ಅ.15 ಅಗಲ್ಪಾಡಿ ದೇವಳ ನವೀಕೃತ ಅಗ್ರಶಾಲೆ ಉದ್ಘಾಟನೆ

mng--13 Oct Agalpadi
Published on

ಮಂಗಳೂರು: ಕಾಸರಗೋಡು ಜಿಲ್ಲೆಯ ಉಬ್ರಂಗಳ ಗ್ರಾಮದ ಶ್ರೀ ಕ್ಷೇತ್ರ ಆಗಲ್ಪಾಡಿ ದುರ್ಗಾಪರಮೇಶ್ವರಿ ದೇವಸ್ಥಾನದ ನವೀಕೃತ ಅಗ್ರಶಾಲೆಯ ಉದ್ಘಾಟನೆ ನವರಾತ್ರಿ ಆರಂಭದ ದಿನ ಅ.15ರಂದು ಬೆಳಗ್ಗೆ 7.30ಕ್ಕೆ ನಡೆಯಲಿದೆ.


ಈ ನವೀಕೃತ ಅಗ್ರಶಾಲೆಯ ಸೇವಾಕರ್ತರಾದ ಕೊರೆಕಾನ ಕುಟುಂಬದವರು ಅಂದು ಬೆಳಗ್ಗೆ ಗಣಪತಿ ಹವನದೊಂದಿಗೆ ಕೊಪ್ಪರಿಗೆ ಏರಿಸುವ ಮೂಲಕ ಉದ್ಘಾಟನೆ ನೆರವೇರಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕ್ಷೇತ್ರದಲ್ಲಿ ಪಾಕ ತಜ್ಞರಾಗಿ ಕರ್ತವ್ಯ ನಿರ್ವಹಿಸುತ್ತಿರುವ ನಾಲ್ವರು ಸಿಬ್ಬಂದಿ ಹಾಗೂ ಕಳೆದ ಆರು ದಶಕಗಳಿಂದ ಪಾಕಶಾಲೆಯ ಶುಚಿತ್ವವನ್ನು ನಿರ್ವಹಿಸಿ ನಿವೃತ್ತರಾಗಿರುವ ಸೀತು ಎಂಬವರನ್ನು ಅಭಿನಂದಿಸುವ ಕಾರ್ಯಕ್ರಮ ನಡೆಯಲಿದೆ.


ದೇವಸ್ಥಾನದ ಪಾಕಶಾಲೆ ನವೀಕರಣ ಕಾರ್ಯ ಪೂರ್ಣಗೊಂಡಿದೆ. ಮುಂದೆ ಸುಸಜ್ಜಿತ ಶೌಚಾಲಯಗಳ ನಿರ್ಮಾಣ, ಪುಷ್ಕರಣಿಯ ನವೀಕರಣ, ವಾಹನ ಪಾರ್ಕಿಂಗ್ ವ್ಯವಸ್ಥೆ, ಶಾಶ್ವತ ನೀರಿನ ವ್ಯವಸ್ಥೆ ಮುಂತಾದ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಈಗಾಗಲೇ ಭಕ್ತರ ಸಹಕಾರದಿಂದ ದೇವಸ್ಥಾನದ ಗರ್ಭಗುಡಿ ಸುತ್ತ ಕಪ್ಪುಕಲ್ಲು ಹಾಸಲಾಗಿದೆ. ಭವಿಷ್ಯದಲ್ಲಿ ಕ್ಷೇತ್ರಕ್ಕೆ ಬರುವ ಊರ, ಪರವೂರಿನ ಭಕ್ತರ ಅನುಕೂಲಕ್ಕೆ ವಸತಿ ನಿರ್ಮಿಸುವ ಯೋಜನೆಯೂ ಇದೆ. ಎಲ್ಲ ಯೋಜನೆಗಳಿಗೆ ಭಕ್ತರು ಸಂಪೂರ್ಣ ಸಹಕಾರ ನೀಡಬೇಕು ಎಂದು ಕ್ಷೇತ್ರದ ಆಡಳಿತ ಮೊಕ್ತೇಸರ ಎ.ಜಿ.ಶರ್ಮ ಕೋಳಿಕ್ಕಜೆ ವಿನಂತಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net