ಸುದ್ದಿಗಳ ವಾಹಕ ಪತ್ರಿಕಾ ವಿತರಕ

agents day1
Published on

ಮಡಿಕೇರಿ :

ಬಹಳಷ್ಟು ಓದುಗರಿಗೆ ಬೆಳಗ್ಗೆ ದಿನಪತ್ರಿಕೆ ಮೇಲೆ ಕಣ್ಣಾಡಿಸದಿದ್ದರೆ ಅಂದಿನ ದಿನವೇ ಆರಂಭವಾಗುವುದಿಲ್ಲ. ಹೀಗೆ ಬೆಳ್ಳಂಬೆಳಗ್ಗೆ ಪ್ರತಿ ಮನೆಗೂ ದಿನಪತ್ರಿಕೆಗಳು ತಲುಪಬೇಕು ಅಂದರೆ ಅದರ ಹಿಂದೆ ಪತ್ರಿಕಾ ವಿತರಕರು ಶ್ರಮ ದೊಡ್ಡದಿದೆ. ಜಗತ್ತು ಎಚ್ಚರವಾಗುವ ಮೊದಲೇ ಪತ್ರಿಕಾ‌ ವಿತರಕರು ತಮ್ಮ ಕೆಲಸ‌ ಮುಗಿಸಿರುತ್ತಾರೆ. ಇದಲ್ಲದೇ ಪತ್ರಿಕೋದ್ಯಮದಲ್ಲಿ ಪತ್ರಿಕಾ ವಿತರಕರ ಪಾತ್ರ ಮಹತ್ವವಾಗಿದೆ. ಪತ್ರಿಕಾ ವಿತರಕರು ಇಲ್ಲದಿದ್ದರೆ ಪತ್ರಿಕೋದ್ಯಮದ ಸರಪಳಿ ಪೂರ್ಣ ಆಗುವುದಿಲ್ಲ. ಕೊಡಗಿನಂತಹ ಬಿರುಸು ಮಳೆ, ಮೈ ಕೊರೆಯುವ ಚಳಿ ಇರುವ ಪ್ರದೇಶಗಳಲ್ಲಿ ಪತ್ರಿಕಾ ವಿತರಕರ ದಿನಚರಿ ಒಂದು ರೀತಿಯಲ್ಲಿ ಹೋರಾಟವೇ ಸರಿ. ಜಗತ್ತನ್ನು ತಲ್ಲಣಗೊಳಿಸಿದ್ದ ಕೋವಿಡ್‌-19 ಸಂದರ್ಭದಲ್ಲಿಯೂ ಪತ್ರಿಕಾ ವಿತರಕರು ತಮ್ಮ ಜೀವದ ಹಂಗು ತೊರೆದು ಪತ್ರಿಕೆಗಳನ್ನು ಮನೆ ಮನೆಗಳಿಗೆ ತಲುಪಿಸುವ ಕೆಲಸ ಯಶಸ್ವಿಯಾಗಿ ಮಾಡುವ ಮೂಲಕ ಇವರೂ ಕೊರೊನಾ ವಾರಿಯರ್ಸ್‌ಗಳಾಗಿ ಗುರುತಿಸಿಕೊಂಡಿದ್ದರು.

ಸದ್ದಿಲ್ಲದೆ ಸೇವೆ ಸಲ್ಲಿಸುವ ಪತ್ರಿಕಾ‌ ವಿತರಕರನ್ನು ಸ್ಮರಿಸುವ ಸಲುವಾಗಿ ಪ್ರತಿ ವರ್ಷ ಸೆ. 4ರಂದು ಪತ್ರಿಕಾ ವಿತರಕರ ದಿನ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ವಿಜಯವಾಣಿಯ ಹೆಮ್ಮೆಯ ಪತ್ರಿಕಾ ವಿತರಕರು ತಮ್ಮ ಸಂಕಷ್ಟಗಳ ಬಗ್ಗೆ ಪತ್ರಿಕೆ ಜತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಮಡಿಕೇರಿಯ ಮಳೆ, ಚಳಿಯಲ್ಲಿ ಬೆಳ್ಳಂಬೆಳಗ್ಗೆ ಪತ್ರಿಕೆಗಳ ವಿತರಣೆ ದೊಡ್ಡ ಸವಾಲು. ನಮಗೊಂದು ಶೆಡ್ ನಿರ್ಮಿಸಿಕೊಡಿ ಎನ್ನುವ ಬೇಡಿಕೆ ಇನ್ನೂ ಈಡೇರಿಲ್ಲ. ಅನೀಶ್ ಕಣ್ಮಣಿ ಜಾಯ್ ಅವರು ಜಿಲ್ಲಾಧಿಕಾರಿ ಆಗಿದ್ದ ವೇಳೆ ಒಪ್ಪಿದ್ದರು. ಆದರೆ ನಗರಸಭೆಯಿಂದ ಯಾವುದೇ ಸ್ಪಂದನೆ ಇಲ್ಲ. ಮೈಸೂರಿನಲ್ಲಿ ಈ ರೀತಿಯ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ನಮ್ಮಲ್ಲೂ ಒಂದು ಶೆಡ್ ವ್ಯವಸ್ಥೆ ಮಾಡಿದರೆ ಪತ್ರಿಕಾ ವಿತರಕರಿಗೆ ಅನುಕೂಲ ಆಗುತ್ತದೆ.

