ಖಾಸಗಿ ಭೂಮಿಯ ಮರಗಳ ಸರ್ವೇಗೆ ವಿರುದ್ಧ

Against survey of private land trees
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ:

ಕರ್ನಾಟಕ ಅರಣ್ಯ ನಿಯಮಾವಳಿ ೧೯೬೯ರ ನಿಯಮ ೧೩೩ರ ಪ್ರಕಾರ ಖಾಸಗಿ ಭೂಮಿಯಲ್ಲಿನ ಸರ್ಕಾರಿ ಮರಗಳನ್ನು ದಾಖಲು ಮಾಡಿ ಪಟ್ಟಿ ಮಾಡುವಂತೆ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜನವರಿ ತಿಂಗಳಲ್ಲೇ ಆದೇಶ ಹೊರಡಿಸಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಅನ್ವಯವಾಗುವಂತೆ ಈ ಆದೇಶ ಹೊರಡಿಸಲಾಗಿತ್ತು. ಬಹುತೇಕ ಕಡೆಗಳಲ್ಲಿ ಸರ್ವೆ ಕಾರ್ಯ ಮುಗಿಸಿ ಕೇಂದ್ರ ಕಚೇರಿಗೆ ವರದಿ ಸಲ್ಲಿಸಲಾಗಿದೆ.
ಕೊಡಗಿನಲ್ಲಿ ಈ ತಿಂಗಳ ಆರಂಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸರ್ವೇ ಕಾರ್ಯಕ್ಕೆ ಇಳಿದಿತ್ತು. ವಿರಾಜಪೇಟೆ ವಿಭಾಗದ ಬಹುತೇಕ ಕಡೆಗಳಲ್ಲಿ ಈ ಸರ್ವೆ ನಡೆಸಿ ಮರಗಳಿಗೆ ಸಂಖ್ಯೆ ನೀಡಲಾಗಿದೆ. ವಾಲ್ನೂರು, ಭಾಗಮಂಡಲ, ಚೆಟ್ಟಿಮಾನಿ, ಮದೆನಾಡು ಸೇರಿದಂತೆ ಮಡಿಕೇರಿ ವಿಭಾಗದಲ್ಲಿ ಸರ್ವೆ ಕಾರ್ಯ ಭರದಿಂದ ನಡೆಸುತ್ತಿರುವ ಸಂದರ್ಭ ಬೆಳೆಗಾರರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ವಾಲ್ನೂರು ಭಾಗದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಜಮ್ಮಾ ಭೂಮಿ, ಸಾಗು ಬಾಣೆಗಳ ಜಾಗದಲ್ಲಿ ಬೆಲೆಬಾಳುವ ಮರಗಳ ಸರ್ವೇ ಕಾರ್ಯ ನಡೆಸುವಾಗ ಸಂದರ್ಭ ಬೆಳೆಗಾರರು ಮೊದಲು ಆಕ್ರೋಶ ವ್ಯಕ್ತಪಡಿಸಿದರು.
ಅರಣ್ಯ ಇಲಾಖೆಯ ಈ ಸರ್ವೇ ವಿರುದ್ಧದ ಆಕ್ರೋಶ ಈಗ ಜಿಲ್ಲೆಯಾದ್ಯಂತ ಸರ್ವವ್ಯಾಪಿ ಆಗಿದ್ದು, ಶುಕ್ರವಾರ (ಮೇ ೧೭) ಬಿಜೆಪಿ ವತಿಯಿಂದ ಮಡಿಕೇರಿ ಅರಣ್ಯ ಭವನಕ್ಕೆ ಮುತ್ತಿಗೆಯನ್ನೂ ಹಾಕಿ ಪ್ರತಿಭಟಿಸಲಾಗಿದೆ. ಸರ್ಕಾರದ ಈ ಕ್ರಮದ ವಿರುದ್ಧ ಜಿಲ್ಲೆಯ ಮಾಜಿ ಶಾಸಕರೂ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಜಿಲ್ಲೆಯ ಬೆಳೆಗಾರರು ಆತಂಕಕ್ಕೆ ಒಳಗಾಗಬಾರದು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರೂ ಆಗಿರುವ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅಭಯವನ್ನೂ ನೀಡಿದ್ದಾರೆ. ಈ ಒಟ್ಟಾರೆ ಬೆಳವಣಿಗೆ ಬಗ್ಗೆ ಲೌಡ್‌ಸ್ಪೀಕರ್‌ನಲ್ಲಿ ವಿಜಯವಾಣಿ ಓದುಗರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಮಾಲೀಕರ ಖಾಸಗಿ ಜಾಗದಲ್ಲಿ ಅರಣ್ಯ ಇಲಾಖೆಯ ಮೂಲಕ ಮರಗಳ ಲೆಕ್ಕವನ್ನು ಹಾಕಲಾಗುತ್ತಿದೆ. ಇದು ಆತಂಕದ ವಿಷಯವಾಗಿದೆ. ಮುಂದೆ ಮಾಲೀಕರು ಸ್ವಂತ ಉಪಯೋಗಕ್ಕೂ ಮರವನ್ನು ಕಡಿಯಲು ಸಾಧ್ಯವಾಗುವುದಿಲ್ಲ ಎಂಬ ಆತಂಕ ಇದೆ. ಮಾಲೀಕರ ವಿರೋಧದಿಂದ ತಾತ್ಕಾಲಿಕವಾಗಿ ನಿಲ್ಲಿಸಿದ್ದಾರೆ. ಕಾನೂನು ತಂದರೆ ಏನೂ ಮಾಡಲು ಸಾಧ್ಯವಿಲ್ಲ. ರಾಜಕೀಯ ರಹಿತ ಹೋರಾಟಕ್ಕೆ ಜಿಲ್ಲೆಯ ಜನರು ಮುಂದಾಗಬೇಕು.
ಎಸ್.ಜಿ. ಮೇದಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ

