ಬರುತ್ತದೆ. ಹಿಂದಿನ ದಿನಗಳಿಗೆ ಹೋಲಿಸಿದರೆ ಈಗ ಪತ್ರಿಕೆ ಓದುವವರ ಸಂಖ್ಯೆ ತುಂಬಾ ಕಡಿಮೆ ಆಗಿದೆ. ಆದರೂ ಸುದ್ದಿಯ ವಿಷಯದಲ್ಲಿ ಪತ್ರಿಕೆಗಳು ಇಂದಿಗೂ ವಿಶ್ವಾಸಾರ್ಹತೆ ಉಳಿಸಿಕೊಂಡಿದೆ. ಕನ್ನಡ ಹೆಚ್ಚಿನ ಪತ್ರಿಕೆಗಳ ವಿತರಕರಾಗಿ ನಾವು ಹೆಮ್ಮೆಯಿಂದ ಕೆಲಸ ಮಾಡುತ್ತಿದ್ದೇವೆ.
ವಿ.ಪಿ. ಪ್ರಕಾಶ್, ಹಿರಿಯ ಪತ್ರಿಕಾ ವಿತರಕ, ಕುಶಾಲನಗರ
ಈಗ ಎಲ್ಲಾ ವಾಟ್ಸಪ್‌ನಲ್ಲಿ ಸಿಗುವುದರಿಂದ ಪತ್ರಿಕೆಯನ್ನು ಏಕೆ ಓದಬೇಕು ಎಲ್ಲ ಮೊದಲೇ ಸುದ್ದಿ ಗೊತ್ತಾಗುತ್ತದೆ ಎಂದು ಹೇಳುವ ಓದುಗರು ಇದ್ದಾರೆ. ಆದರೆ ಪತ್ರಿಕೆಗಳನ್ನು ಓದುವಾಗ ಸಿಗುವ ಆನಂದ ವಾಟ್ಸಪ್ ಮೂಲಕ ಓದುವಾಗ ಸಿಗುವುದಿಲ್ಲ. ನಾವು ಹಳೆಬರಷ್ಟೇ ಈ ಪತ್ರಿಕಾ ವಿತರಣೆ ವೃತ್ತಿ ಮುಂದುವರಿಸುತ್ತಿದ್ದೇವೆ. ಹೊಸದಾಗಿ ಯಾರು ಕೂಡ ಈ ವೃತ್ತಿ ಮಾಡಲು ಮುಂದೆ ಬರುತ್ತಿಲ್ಲ. ಇಂಥ ಸವಾಲಿನ ಮಧ್ಯೆಯೇ ಪತ್ನಿ ಮತ್ತು ಮಗನ ಸಹಕಾರದಿಂದ ಕಳೆದ 24 ವರ್ಷಗಳಿಂದ ಈ ಕೆಲಸ ಮಾಡುತ್ತಿದ್ದೇನೆ.
ದೀಪಕ್ ದಾಸ್, ಪತ್ರಿಕಾ ವಿತರಕ, ವಿರಾಜಪೇಟೆ
ವಿಜಯವಾಣಿ ಸೇರಿದಂತೆ ವಿವಿಧ ಪತ್ರಿಕೆಗಳನ್ನು ಸುಮಾರು 2 ಸಾವಿರ ಮನೆಗೆಳಿಗೆ ಪ್ರತಿದಿನ ಹಂಚಿಕೆ ಮಾಡುತ್ತೇವೆ. ಮೊದಲೆಲ್ಲಾ ಪತ್ರಿಕೆ ಹಾಕುವಾಗ ಖುಷಿ ಇತ್ತು. ಈಗ ಈ ಕೆಲಸಕ್ಕೆ ಹುಡುಗರೇ ಸಿಗುವುದಿಲ್ಲ. ಪತ್ರಿಕೆ ಓದುವವರ ಸಂಖ್ಯೆಯೂ ಕಡಿಮೆ ಆಗುತ್ತಿರುವುದು ನಮ್ಮ ಗಮನಕ್ಕೆ ಬರುತ್ತಿದೆ. ಆದರೆ ಪತ್ರಿಕೆಗಳ ವಿಶ್ವಾಸಾರ್ಹತೆ ಕಡಿಮೆ ಆಗಿಲ್ಲ. ಸುದ್ದಿಗಳನ್ನು ಖಚಿತಪಡಿಸಿಕೊಳ್ಳಲು ಪತ್ರಿಕೆ ಓದುವವರು ಇಂದಿಗೂ ಇದ್ದಾರೆ ಎನ್ನುವುದೇ ಹೆಮ್ಮೆಯ ಸಂಗತಿ.
ಆರ್. ಚಂದ್ರಯ್ಯ, ಪತ್ರಿಕಾ ವಿತರಕ, ಕುಶಾಲನಗರ
ಪತ್ರಿಕಾ ವಿತರಣೆಯನ್ನು ಹೆಮ್ಮೆಯ ಕಾಯಕವಾಗಿ ಮುಂದುವರಿಸಿಕೊAಡು ಬಂದಿದ್ದೇನೆ. ಬಹುತೇಕ ಹಿರಿಯರಿಗೆ ಬೆಳಗ್ಗೆ ಕೈಗೆ ದಿನಪತ್ರಿಕೆ ಸಿಕ್ಕಿಲ್ಲ ಎಂದರೆ ಅವರ ದಿನವೇ ಆರಂಭ ಆಗುವುದಿಲ್ಲ. ನಿಯಮಿತ ಓದುಗರ ಮೇಲೆ ಪತ್ರಿಕೆಗಳ ಆಕರ್ಷಣೆ ಕಡಿಮೆಯೇನೂ ಅಲ್ಲ. ಪತ್ರಿಕೆಗಳನ್ನು ಮನೆ ಮನೆಗೆ ತಲುಪಿಸುವಲ್ಲಿ ವಿತರಕರ ಪಾತ್ರ ದೊಡ್ಡದಿದೆ. ಈ ಕೆಲಸವನ್ನು ಖುಷಿಯಿಂದ ಮಾಡುತ್ತಿದ್ದೇವೆ.
ಅರುಣ, ಪತ್ರಿಕಾ ವಿತರಕ, ಪೊನ್ನಂಪೇಟೆ