ಯಾವುದೇ ವೃತ್ತಿಯನ್ನಾದರೂ ಪ್ರೀತಿಯಿಂದ ಮಾಡಬೇಕು

agents day
Published on

ಮಡಿಕೇರಿ:

ಯಾವುದೇ ವೃತ್ತಿಯನ್ನಾದರೂ ಪ್ರೀತಿಯಿಂದ ಮಾಡಿದರೆ ಭವಿಷ್ಯದಲ್ಲಿ ಬೆಳೆಯುವ ಎಲ್ಲಾ ಅವಕಾಶಗಳಿವೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಹೇಳಿದರು. ಅಖಿಲ ಕರ್ನಾಟಕ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಕೊಡಗು ಘಟಕ ಮತ್ತು ಕೊಡಗು ಪತ್ರಕರ್ತರ ಸಂಘದ ವತಿಯಿಂದ ಇಲ್ಲಿನ ಪತ್ರಿಕಾಭವನದಲ್ಲಿ ಗುರುವಾರ ಆಯೋಜಿಸಿದ್ದ ಪತ್ರಿಕಾ ವಿತರಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೊಡಗಿನಂಥ ಪ್ರದೇಶದಲ್ಲಿ ಪತ್ರಿಕೆ ವಿತರಣೆ ಶ್ರಮದ ಕೆಲಸ. ಪತ್ರಿಕೆ ವಿತÀರಿಸುವವರು, ಮನೆ ಮನೆಗೆ ತಲುಪಿಸುವವರನ್ನು ಗುರುತಿಸುವುದು ಪತ್ರಿಕಾ ವಲಯ ಮತ್ತು ಓದುಗರ ಕರ್ತವ್ಯ. ಪತ್ರಿಕಾ ವಿತರಕರಿಗಾಗಿಯೇ ಕ್ಷೇಮಾಭಿವೃದ್ಧಿ ನಿಧಿ ರಚನೆ ಆಗುವ ಅಗತ್ಯವಿದೆ. ಪತ್ರಿಕೆ ವಿತರಿಸುತ್ತಲೇ ಜೀವನದಲ್ಲಿ ಮುಂದೆ ಬಂದವರ ಅನೇಕ ಉದಾಹರಣೆಗಳಿವೆ. ಪತ್ರಿಕಾ ವಿತರಕರೇ ಯಶಸ್ವಿ ಪತ್ರಕರ್ತ ಆಗಿದ್ದೂ ಇದೆ. ವೃತ್ತಿಯಲ್ಲಿ ವಿಭಿನ್ನ ಆಲೋಚನೆ ಮೂಲಕ ಬೆಳೆಯುವ ಸಾಧ್ಯತೆಯನ್ನು ವಿತರಕರು ಬಳಸಿಕೊಳ್ಳುವಂತಾಗಬೇಕು ಎಂದರು.

ಹಿರಿಯ ಪತ್ರಕರ್ತ ಜಿ. ಚಿದ್ವಿಲಾಸ್ ಮಾತನಾಡಿ ಪತ್ರಿಕಾ ವಿತರಣೆ ಕ್ಲಿಷ್ಟಕರ ಕೆಲಸ. ಬಂದ್‌ನAಥ ಸಂದರ್ಭದಲ್ಲೂ ಕೆಲಸ ನಿಲ್ಲುವುದಿಲ್ಲ. ಆರ್ಥಿಕ ಕಾರಣಗಳಿಂದ ಹೊರತಾಗಿ ಅಭಿಮಾನದಿಂದಲೂ ಪತ್ರಿಕಾ ವಿತರಣೆ ಮಾಡುವವರು ಇದ್ದಾರೆ. ಕೊಡಗಿನಲ್ಲಿ ವಿತರಕರು ಶಿಸ್ತು ಬದ್ಧವಾಗಿ ಹಣ ಪಾವತಿಸುವುದನ್ನು ಪಾಲಿಸಿಕೊಂಡು ಬಂದಿದ್ದಾರೆ. ಆದರೆ ಓದಗರಿಂದ ಈ ಮಟ್ಟಕ್ಕೆ ಬಿಲ್ ವಸೂಲಿ ಆಗುತ್ತಿಲ್ಲ. ಪತ್ರಿಕೆಗಳ ಪ್ರಸರಣಕ್ಕೆ ಈಚೆಗೆ ಸ್ವಲ್ಪ ಮಟ್ಟಿಗೆ ಪೆಟ್ಟಾಗಿರಬಹುದು. ಆದರೆ ವಿಶ್ವಾಸಾರ್ಹತೆ ಉಳಿಸಿಕೊಂಡಿವೆ.

