ಪಿಂಚಣಿಗಾಗಿ ಕಣ್ಣೀರಿಟ್ಟ ವೃದ್ಧರು

H27 Mini Vidhanasoudha 3
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ನನ್ ಗಂಡ ಸತ್ತು ಎರಡು ವರ್ಷ ಆತು. ಮಗ ಸಣ್ಣಾವ ಸಾಲಿಗೆ ಹೊಕ್ಕಾನ. ನಂಗ ಕಾಲು ನೋವು ವಯಸ್ಸಾಗೇತಿ. ಕೆಳಗ ಕೂರಕ ಆಗಲ್ಲ. ಇಂತದ್ರಾಗ 7 ತಿಂಗಳಿಂದ ವಿಧವಾ ವೇತನ ಬಂದಿಲ್ಲ…, ನಂಗ 72 ವರ್ಷ 6 ತಿಂಗಳಿಂದ ವೃದ್ಧಾಪ್ಯ ವೇತನ ಬಂದಿಲ್ಲ. ಜೀವನ ನಡಸೋದ ಕಷ್ಟ ಆಗೇತಿ..

ಇಲ್ಲಿನ ಮಿನಿ ವಿಧಾನಸೌಧದಲ್ಲಿ ಬುಧವಾರ ಹೀಗೆ ವೃದ್ಧರು ತಮ್ಮ ನೋವನ್ನು ಹೊರಗೆ ಹಾಕಿ ಕಣ್ಣೀರಿಟ್ಟರು. 7 ತಿಂಗಳಿಂದ ಸಾವಿರಾರು ವೃದ್ಧರಿಗೆ ಪಿಂಚಣಿ ಬಂದಿಲ್ಲ. ‘ಪಿಂಚಣಿಗಾಗಿ ಅಲೆದು ಅಲೆದು ಸುಸ್ತಾಗಿದೆ. ಕೈಯಾಗ ಇದ್ದ ರೊಕ್ಕ ಎಲ್ಲ ಖಾಲಿ ಆಗೇವು. ಅಧಿಕಾರಿಗಳು ಅಲ್ಲಿ ಹೋಗು ಇಲ್ಲಿ ಬಾ ಅಂತಾ ಅಲೆದಾಡಿಸ್ತಾರ. ಮಧುಮೇಹ, ರಕ್ತದೊತ್ತಡ ಮತ್ತಿತರ ಕಾಯಿಲೆಗೆ ಔಷಧಕ್ಕೂ ರೊಕ್ಕ ಇಲ್ಲ ನೋಡ್ರಿ’ ಎಂದು ನೇಕಾರ ನಗರದ ಹೇಮವ್ವ ಹುಣಸಿಮರದ ಹಾಗೂ ಬಾಣತಿಕಟ್ಟಿಯ 72 ವರ್ಷದ ವೃದ್ಧೆ ದ್ಯಾಮಕ್ಕ ಗಾಮನಗಟ್ಟಿ ‘ವಿಜಯವಾಣಿ’ ಬಳಿ ನೋವು ತೋಡಿಕೊಂಡರು.

ಪಿಂಚಣಿ ದಾಖಲಾತಿ ಹಾಜರುಪಡಿಸುವ ಸಲುವಾಗಿ ಬುಧವಾರ 300ಕ್ಕೂ ಹೆಚ್ಚು ಫಲಾನುಭವಿಗಳು ಮಿನಿ ವಿಧಾನಸೌಧಕ್ಕೆ ಆಗಮಿಸಿದ್ದರು. ಕೇವಲ ಒಂದೇ ಕೌಂಟರ್ ಇದ್ದ ಕಾರಣ ಫಲಾನುಭವಿಗಳು ಸಮಸ್ಯೆ ಅನುಭವಿಸುವಂತಾಗಿತ್ತು. ಪರಸ್ಪರ ಅಂತರ ಇಲ್ಲದೇ ಗುಂಪು ಗುಂಪಾಗಿ ನಿಂತಿದ್ದರು. ಕುಳಿತುಕೊಳ್ಳಲೂ ವ್ಯವಸ್ಥೆ ಇಲ್ಲದ ಕಾರಣ ಅವರು ತೀವ್ರ ಸಮಸ್ಯೆ ಎದುರಿಸಬೇಕಾಯಿತು. ಈ ಬಗ್ಗೆ ‘ವಿಜಯವಾಣಿ’ ಅಧಿಕಾರಿಗಳ ಗಮನಕ್ಕೆ ತರುತ್ತಿದ್ದಂತೆ ತಾಲೂಕಾಡಳಿತ ಮತ್ತೊಂದು ಕೌಂಟರ್ ತೆರೆಯಿತು.