ಖಾಸಗಿ ಜಾಗದಲ್ಲಿ ಇರುವ ಮರಗಳ ಸರ್ವೆ ಬಗ್ಗೆ ರಾಜ್ಯ ಸರ್ಕಾರ ಮಾಡಿರುವ ಆದೇಶಕ್ಕೆ ಕೊಡಗಿನಲ್ಲಿ ಭಾರಿ ವಿರೋಧ ವ್ಯಕ್ತ ಆಗುತ್ತಿದೆ. ಅರಣ್ಯ ಉತ್ಪನ್ನಗಳ ವಾಪಸಾತಿ ಸೇರಿದಂತೆ ಸರ್ಕಾರದ ಕೆಲವು ತೀರ್ಮಾನಗಳು ಕೊಡಗಿಗೆ ಮಾರಕವಾಗುತ್ತಿದೆ. ಈ ಆದೇಶದಿಂದ ತಮ್ಮ ತೋಟದಲ್ಲಿ ಬೆಲೆ ಬಾಳುವ ಮರಗಳು ಕಳ್ಳರ ಪಾಲಾದರೆ ಅದಕ್ಕೆ ಆ ಜಾಗದ ಮಾಲೀಕರು ಆರೋಪಿ ಸ್ಥಾನದಲ್ಲಿ ನಿಲ್ಲುವಂತೆ ಮಾಡುವ ಕ್ರಮ ಮರಗಳ್ಳರಿಗೆ ಅನೂಕುಲ ಮಾಡಿಕೊಡುವ ಒಂದು ಯೋಜನೆಯಾದಂತಿದೆ. ತಕ್ಷಣ ಈ ಕ್ರಮವನ್ನು ಕೈ ಬಿಡಬೇಕು.
ಭುವನೇಶ್ವರಿ ಹರೀಶ್, ಮಾಜಿ ಪ್ರಧಾನ ಕಾರ್ಯದರ್ಶಿ, ಬಿಜೆಪಿ ಮಹಿಳಾ ಮೋರ್ಚಾ, ಕೊಡಗು