ಮುದ್ರಣ ಮಾಧ್ಯಮ ಓದುಗರ ಮೇಲೆ ಶಾಶ್ವತ ಪರಿಣಾಮ ಬೀರುತ್ತದೆ. ಮುದ್ರಣ ಮಾಧ್ಯಮಗಳಿಂದ ಹಲವು ವಿತರಕರು ಬದುಕು ಕಟ್ಟಿಕೊಂಡಿದ್ದಾರೆ. ಈಗಿನ ಯುವಜನತೆಗೆ ಪತ್ರಿಕೆ ಓದುವ ತಾಳ್ಮೆ ಇಲ್ಲ. ಒಬ್ಬ ಓದುಗ ಪತ್ರಿಕೆ ಓದುವುದು ನಿಲ್ಲಿಸಿದರೆ ಸಮಾಜದ ಸಾಗುವ ದಾರಿ ಸರಿಯಿಲ್ಲ ಎಂದು ಅರ್ಥ. ಮಾಜಿ ರಾಷ್ಟçಪತಿ ಡಾ. ಅಬ್ದುಲ್ ಕಲಾಂ ಕೂಡ ಪತ್ರಿಕಾ ವಿತರಣೆ ಮಾಡುತ್ತಿದ್ದರು ಎಂದು ನೆನಪಿಸಿಕೊಂಡ ಅವರು, ಪತ್ರಿಕಾ ವಿತರಕರಿಗಾಗಿ ಆರಂಭವಾಗಲಿರುವ ಕ್ಷೇಮಾಭಿವೃದ್ದಿ ನಿಧಿಗೆ ತಮ್ಮ ಸಂಸ್ಥೆಯಿAದ 1 ಲಕ್ಷ ರೂ. ಆರಂಭಿಕ ಮೊತ್ತ ನೀಡುವುದಾಗಿ ಪ್ರಕಟಿಸಿದರು.

ಹಿರಿಯ ಪತ್ರಕರ್ತ ಟಿ.ಪಿ. ರಮೇಶ್ ಮಾತನಾಡಿ ಜನ ನಾಡಿ ಅರಿತು ಕೆಲಸ ಮಾಡುವವ ಪತ್ರಿಕಾ ವಿತರಕ. ಎಂಥದ್ದೇ ಸಂದರ್ಭ ಬಂದರೂ ಪತ್ರಿಕೆಗಳನ್ನು ಮನೆಗಳಿಗೆ ತಲುಪಿಸುವ ಜವಾಬ್ದಾರಿ ಇರುತ್ತದೆ. ಬೇರೆ ಜಿಲ್ಲೆಗೆ ಹೋಲಿಸಿದರೆ ಕೊಡಗಿನಲ್ಲಿ ವಿತರಕರಿಗೆ ಸಮಸ್ಯೆ ಹೆಚ್ಚು. ಕೊಡಗಿನ ಮೂಲೆ ಮೂಲೆಗೂ ಪತ್ರಿಕೆ ತಲುಪಿಸುವಲ್ಲಿ ವಿತರಕರ ಶ್ರಮ ಗಣನೀಯ. ಪತ್ರಿಕಾ ವಿತರಕ ಪತ್ರಿಕೆಯ ಜೀವನಾಡಿಯಾಗಿರುತ್ತಾರೆ. ಸಂಘಟನಾತ್ಮಕ ದೃಷ್ಟಿಕೋನದಲ್ಲಿ ವಿತರಕರ ಕ್ಷೇಮಾಭಿವೃದ್ಧಿ ಸಂಘ ಕೆಲಸ ಮಾಡಬೇಕು. ಸಾಮಾನ್ಯ ವಿತರಕನಿಗೂ ನ್ಯಾಯ ಸಿಗುವಂತಾಗಬೇಕು. ವಿತರಕರ ಭವಿಷ್ಯದ ಬಗ್ಗೆ ಚಿಂತನೆ ನಡೆಸಬೇಕು.

