

ಮಲ್ಲು ಕಳಸಾಪುರ
ಲಕ್ಷ್ಮೇಶ್ವರ: ಅಗಸ್ತ್ಯ ಋಷಿಗಳು ಶಿವಲಿಂಗ ಸ್ಥಾಪಿಸಿ ಪೂಜೆಗೈದ ಪಟ್ಟಣದ ಐತಿಹಾಸಿಕ ಅಗಸ್ತ್ಯತೀರ್ಥದ ಜಾತ್ರಾ ಮಹೋತ್ಸವ ಸಂಕ್ರಮಣ ಪುಣ್ಯಕಾಲದಲ್ಲಿ ಜರುಗಲಿದೆ.
ಜ.15ರಂದು ಸಂಜೆ 5ಗಂಟೆಗೆ ರಥೋತ್ಸವ ಮತ್ತು ಜ.16ರಂದು ಕಡುಬಿನ ಕಾಳಗ ಜರುಗಲಿದೆ. ಸಂಕ್ರಮಣ ಜಾತ್ರೆಗೆ ಬರುವ ಭಕ್ತರು ಈ ತೀರ್ಥ ಬಾವಿಗಳಲ್ಲಿ ಪುಣ್ಯಸ್ನಾನ ಮಾಡಿ ಶಿವನ ದರ್ಶನ ಪಡೆದು ಪುನೀತರಾಗುತ್ತಾರೆ. ಮಂಡಕ್ಕಿ- ಖಾರಾ- ಮಿರ್ಚಿ ಈ ಜಾತ್ರೆಯ ವಿಶೇಷವಾಗಿದೆ.
ಈ ಪವಿತ್ರ ತೀರ್ಥ ಕ್ಷೇತ್ರದಲ್ಲಿ ಸಪ್ತ ಋಷಿಗಳಲ್ಲೊಬ್ಬರಾದ ವೇದ ಮಹರ್ಷಿ ಅಗಸ್ತ್ಯಮುನಿಗಳು ಇಲ್ಲಿ ಶಿವಲಿಂಗ ಪ್ರತಿಷ್ಠಾಪಿಸಿ ತಪಸ್ಸುಗೈದರು ಎಂಬ ಪ್ರತೀತಿ ಇದೆ. ಗುಹೆಯ ಸ್ವರೂಪದ ಕಲ್ಲಿನ ಮಂಟಪದ ಈಶ್ವರ ದೇವಸ್ಥಾನದಲ್ಲಿ ಶಿವಲಿಂಗ ಎದುರಿಗೆ ನಂದಿ ಇದೆ. ಇಲ್ಲಿ ಅಕ್ಕ (ಗಂಗೆ), ತಂಗಿ(ಗೌರಿ) ಹೆಸರಿನ ಎರಡು ತೀರ್ಥಗಳಿವೆ. ಈ ಹೊಂಡದಲ್ಲಿ ಸ್ನಾನ ಮಾಡಿದರೆ ರೋಗಗಳು ವಾಸಿವಾಗಿ ಪುಣ್ಯ ಲಭಿಸುತ್ತದೆ ಎಂಬುದು ಭಕ್ತರ ನಂಬಿಕೆ.
