ಅಗಸಬಾಳ ಕೆರೆ ಭರ್ತಿ ಪೈಪ್‌ಲೈನ್ ಕಾಮಗಾರಿ ಪೂರ್ಣಗೊಳಿಸಿ

Agasabala Lake, Pipeline, Raitha Sangh, Alamatti,
ಆಲಮಟ್ಟಿ ಮುಖ್ಯ ಇಂಜಿನಿಯರ್ ಕಚೇರಿ ಎದುರು ಅಖಂಡ ಕರ್ನಾಟಕ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಅರವಿಂದ ಕುಲಕರ್ಣಿ, ಬಾಲಪ್ಪಗೌಡ ಲಿಂಗದಳ್ಳಿ, ಚಂದ್ರಾಮ ತೆಗ್ಗಿ, ಪವಾಡೆಪ್ಪ ಹಳೆಗೌಡರ ಇತರರಿದ್ದರು.
Published on

ಆಲಮಟ್ಟಿ: ಬಸವನಬಾಗೇವಾಡಿ ತಾಲೂಕಿನ ಅಗಸಬಾಳ ಕೆರೆ ಭರ್ತಿ ಕಾಮಗಾರಿ ಪೂರ್ಣಗೊಳಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ಕಾರ್ಯಕರ್ತರು ಶುಕ್ರವಾರ ಇಲ್ಲಿಯ ರಾಮಲಿಂಗೇಶ್ವರ ದೇವಸ್ಥಾನದಿಂದ ಕೆಬಿಜೆಎನ್‌ಎಲ್ ಮುಖ್ಯ ಇಂಜಿನಿಯರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಕಚೇರಿ ಎದುರು ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಮುಳವಾಡ ಏತ ನೀರಾವರಿ ಯೋಜನೆ ವ್ಯಾಪ್ತಿಯ ಸಂಕನಾಳ ಶಾಖಾ ಕಾಲುವೆ ಮೂಲಕ ಬಸವನಬಾಗೇವಾಡಿ ತಾಲೂಕಿನ ಅಗಸಬಾಳ ಕೆರೆ ಭರ್ತಿ ಮಾಡುವ ಪೈಪ್‌ಲೈನ್ ಕಾಮಗಾರಿ ಆರಂಭಗೊಂಡು ಅರ್ಧಕ್ಕೆ ನಿಂತಿದೆ. ಗುತ್ತಿಗೆದಾರರು, ಅಧಿಕಾರಿಗಳು ನಿರ್ಲಕ್ಷೃ ವಹಿಸಿದ್ದಾರೆ. ಸಾಕಷ್ಟು ಬಾರಿ ಮನವಿ, ಹೋರಾಟ ನಡೆಸಿದರೂ ಕಾಮಗಾರಿ ಆರಂಭಗೊಂಡಿಲ್ಲ ಎಂದು ದೂರಿದರು.

ಈಚೆಗೆ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಿರುವ 14 ದಿನ ಚಾಲು, 10 ದಿನ ಬಂದ್ ಅವಧಿಯ ವಾರಾಬಂಧಿ ಪದ್ಧತಿ ಬದಲಾಯಿಸಬೇಕು. 10 ದಿನ ಕಾಲುವೆಗೆ ನೀರು ಹರಿಯದಿದ್ದರೆ ಬೆಳೆಗಳಿಗೆ ನೀರಿಲ್ಲದೆ ಒಣಗುತ್ತವೆ. ಹೀಗಾಗಿ 12 ದಿನ ಚಾಲು 3 ದಿನ ಬಂದ್ ವಾರಾಬಂಧಿ ಪದ್ಧತಿಯನ್ನು ಆಲಮಟ್ಟಿ ಜಲಾಶಯ ವ್ಯಾಪ್ತಿಯ ನೀರಾವರಿ ಯೋಜನೆಗೆ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