ಸರ್ಕಾರ ಈಗಾಗಲೇ ಕೊಡಗಿನಲ್ಲಿರುವ ಅರಣ್ಯ ಉತ್ಪನ್ನಗಳ ವಾಪಾಸಾತಿ ಬಗ್ಗೆ ಆದೇಶ ಮಡಿತ್ತು. ಇದೀಗ ಕೊಡಗಿನಲ್ಲಿರುವ ಖಾಸಗಿ ತೋಟಗಳಲ್ಲಿನ ಮರಗಳ ಸರ್ವೆಗೆ ಮುಂದಾಗಿರುವುದು ನಿಜವಾಗಿಯೂ ಸಹ ಕೊಡಗಿನ ಜನತೆಯ ಭಾವನೆಗಳಿಗೆ ಧಕ್ಕೆ ತರುವಂತಹ ಕಾರ್ಯವಾಗಿದೆ. ಕೆಲವು ವರ್ಷಗಳ ಹಿಂದೆ ಅರಣ್ಯ ಇಲಾಖೆ ಅನುಮತಿ ನೀಡಿ ಹಲವಾರು ವರ್ಷಗಳ ಹಿಂದಿನ ಮಾವಿನ ಮರ ಇನ್ನಿತರ ಬೆಲೆಬಾಳುವ ಮರಗಳನ್ನು ನಾಶ ಮಾಡಿತ್ತು. ಇದೀಗ ಕೊಡಗಿನ ತೋಟದಲ್ಲಿ ಬೆಳೆಸಿರುವ ಮರಗಳ ಲೆಕ್ಕವನ್ನು ತೆಗೆದುಕೊಂಡು ಮುಂದೆ ತೋಟದ ಮಾಲೀಕರಿಗೆ ಯಾವುದಕ್ಕೂ ಅವುಗಳನ್ನು ಬಳಸದೆ ಇರುವ ಹಾಗೆ ಹುನ್ನಾರ ಸೃಷ್ಟಿಸುವ ಕಡೆ ಅರಣ್ಯ ಇಲಾಖೆ ಸಾಗುತ್ತಿದೆ
ಬಿ. ಕೆ. ಪಾರ್ಥಸಾರಥಿ, ನಿವೃತ ಯೋಧ, ವಿರಾಜಪೇಟೆ

ಖಾಸಗಿ ತೋಟಗಳಲ್ಲಿ ಮರಗಳ ಸರ್ವೇ ಮಾಡಲು ಸರ್ಕಾರ ಆದೇಶ ನೀಡಿ ಕೊಡಗಿನ ಬೆಳೆಗಾರರಿಗೆ ಆಘಾತ ನೀಡಿದೆ. ಖಾಸಗಿ ಜಮೀನಿನ ಮರಗಳು ಸರ್ಕಾರದ್ದಾದರೆ ಆ ಮರಗಳು ನಿಂತಿರುವ ಜಾಗದ ಮಾಲೀಕರು ಯಾರು ? ಕೊಡಗಿನ ಬೆಳೆಗಾರರು ಎಚ್ಚರಗೊಳ್ಳದಿದ್ದರೆ ಮುಂದೆ ತಮ್ಮ ತೋಟಗಳಲ್ಲಿ ಕೃಷಿ ಮಾಡಲು ಸರ್ಕಾರದ ಅನುಮತಿ ಪಡೆದುಕೊಳ್ಳುವ ದಿನ ದೂರ ಇಲ್ಲ. ಸರ್ಕಾರಿ ಅರಣ್ಯದೊಳಗೆ ಇರುವ ಮರಗಳ ಹನನವಾಗುತ್ತಿರುವುದನ್ನು ತಡೆಯಲು ಸರ್ಕಾರ ವಿಫಲವಾಗುತ್ತಿದೆ. ಅದನ್ನು ಮೊದಲು ರಕ್ಷಿಸಲಿ. ಕೊಡಗಿನ ಬೆಳೆಗಾರರಿಗೆ ತೊಂದರೆ ಕೊಡುವ ಆದೇಶ ತಕ್ಷಣ ಹಿಂಪಡೆಯಬೇಕು.
ಶಿವಾಚಾಳಿಯಂಡ ಜಗದೀಶ್, ಪ್ರಧಾನ ಕಾರ್ಯದರ್ಶಿ ಕೊಡಗು ಜಿಲ್ಲಾ ಬಿಜೆಪಿ ರೈತ ಮೋರ್ಚಾ