- ಟಿ.ಜಿ. ಸತೀಶ್, ಪತ್ರಿಕಾ ವಿತರಕ, ಮಡಿಕೇರಿ

 ಸರ್ಕಾರ ಪತ್ರಿಕಾ ವಿತರಕರನ್ನು ಅಸಂಘಟಿತ ಕಾರ್ಮಿಕರೆಂದು ಪರಿಗಣಿಸಿ ನಮಗೆ ಸಿಗುವ ಸೌಲಭ್ಯಗಳನ್ನು ಕೊಡಿಸುವ ಮೂಲಕ ರಕ್ಷಣೆಗೆ ಧಾವಿಸಬೇಕು ವರ್ಷಪೂರ್ತಿ ಕೆಲಸ ಮಾಡುವ ನಮಗೆ ವಿಶೇಷ ‌ಭತ್ಯೆ ಹಾಗೂ ಮಕ್ಕಳ ಶಿಕ್ಷಣಕ್ಕೆ ನೆರವು ನೀಡಬೇಕು. ಆಗ ಮಾತ್ರ ನಾವು ಮಾಡುತ್ತಿರುವ ಕೆಲಸದಲ್ಲಿ ಸಾರ್ಥಕತೆ ಸಿಗುತ್ತದೆ

- ಅಖಿಲೇಶ್ ಎನ್., ಪತ್ರಿಕಾ ವಿತರಕ, ಸಿದ್ದಾಪುರ ಮಾಲ್ದಾರೆ

ಮೊದಲೆಲ್ಲ ಜನ ಪತ್ರಿಕೆಗಳನ್ನು ಹುಡುಕಿಕೊಂಡು ಬಂದು ಕೊಂಡು ಓದುತ್ತಿದ್ದರು. ಆದರೆ ಈಗ ಎಲ್ಲಾ ವಾಟ್ಸಪ್ ನಲ್ಲಿ ಸಿಗುವುದರಿಂದ ಪತ್ರಿಕೆಯನ್ನು ಏಕೆ ಓದಬೇಕು ಎಲ್ಲ ಮೊದಲೇ ಸುದ್ದಿ ಗೊತ್ತಾಗುತ್ತದೆ ಎಂದು ಹೇಳುತ್ತಾರೆ. ಪತ್ರಿಕೆ ಓದುವವರಿಲ್ಲದೆ ನಮ್ಮ ವ್ಯಾಪಾರಕ್ಕೆ ನಷ್ಟವಾಗುತ್ತಿದೆ. ನಾವು ಹಳೆಬರಷ್ಟೇ ಈ ಪತ್ರಿಕಾ ವಿತರಣೆ ವೃತ್ತಿಯನ್ನು ಮುಂದುವರಿಸುತ್ತಿದ್ದೇವೆ. ಹೊಸದಾಗಿ ಯಾರು ಕೂಡ ಈ ವೃತ್ತಿ ಮಾಡಲು ಮುಂದೆ ಬರುತ್ತಿಲ್ಲ. ಮೊದಲೆಲ್ಲಾ ಮನೆ ಮನೆಗೆ ಪತ್ರಿಕೆಗಳನ್ನ ಹಾಕುವುದಕ್ಕೆ ಹುಡುಗರು ಇರುತ್ತಾ ಇದ್ದರು. ಈಗ ಒಬ್ಬ ಪೇಪರ್ ಹಾಕುವ ಹುಡುಗ ಹೋದರೆ ಆ ಸ್ಥಾನಕ್ಕೆ ಮತ್ತೊಬ್ಬ ಹುಡುಗನನ್ನು ಹುಡುಕುವುದು ಬಹಳ ಕಷ್ಟ. ಯಾರು ಕೂಡ ಈ ಕೆಲಸ ಮಾಡುವುದಕ್ಕೆ ಮನಸ್ಸು ಮಾಡುತ್ತಿಲ್ಲ.