ಸ್ಥಳೀಯ ಅಧಿಕಾರಿಗಳನ್ನು ಕೇಳಿದರೆ ರಾಜ್ಯ ಸರ್ಕಾರದತ್ತ ಬೊಟ್ಟು ಮಾಡುತ್ತಾರೆ. ನಮ್ಮ ಕೆಲಸ ನಾವು ಮಾಡಿದ್ದೇವೆ. ಪಿಂಚಣಿ ಮಂಜೂರು ಮಾಡಿದ್ದೇವೆ. ಆದರೆ, ಕೆ2 ಸಾಫ್ಟವೇರ್​ನಲ್ಲಿ ಸ್ವೀಕಾರವಾಗುತ್ತಿಲ್ಲ ಎನ್ನುತ್ತಾರೆ. ಅಧಿಕಾರಿಗಳೇ ಹೀಗೆ ಹೇಳಿದರೆ ಪಿಂಚಣಿಯನ್ನೇ ನಂಬಿ ಜೀವನ ಮಾಡುವ ಬಡವರು ಏನು ಮಾಡಬೇಕು ಎಂಬ ಪ್ರಶ್ನೆ ಉದ್ಭವಿಸಿದೆ. ಸರ್ಕಾರ ಆದಷ್ಟು ಬೇಗ ಸಮಸ್ಯೆ ಬಗೆಹರಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

ಖಜಾನೆ 2 ತಂತ್ರಾಂಶ ಸಮಸ್ಯೆ: ಇಷ್ಟು ದಿನ ಖಜಾನೆ 1ರಿಂದ ಪಿಂಚಣಿ ಪೋಸ್ಟ್ ಮುಖಾಂತರ ಬರುತ್ತಿತ್ತು. ಇದೀಗ ಖಜಾನೆ 2 ಮೂಲಕ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಪಿಂಚಣಿ ಸಂದಾಯವಾಗುವ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ತಾಲೂಕಿನ ಎಲ್ಲ ಫಲಾನುಭವಿಗಳ ಅರ್ಜಿ ಪರಿಶೀಲಿಸಿ ಪಿಂಚಣಿಗೆ ಮಂಜೂರು ಮಾಡಿ ಸಾಮಾಜಿಕ ಭದ್ರತಾ ಯೋಜನೆ (ಎನ್​ಎಸಿಪಿ)ಗೆ ಕಳುಹಿಸಲಾಗಿದೆ. ಆದರೆ, ಅದರಲ್ಲಿ ಅನೇಕ ಅರ್ಜಿಗಳು ತಿರಸ್ಕೃತಗೊಂಡು ವಾಪಸ್ ಬಂದಿವೆ. ಹಾಗಾಗಿ, ಪಿಂಚಣಿ ಬರುತ್ತಿಲ್ಲ. ಅಂತಹ ಅರ್ಜಿಗಳನ್ನು ಮತ್ತೊಮ್ಮೆ ಪರಿಶೀಲಿಸಿ ಕಳುಹಿಸಲಾಗುತ್ತಿದೆ ಎನ್ನುತ್ತಾರೆ ಉಪ ತಹಸೀಲ್ದಾರ್ ಅಮ್ಜದಖಾನ್ ಪಠಾಣ.

65 ಸಾವಿರ ಪಿಂಚಣಿದಾರರು: ಹುಬ್ಬಳ್ಳಿ ಶಹರ ಹಾಗೂ ಹುಬ್ಬಳ್ಳಿ ಗ್ರಾಮೀಣ ತಾಲೂಕಿನಲ್ಲಿ ಒಟ್ಟು 65 ಸಾವಿರ ಪಿಂಚಣಿದಾರರು ಇದ್ದಾರೆ. 60ರಿಂದ 64 ವರ್ಷದ ವೃದ್ಧರಿಗೆ 600 ರೂ. 65 ವರ್ಷ ಮೇಲ್ಪಟ್ಟವರಿಗೆ 1000 ರೂ., ವಿಧವೆಯರಿಗೆ 600 ರೂ., ಶೇ.45ರಷ್ಟು ಅಂಗವೈಕಲ್ಯ ಉಳ್ಳವರಿಗೆ 600 ರೂ., ಶೇ. 75ರಷ್ಟು ಅಂಗವೈಕಲ್ಯ ಹೊಂದಿದವರಿಗೆ 1400 ರೂ., ವಿಚ್ಛೇದಿತ ಮಹಿಳೆಯರಿಗೆ 600. ರೂ., ತೃತೀಯ ಲಿಂಗಿಗಳಿಗೆ 600 ರೂ., ಆತ್ಮಹತ್ಯೆ ಮಾಡಿಕೊಂಡಿರುವ ರೈತನ ಪತ್ನಿಗೆ ಪ್ರತಿ ತಿಂಗಳು 2,000 ರೂ. ಪಿಂಚಣಿ ನೀಡಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net