ಖಾಸಗಿ ಜಾಗದಲ್ಲಿರುವ ಮರಗಳ ಸರ್ವೆಗೆ ಮುಂದಾಗಿರುವ ರಾಜ್ಯ ಸರ್ಕಾರದ ಆದೇಶ ನಿಜವಾಗಿಯೂ ಖಂಡನೀಯ. ಕೊಡಗಿನಲ್ಲಿರುವ ಮಧ್ಯಮ ಹಾಗೂ ಕೆಳ ವರ್ಗದ ಎಷ್ಟೋ ಕುಟುಂಬಗಳು ಈಗಲೂ ಕೂಡ ಸಾಂಪ್ರದಾಯಿಕವಾಗಿ ಅಡುಗೆ ಒಲೆಗಳಲ್ಲಿ ಸೌದೆಗಳನ್ನು ಬಳಸುತ್ತಿದ್ದಾರೆ. ಮುಂದೆ ಸರ್ಕಾರ ಏನಾದರೂ ಸರ್ವೆ ನಡೆಸಿ ಮರ ಕಡೆಯಬಾರದೆಂದು ಆದೇಶಿಸಿದರೆ ಕೊಡಗಿನ ಹಲವು ಕುಟುಂಬಗಳಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸುತ್ತದೆ. ನಮ್ಮ ಸ್ವಂತ ಜಾಗದಲ್ಲಿ ಬೆಳೆಸಿದ ಮರಗಳನ್ನು ಬಳಸಬೇಕಾದರೆ ಸರ್ಕಾರದ ಅನುಮತಿ ಪಡೆಯಬೇಕಾದ ಸ್ಥಿತಿ ಬಂದರೂ ಆಶ್ಚರ್ಯ ಪಡಬೇಕಾಗಿಲ್ಲ
ಅನುಪಮಾ, ಉಪನ್ಯಾಸಕಿ, ಕಾವೇರಿ ಕಾಲೇಜು, ವಿರಾಜಪೇಟೆ

ಅದೆಷ್ಟೋ ಖಾಸಗಿ ಜಾಗದಲ್ಲಿ ಮರಗಳನ್ನು ಸಂಪನ್ನವಾಗಿ ಬೆಳೆದ ತೋಟಗಳು ಇವೆ. ತೋಟದ ಮಾಲೀಕರೇ ಜಾಗರೂಕತೆಯಿಂದ ನೋಡಿಕೊಳ್ಳುತ್ತಿದ್ದಾರೆ. ಈಗ ಏಕಾಏಕಿ ಸರ್ಕಾರ ಮರಗಳ ಲೆಕ್ಕಚಾರಕ್ಕೆ ಮುಂದಾಗಿರುವುದು ಆತಂಕದ ವಿಚಾರ. ಇದರಿಂದ ತೋಟದ ಮಾಲೀಕರಿಗೆ ಅನಾನುಕೂಲ ಆಗಲಿದೆ. ಕೂಡಲೇ ಈ ಕಾರ್ಯ ಕೈ ಬಿಟ್ಟು ಮೊದಲಿನಂತೆ ಇದ್ದರೆ ಒಳ್ಳೆಯದು.
ಎಂ. ಹೆಚ್. ಯಶೋಧ, ರೈತ ಮಹಿಳೆ, ತಿತಿಮತಿ