ಮುದ್ರಣ ಮಾಧ್ಯಮಕ್ಕೆ ಭವಿಷ್ಯ ಇಲ್ಲ ಎಂದು ಹೇಳಲಾಗುತ್ತಿತ್ತು. ಆದರೆ ಮುದ್ರಣ ಮಾಧ್ಯಮ ಕೊಡುವ ಅನುಭವ ಬೇರೆ ಮಾಧ್ಯಮದಿಂದ ಸಿಗಲು ಸಾಧ್ಯವಿಲ್ಲ. ಮಡಿಕೇರಿಯಲ್ಲಿ ಪತ್ರಿಕಾ ವಿತರಕರಿಗೆ ಭವನ ನಿರ್ಮಾಣ ಅಗತ್ಯವಿದೆ. ಇದರ ಪ್ರಯೋಜನ ಎಲ್ಲಾ ವಿತರಕರಿಗೂ ಸಿಗುವಂತಾಗಬೇಕು ಎಂದು ಹೇಳಿದರು.

ಹಿರಿಯ ವಿತರಕ ಸುಂಟಿಕೊಪ್ಪದ ಎಂ.ಎ. ವಸಂತ ಮಾತನಾಡಿ ಪತ್ರಿಕಾ ವಿತರಕರಿಗೆ ಸರ್ಕಾರದ ಸವಲತ್ತುಗಳು ಸಿಗಬೇಕಿದೆ. ವಿತರಕರ ಸಂಘಟನೆ ರಾಜ್ಯಮಟ್ಟದಲ್ಲಿ ಸರ್ಕಾರದ ಮುಂದೆ ಈ ಸಂಬAಧ ಇಟ್ಟಿದೆ. ದಿನಗಳು ಉರುಳುತ್ತಿದೆಯೇ ಹೊರತೂ ಯಾವುದೇ ಪ್ರಯೋಜನ ಆಗಿಲ್ಲ. ಸರ್ಕಾರಿ ನೌಕರರಿಗಾದರೆ ಬಡ್ತಿ, ನಿವೃತ್ತಿ, ಮಾಸಾಶನ ಇದೆ. ಇಂಥ ಅವಕಾಶಗಳು ಪತ್ರಿಕಾ ವಿತರಕರಿಗೂ ಸಿಗುವಂತಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ. ಮುರಳೀಧರ ಮಾತನಾಡಿ ಕೊಡಗಿನಲ್ಲಿ ಪತ್ರಿಕಾ ವಿತರಕ ಆಗಿದ್ದ ಆರ್. ಗುಂಡೂರಾವ್ ರಾಜ್ಯದ ಮುಖ್ಯಮಂತ್ರಿ ಆಗಿದ್ದರು. ವಿತರಕರ ಕ್ಷೇಮಾಭಿವೃದ್ಧಿ ನಿಧಿ ಜಿಲ್ಲೆಯಲ್ಲಿ ಬೇಗ ಕಾರ್ಯಾರಂಭ ಅಗಲಿ ಎಂದು ಆಶಿಸಿದರು.

ಅಖಿಲ ಕರ್ನಾಟಕ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಕೊಡಗು ಘಟಕ ಅಧ್ಯಕ್ಷ ಟಿ.ಜಿ. ಸತೀಶ್, ಮಡಿಕೇರಿಯ ಹಿರಿಯ ಓದುಗ ಪಿ.ಎ.ನಾಣಯ್ಯ, ಕೊಡಗು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ, ಪಿ.ಎಂ. ರವಿ, ಅರುಣ್ ಕೂರ್ಗ್, ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಪತ್ರಿಕಾ ವಿತರಕರು ಕಾರ್ಯಕ್ರಮದಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net