

ಇಂಡಿ: ಮೂಲ ಸೌಕರ್ಯ ಒದಗಿಸದ ಕಾರಣ ರೊಚ್ಚಿಗೆದ್ದ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕಚೇರಿಗೆ ಮುಳ್ಳು ಹಚ್ಚಿ, ಬೀಗ ಹಾಕಿ ಪ್ರತಿಭಟನೆ ನಡೆಸಿದ ಘಟನೆ ತಾಲೂಕಿನ ಅಗರಖೇಡ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಅಗರಖೇಡದ ವಾರ್ಡ್-1 ರಲ್ಲಿ ರಸ್ತೆ ಸುಧಾರಣೆ ಮಾಡಿಲ್ಲ. ಈ ರಸ್ತೆಯಲ್ಲಿ ಸಂಚರಿಸಲು ವಾಹನಗಳ ಸವಾರರು ಹರ ಸಾಹಸ ಪಡುವಂತಾಗಿದೆ. ಈ ವಾರ್ಡ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಬವಿಸಿದೆ. ಮಹಿಳೆಯರಿಗೆ ಶೌಚಗೃಹದ ವ್ಯವಸ್ಥೆಯಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ಕುರಿತು ಗ್ರಾಮಸ್ಥರು ಗ್ರಾ.ಪಂ. ಅಧಿಕಾರಿಗಳಿಗೆ ಹಲವಾರು ಸಲ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಸಾರ್ವಜನಿಕರು ಗ್ರಾ.ಪಂ. ಗೆ ಬೀಗ ಹಾಕಿ ಪ್ರತಿಭಟಿಸಿಲು ಮುಂದಾದರು ಎಂದು ತಿಳಿದು ಬಂದಿದೆ.
ಬಾಬಾಗೌಡ ಪಾಟೀಲ, ಮೌಲಾ ಬೀಜಲಿ, ಪ್ರಭುಗೌಡ ಪಾಟೀಲ, ತುಕಾರಾಮ ಭೋಸಲೆ, ವಿನಾಯಕ ಪಾಟೀಲ, ತಿಪ್ಪಣ್ಣ ಕೌಲಗಿ, ಯಲ್ಲಾಲಿಂಗ ಕೌಲಗಿ, ಸಮೀರ ಕೋರಬು, ಶ್ರೀಶೈಲ ಪಾರೇಕರ, ಚಂದು ಪಾರೇಕರ, ಇಮಾಮಸಾಬ ಮುಲ್ಲಾ, ಅರುಗೌಡ ಪಾಟೀಲ, ಪ್ರಕಾಶ ಪಾಟೀಲ, ಕಾಂತು ಕೋಟಿ, ಇಮಾಮಸಾಬ ಕೊರಬು ಪಾಲ್ಗೊಂಡಿದ್ದರು.
ಅಗರಖೇಡ ಗ್ರಾಮದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಒಡೆದಿದೆ. ಪೈಪ್‌ಲೈನ್ ದುರಸ್ತಿ ಮಾಡಿ, ರಸ್ತೆ ಸುಧಾರಣೆ ಮಾಡಲು ಪಿಡಿಒ ಅವರಿಗೆ ಸೂಚಿಸಲಾಗಿದೆ. -ನಂದೀಪ ರಾಠೋಡ, ತಾ.ಪಂ.ಮ, ಇಒ