ನಮ್ಮ ಜಮ್ಮಾ ಭೂಮಿಯಲ್ಲಿರುವ ಮರಗಳ ಸರ್ವೇ ಮಾಡಲು ಏಕಾಏಕಿ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿದರೆ ಅದನ್ನು ಹೇಗೆ ಒಪ್ಪಿಕೊಳ್ಳಲು ಆಗುತ್ತದೆ. ಈ ಸರ್ವೇ ಮರಗಳ ರಕ್ಷಣೆ ಮಾಡಲು ಮಾಡುತ್ತಿದ್ದಾರೋ ಅಥವಾ ಕಡಿಯಲು ಮಾಡುತ್ತಾರೋ ಎನ್ನುವುದೂ ಗೊತ್ತಿಲ್ಲ. ಈ ಸರ್ವೇ ಬಗ್ಗೆ ನಮಗೆ ನೊಟೀಸ್ ಕೊಟ್ಟಿಲ್ಲ, ನಮ್ಮಲ್ಲಿ ಸಭೆಯನ್ನೂ ಮಾಡಿಲ್ಲ, ಸರ್ಕಾರದ ಆದೇಶವನ್ನೂ ತೋರಿಸಿಲ್ಲ. ಈ ವಿಷಯವನ್ನು ನ್ಯಾಯಬದ್ಧವಾಗಿ ಅರಣ್ಯ ಇಲಾಖೆ ಸಿಬ್ಬಂದಿ ಗಮನಕ್ಕೆ ತರಲಾಗಿದೆ.
ಭುವನೇಂದ್ರ, ಗ್ರಾ.ಪಂ. ಸದಸ್ಯ, ವಾಲ್ನೂರು ಗ್ರಾಮ

ಮರದ ಹಕ್ಕು ಮಾಲೀಕನಿಗೆ ಇರಬೇಕಾದುದು ಧರ್ಮ. ಈ ರೀತಿ ಮರವನ್ನು ಉಳಿಸಿ ಬೆಳೆಸಲು ಬೆಳೆಗಾರರಿಗೆ ಪ್ರೋತ್ಸಹಿಸಿದಲ್ಲಿ ಖಾಸಗಿ ಜಮೀನಿನಲ್ಲಿ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಉತ್ತಮ ಜಾತಿಯ ಮರಗಳ ಬೆಳವಣಿಗೆಗೆ ಸಹಕಾರಿಯಾಗಲಿದೆ. ಇಲ್ಲದಿದಲ್ಲಿ ಸರ್ಕಾರಿ ಅರಣ್ಯದಲ್ಲಿರುವಂತೆ ಖಾಲಿ ಖಾಲಿಯಾಗಲಿದೆ. ಈ ಬಗ್ಗೆ ಸರ್ಕಾರ ಚಿಂತನೆ ನಡಿಸಿ ಸೂಕ್ತ ನಿಯಮ ತಂದು ಬೆಳೆಗಾರರಿಗೆ ಮರದ ಹಕ್ಕು ನೀಡಿದಲ್ಲಿ ಪ್ರಕೃತಿ ಉಳಿಯಲಿದೆ. ಸರ್ಕಾರಕ್ಕೂ ಹಾಗು ಉಳಿಸಿ ಬೆಳಸಿದ ಬೆಳೆಗಾರರಿಗೂ ಪ್ರಯೋಜನವಾಗಲಿದೆ.
ಕರ್ನ್‌ಂಡ ಅರುಣ್ ಮೊಣ್ಣಪ್ಪ, ಬೆಳೆಗಾರ, ಕುಶಾಲನಗರ.