- ದೀಪಕ್ ದಾಸ್, ಪತ್ರಿಕಾ ವಿತರಕ, ವಿರಾಜಪೇಟೆ

ಬೆಳಗ್ಗೆ ಎದ್ದು ನಾವು ಮಾಡುವ ಕೆಲಸಕ್ಕೆ ತಕ್ಕುದಾದ ಲಾಭವಿಲ್ಲ. ಶ್ರಮಕ್ಕೆ ಫಲವಿಲ್ಲ ಅಂತ ಗೊತ್ತಿದ್ದರೂ ಬೇರೆ ವಿಧಿ ಇಲ್ಲದೆ ಪೇಪರ್ ಹಾಕುವ ಕಾಯಕದಲ್ಲಿ ಮುಂದುವರೆಯುತ್ತಿದ್ದೇವೆ. ಪತ್ರಿಕೆ ಹಾಕಿಸಿಕೊಳ್ಳುವವರು ಸರಿಯಾಗಿ ದುಡ್ಡು ಕೊಡುವುದಿಲ್ಲ. ಆದರೂ ನಾವು ಮಾತ್ರ ಸರಿಯಾಗಿ ದುಡ್ಡು ಕಳುಹಿಸಬೇಕು. ಒಂದು ದಿನ ತಡವಾದರೂ ನಮಗೆ ಪತ್ರಿಕೆ ಬರುವುದಿಲ್ಲ. ಕುಟುಂಬದವರ ವಿರೋಧದ ನಡುವೆಯೂ ಪತ್ರಿಕೆ ವಿತರಿಸುವ ನಮ್ಮ ಮೇಲೆ ಯಾರಿಗೂ ಕರುಣೆ ಬಾರದಿರುವುದು ನಮ್ಮ ದುರಾದೃಷ್ಟ.

- ಡಿ.ಎಸ್. ತಿಮ್ಮಪ್ಪ, ಪತ್ರಿಕಾ ವಿತರಕ, ಕುಶಾಲನಗರ

ಕಳೆದ 30ಕ್ಕೂ ಹೆಚ್ಚು ವರ್ಷದಿಂದ ಕೇಳುತ್ತಾ ಬಂದಿದ್ದೇವೆ. ಇದುವರೆಗೂ ಏನು ಪ್ರಯೋಜನ ಕಂಡಿಲ್ಲ. ಪತ್ರಿಕೆ ಹಾಕುವ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಾಗಿ ಸಹಾಯ ಮಾಡಬೇಕು. ಮಳೆಗಾಲದಲ್ಲಿ ಕನಿಷ್ಠ ರೈನ್ ಕೋಟ್ ಗಳನ್ನಾದರು ಕೊಡಿ ಎಂದರೂ ಯಾರು ಕೂಡ ಕೊಟ್ಟಿಲ್ಲ. ವಿತರಕರಿಗೆ ಮತ್ತು ಕುಟುಂಬಸ್ಥರಿಗೆ ಆರೋಗ್ಯ ವಿಮೆಯನ್ನಾದರು ಮಾಡಿಸಿಕೊಟ್ಟರೆ ಪುಣ್ಯ ಬರುತ್ತದೆ.

- ಆರ್. ಚಂದ್ರಯ್ಯ, ಪತ್ರಿಕಾ ವಿತರಕ, ಕುಶಾಲನಗರ

1962 ರಲ್ಲಿ ಪತ್ರಿಕಾ ವಿತರಣೆ ಆರಂಭಿಸಿದ್ದು. ಆಗ ಪತ್ರಿಕೆಗಳನ್ನು ಓದುವವರ ಸಂಖ್ಯೆ ಹೆಚ್ಚಿತ್ತು. ಈಗ ಓದುವವರು ಸಂಖ್ಯೆ ತುಂಬಾ ಕಡಿಮೆಯಾಗಿದೆ. ಈಗ ಕುಳಿತು ವ್ಯಾಪಾರ ಮಾಡಲು ಅಂಗಡಿಯೂ ಇಲ್ಲದಾಗಿದೆ. ಇದ್ದ ಸೈಕಲ್ ಕೂಡ ಕಳ್ಳತನವಾಗಿ ಈಗ ತುಂಬಾ ತೊಂದರೆಯಾಗಿದೆ. ಪತ್ರಿಕೆಯ ಮಾಲೀಕರು ಮತ್ತು ಸರ್ಕಾರ ಏನಾದರೂ ಆರ್ಥಿಕ ಸಹಾಯ ಮಾಡಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ.