ಇಲ್ಲಿದ್ದ ಶಾಸನವೊಂದರ ಬಗ್ಗೆ ಹಂಪಿ ವಿಶ್ವವಿದ್ಯಾಲಯದ ಶಾಸನಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿದ್ದ ಡಾ. ಪರಶಿವಮೂರ್ತಿ ಅಧ್ಯಯನ ಮಾಡಿದ್ದರು. ಅಲ್ಲಿರುವ ಶಾಸನವೊಂದು ಕಲ್ಯಾಣ ಚಾಲುಕ್ಯಚರ್ಕವರ್ತಿ 6ನೇ ವಿಕ್ರಮಾದಿತ್ಯನ ಶಾಸನವಾಗಿದೆ. ಈ ಶಾಸನ 7 ಅಡಿ ಎತ್ತರ, 3.5 ಅಡಿ ಅಗಲವಿದ್ದು, ಶಾಸನದಲ್ಲಿ ಅಗಸ್ತ್ಯತೀರ್ಥದ ಬಗ್ಗೆ ವರ್ಣಿಸಲಾಗಿದೆ. ಇಲ್ಲಿನ ಈಶ್ವರ ದೇವಸ್ಥಾನ 10ನೇ ಶತಮಾನದ್ದಾಗಿದೆ ಎಂಬ ಮಾಹಿತಿ ನೀಡಿದ್ದಾರೆ. ಇಂತಹ ಹತ್ತಾರು ಶಾಸನಗಳು ಲಕ್ಷ್ಮೇಶ್ವರದಲ್ಲಿ ಹಾಳಾಗುವುದನ್ನು ಗಮನಿಸಿ ಸೋಮೇಶ್ವರ ದೇವಸ್ಥಾನದಲ್ಲಿ ಸಂರಕ್ಷಿಸಲಾಗಿದೆ.
ಈ ದೇವಸ್ಥಾನದಲ್ಲಿ ಸುಂದರವಾದ ಶಿವಲಿಂಗದ ಮೂರ್ತಿ, ಎದುರಿಗೆ ನಂದಿ ಇದೆ. ಮಳೆಗಾಲದಲ್ಲಿ ತೀರ್ಥ ತುಂಬಿ ದೇವಸ್ಥಾನದ ಮೂರ್ತಿಗಳು ಜಲಾವೃತಗೊಳ್ಳುತ್ತವೆ. ಸದ್ಯ ಈ ಪುಣ್ಯಕ್ಷೇತ್ರ ನಿರ್ಲಕ್ಷ್ಯಕ್ಕೊಳಗಾಗಿ ಪಾಳುಬಿದ್ದಿದ್ದು ತನ್ನ ವೈಶಿಷ್ಟ್ಯವನ್ನು ಕಳೆದುಕೊಳ್ಳುತ್ತಿದೆ. ಪುರಸಭೆಯವರು ಎರಡೂ ತೀರ್ಥಬಾವಿಗಳ ಸುತ್ತಲೂ ತಂತಿಬೇಲಿ ಅಳವಡಿಸಿದ್ದಾರೆ. ಸ್ವಚ್ಛತೆ ಕೈಗೊಂಡು ಜಾತ್ರೆಗಾಗಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.
ಪಟ್ಟಣದಲ್ಲಿ ಅಗಸ್ತ್ಯತೀರ್ಥ, ಶಂಕರತೀರ್ಥ, ಖಡ್ಘತೀರ್ಥ, ಲಕ್ಷ್ಮಣತೀರ್ಥ ಹಾಗೂ ಕಣ್ವತೀರ್ಥಗಳೆಂಬ ಪಂಚತೀರ್ಥಗಳಿದ್ದವು. 3 ತೀರ್ಥಗಳು ಅಸ್ತಿತ್ವ ಕಳೆದುಕೊಳ್ಳುತ್ತಿದ್ದರೆ ಉಳಿದ ಲಕ್ಷ್ಮಣತೀರ್ಥ ಮತ್ತು ಅಗಸ್ತ್ಯತೀರ್ಥಗಳು ಅವಸಾನದಂಚಿಗೆ ತಲುಪಿವೆ. ಈ ಪ್ರದೇಶವನ್ನು ಅಭಿವೃದ್ಧಿ ಪಡಿಸುವತ್ತ ಜನಪ್ರತಿನಿಧಿಗಳು, ಜಿಲ್ಲಾ ಮತ್ತು ಸ್ಥಳೀಯ ಆಡಳಿತ ಮುಂದಾಗಬೇಕು ಎಂದು ನಾಗರಿಕರಾದ ಸೋಮೇಶ ಉಪನಾಳ, ವಿಜಯ ಕುಂಬಾರ ಅವರು ಆಗ್ರಹಿಸಿದ್ದಾರೆ.