ಖಾಸಗಿ ಭೂಮಿಯಲ್ಲಿ ಬೆಳೆದಿರುವ ಸರ್ಕಾರಿ ಮರಗಳನ್ನು ದಾಖಲೆ ಮಾಡಿ ಪಟ್ಟಿ ಮಾಡಲು ಕೇಂದ್ರ ಕಚೇರಿಯಿಂದ ಜನವರಿಯಲ್ಲಿ ನಮಗೆ ಸುತ್ತೋಲೆ ಬಂದಿತ್ತು. ಇದು ಕೊಡಗಿಗೆ ಮಾತ್ರ ಸೀಮಿತ ಅಲ್ಲ. ಎಲ್ಲಾ ಜಿಲ್ಲೆಗಳಲ್ಲೂ ಈ ಆದೇಶ ಇದೆ. ಹಾಗಾಗಿ ನಮ್ಮ ಸಿಬ್ಬಂದಿ ದಾಖಲಾತಿ ಮಾಡಲು ಹೋಗಿದ್ದಾರೆ. ಇದು ಕೆಲವು ಕಡೆ ಈಗಾಗಲೇ ಮಾಡಲಾಗಿದೆ ಮತ್ತೆ ಕೆಲವು ಕಡೆ ರೈತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಖಾಸಗಿ ಜಾಗಕ್ಕೆ ತೆರಳುವ ಮೊದಲು ಸಂಬಂಧಿಸಿದ ಜಾಗದ ಮಾಲೀಕರ ಒಪ್ಪಿಗೆ ತೆಗೆದುಕೊಳ್ಳಬೇಕು. ಸರ್ಕಾರದ ಆದೇಶ ಪ್ರತಿ ತೋರಿಸುವಂತೆಯೂ ನಮ್ಮ ಸಿಬ್ಬಂದಿಗೆ ಸೂಚಿಸಲಾಗಿದೆ.
ಭಾಸ್ಕರ್, ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಡಿಕೇರಿ ವಿಭಾಗ

ಕಾಫಿ ತೋಟಗಳಿಗೆ ಅರಣ್ಯ ಇಲಾಖೆಯವರು ಸರ್ವೇಗಾಗಿ ಬಂದಿರುವುದು ಮತ್ತು ಈ ಸಂಬಂಧ ಅರಣ್ಯ ಇಲಾಖೆ ಹೊರಡಿಸಿರುವ ಸುತ್ತೋಲೆ ಗಮನಿಸಿದ್ದೇನೆ. ಈ ವಿಷಯದಲ್ಲಿ ಬೆಳೆಗಾರರು ಆತಂಕಕ್ಕೆ ಒಳಗಾಗುವುದು ಬೇಡ. ಬೆಳೆಗಾರರ ಹಕ್ಕು, ಅಧಿಕಾರಕ್ಕೆ ಧಕ್ಕೆ ಆಗದ ರೀತಿಯಲ್ಲಿ ಕ್ರಮ ಜರುಗಿಸುವ ಜವಾಬ್ದಾರಿ ನಮ್ಮದು ಮತ್ತು ಸರ್ಕಾರದ್ದು. ಅರಣ್ಯ ಇಲಾಖೆಯ ಈ ಸುತ್ತೋಲೆ ತಡೆಹಿಡಿಯಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನೀತಿ ಸಂಹಿತೆ ಮುಗಿದ ನಂತರ ಅರಣ್ಯ ಸಚಿವರ ನೇತೃತ್ವದಲ್ಲಿ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಲಾಗುವುದು. ಇದನ್ನು ತಿರುಚುವ, ರಾಜಕೀಯ ಉದ್ದೇಶಕ್ಕೆ ಬಳಕೆ ಮಾಡುವ ಕೆಲಸವೂ ಸರಿಯಲ್ಲ.

ಎ.ಎಸ್. ಪೊನ್ನಣ್ಣ, ವಿರಾಜಪೇಟೆ ಶಾಸಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net