ಕೆಬಿಜೆಎನ್‌ಎಲ್ ಎಂಡಿ ಕಚೇರಿ ಆಲಮಟ್ಟಿಯಲ್ಲೇ ಇದೆ, ಹೀಗಾಗಿ ವ್ಯವಸ್ಥಾಪಕ ನಿರ್ದೇಶಕರು ಬೆಂಗಳೂರು ಬಿಟ್ಟು ಆಲಮಟ್ಟಿಯಲ್ಲೇ ವಾಸ್ತವ್ಯ ಇರಬೇಕು. ಅಣೆಕಟ್ಟೆ ವಲಯದ ಮುಖ್ಯ ಇಂಜಿನಿಯರ್ ಹುದ್ದೆಗೆ ಬೆಂಗಳೂರಿನಲ್ಲಿ ಬೇರೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಮುಖ್ಯ ಇಂಜಿನಿಯರ್‌ಗೆ ಪ್ರಭಾರ ಅಧಿಕಾರ ನೀಡಿದ್ದಾರೆ. ಹೀಗಾಗಿ ಆಲಮಟ್ಟಿ ಅಣೆಕಟ್ಟೆ ವಲಯದ ಎಲ್ಲಾ ನೀರಾವರಿ ಕಾಮಗಾರಿಗಳು ಕುಂಠಿತಗೊಳ್ಳಲಿವೆ. ಕೇವಲ ತಿಂಗಳಿಗೊಮ್ಮೆ ಅಥವಾ ಎರಡು ಸಲ ಅಧಿಕಾರಿಗಳು ಬಂದು ಹೋದರೆ ಕಾಮಗಾರಿಗಳು ಹೇಗೆ ನಡೆಯುತ್ತವೆ ಎಂದು ಪ್ರಶ್ನಿಸಿದರು.

ಪ್ರತಿಭಟನಾ ಸ್ಥಳಕ್ಕೆ ಸೂಪರಿಂಟೆಂಡಿಂಗ್ ಇಂಜಿನಿಯರ್ ಡಿ.ಬಸವರಾಜ, ಉಪ ಮುಖ್ಯ ಇಂಜಿನಿಯರ್ ಸುರೇಶ ಸೇರಿದಂತೆ ಹಲವು ಅಧಿಕಾರಿಗಳು ಭೇಟಿ ನೀಡಿ ಕೆರೆ ಭರ್ತಿ ಮಾಡುವ ಪೈಪ್‌ಲೈನ್ ಕಾಮಗಾರಿಯನ್ನು 15 ದಿನದೊಳಗೆ ಪೂರ್ಣಗೊಳಿಸುವ ಭರವಸೆ ನೀಡಿದ್ದರಿಂದ ರೈತರು ಧರಣಿ ಸತ್ಯಾಗ್ರಹ ಹಿಂಪಡೆದರು.

ಬಾಲಪ್ಪಗೌಡ ಲಿಂಗದಳ್ಳಿ, ಚಂದ್ರಾಮ ತೆಗ್ಗಿ, ಪವಾಡೆಪ್ಪ ಹಳೆಗೌಡರ, ಗುರುಲಿಂಗಪ್ಪಗೌಡ ಪಾಟೀಲ, ರಾಮಣ್ಣ ಕೋಲಕಾರ, ಸುಭಾಷ ಹುನಗುಂದ, ಯಂಕಪ್ಪ ಮಳಗಿ, ತಿರುಪತಿ ಬಂಡಿವಡ್ಡರ , ಮುದಕಪ್ಪ ಗುಣಕಿ, ಗುರುರಾಜ ವಡ್ಡರ, ರಾಮಣ್ಣ ಕೋಲಕಾರ, ಸುಭಾಷ ಹುನಗುಂದ, ಪವಾಡೆಪ್ಪ ಹಳೇಗೌಡರ, ಯಂಕಪ್ಪ ಮಳಗಿ, ಶಂಕ್ರಪ್ಪ ಮಾದರ, ಮೋಹನಗೌಡ ಪಾಟೀಲ, ಅಬ್ಬಾಸಅಲಿ ಮುಜಾವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net