ವಿ.ಪಿ. ಪ್ರಕಾಶ್, ಹಿರಿಯ ಪತ್ರಿಕಾ ವಿತರಕ, ಕುಶಾಲನಗರ

ಸುಮಾರು 40ವರ್ಷಗಳಿಂದ ನಾನೂ ಪತ್ರಿಕಾ ವಿತರಣೆ ಮಾಡುತ್ತಿದ್ದೇನೆ. ಹೆಚ್ವು ಆದಾಯ ಗಳಿಕೆ ಮಾಡಲು ಈ ಕೆಲಸ ಮಾಡದೆ, ಸೇವೆಯ ರೀತಿಯಲ್ಲಿ ಕೆಲಸ ಮಾಡುವಂತಾಗಿದೆ. ಸರ್ಕಾರ ನಮ್ಮ ನೆರವಿಗೆ ಬರಬೇಕು. ಸರ್ಕಾರದಿಂದ ಯಾವುದೇ ಸೌಲಭ್ಯ ನಮಗಿಲ್ಲ.

- ಬೆಳ್ಳಿಯಪ್ಪ, ಪತ್ರಿಕಾ ವಿತರಕ, ಆಲೂರು ಸಿದ್ದಾಪುರ 

ಪತ್ರಿಕಾ ವಿತರಣೆ ಕೆಲಸ ಉತ್ತಮವಾದ ಕೆಲಸ. ಆದರೆ ಇತ್ತೀಚಿಗೆ ಓದುಗರು ಕಡಿಮೆಯಾಗಿದ್ದಾರೆ. ಮೊಬೈಲ್ ಬಳಕೆಯಿಂದಾಗಿ ಪತ್ರಿಕೆ ಮಾರಾಟಗಾರರು ಸಂಕಷ್ಟ ಎದುರಿಸುವಂತಾಗಿದೆ. ಪತ್ರಿಕಾ ವಿತರಕರನ್ನು ಸರ್ಕಾರ ಗುರುತಿಸಿ ಅವರಿಗೂ ಪ್ರೋತ್ಸಾಹ ಧನ ನೀಡಬೇಕು.

- ಉದಯ, ಪತ್ರಿಕಾ ವಿತರಕ, ಮಾಲಂಬಿ

ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಪತ್ರಿಕಾ ವಿತರಿಗೆ ಅಂತಾ ಬಜೆಟ್‌ನಲ್ಲಿ ಒಂದಷ್ಟು ಹಣ ಇಟ್ಟಿದ್ದರು. ನಂತರ ಬಂದ ಸರ್ಕಾರಗಳು ಯೋಜನೆ ಮುಂದುವರಿಸಿಲ್ಲ. ಪತ್ರಿಕಾ ವಿತರಕರಿಗೆ ಭದ್ರತೆ ಇಲ್ಲ. ಪೇಪರ್ ಮನೆ ಮನೆ ಹಾಕಿಕೊಂಡೇ ಇರಬೇಕು.

ಭಯದಿಂದ ಈ ವೃತ್ತಿ ಗೆ ಯಾರೂ ಬರುತ್ತಿಲ್ಲ. ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ಸೌಲಭ್ಯವಿಲ್ಲ. ಮಾಸಿಕ ಧನ ಸಹಾಯ ಬೇಕು.

- ಬಿ.ಪಿ. ಶಿವಕುಮಾರ್, ಪತ್ರಿಕಾ ವಿತರಕ, ಸೋಮವಾರಪೇಟೆ

ಪತ್ರಿಕಾ ವಿತರಕರ ಸಮಸ್ಯೆಗಳು ಪ್ರತಿ ವರ್ಷ ಪತ್ರಿಕಾ ವಿತರಕರ ದಿನದಂದು ಮಾತ್ರ ಹೆಚ್ಚಾಗಿ ಮುನ್ನಲೆಗೆ ಬರುತ್ತದೆ. ನಂತರ ಯಾರೂ ಈ ಬಗ್ಗೆ ಗಮನ ಹರಿಸುವುದಿಲ್ಲ. ಪತ್ರಿಕಾ ವಿತರಣೆ ಸೇರಿದಂತೆ ಯಾವ ವೃತ್ತಿಯೂ ಕೀಳಲ್ಲ. ಹಾಗಾಗಿ ಪತ್ರಿಕಾ ವಿತರಕರನ್ನೂ ಗೌರವದಿಂದ ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕು. ಪತ್ರಕರ್ತರಿಗೆ ಇರುವ ಸವಲತ್ತುಗಳು ಪತ್ರಿಕಾ ವಿತರಕರಿಗೂ ಸಿಗುವಂತಾಗಬೇಕು.

- ನಂಗಾರು ಜಮುನಾ‌ ವಸಂತ್, ಪತ್ರಿಕಾ ವಿತರಕಿ, ಗೋಣಿಕೊಪ್ಪ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net