

ಚಿಕ್ಕಮಗಳೂರು: ನೂತನ ಕೃಷಿ ಕಾನೂನುಗಳನ್ನು ರದ್ದು ಮಾಡುವಂತೆ ಹಾಗೂ ದೆಹಲಿಯ ಪ್ರತಿಭಟನಾ ನಿರತ ರೈತರ ಮೇಲೆ ದೌರ್ಜನ್ಯ ನಡೆಸದಂತೆ ಒತ್ತಾಯಿಸಿ ಶನಿವಾರ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ 50ಕ್ಕೂ ಹೆಚ್ಚು ರೈತ ಸಂಘಟನೆಗಳು, ವಿವಿಧ ಪಕ್ಷಗಳ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದರು.
ರಾಷ್ಟ್ರೀಯ ಕಿಸಾನ್ ಮೋರ್ಚಾದ ರೈತ ಸಂಘಟನೆಗಳ ಕರೆ ಹಿನ್ನೆಲೆಯಲ್ಲಿ ಹಿರೇಮಗಳೂರು ವೃತ್ತದಲ್ಲಿ ರೈತಸಂಘ, ರಾಜಕೀಯ ಪಕ್ಷಗಳು ಹಾಗೂ ವಿವಿಧ ಸಂಘಟನೆಗಳಿಂದ ಬೆಳಗ್ಗೆ 11.30ರ ಸುಮಾರಿಗೆ ಆರಂಭಗೊಂಡ ಪ್ರತಿಭಟನೆಯಲ್ಲಿ ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೃಷಿ ಹಾಗೂ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆಗೆ ಮುಂದಾಗಿರುವ ರೈತರ ಮೇಲೆ ಸರ್ಕಾರ ದಬ್ಬಾಳಿಕೆ ನಡೆಸಿ ಪ್ರತಿಭಟನೆ ಹತ್ತಿಕ್ಕುವ ಪ್ರಯತ್ನ ನಡೆಸಿದೆ ಎಂದು ಪ್ರತಿಭಟನಾಕಾರರು ದೂರಿದರು.
ಹೆದ್ದಾರಿ ಸಂಚಾರಕ್ಕೆ ಅಡ್ಡಿ:
ಹೆದ್ದಾರಿಗೆ ತಡೆಯೊಡ್ಡಿದ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿ ಬೇರೆ ಮಾರ್ಗದಿಂದ ಚಲಿಸಬೇಕಾಯಿತು. ಪ್ರತಿಭಟನೆ ನಡುವೆಯೂ ಕೆಲವು ವಾಹನಗಳು ಸಂಚರಿಸುವ ಯತ್ನ ನಡೆಸಿದ್ದು ವಾಗ್ವಾದಕ್ಕೆ ಕಾರಣವಾಯಿತು. ಸುಮಾರು ಒಂದೂವರೆ ಗಂಟೆ ಕಾಲ ಪ್ರತಿಭಟನೆ ನಡೆದ ಬಳಿಕ ಪೊಲೀಸರ ಮನವಿಗೆ ಸ್ಪಂದಿಸದೆ ರಸ್ತೆತಡೆ ಮುಂದುವರಿಸಿದ ಕಾರಣ ಪ್ರತಿಭಟನಾಕಾರರನ್ನು ಬಂಧಿಸಿ ಬಿಡುಗಡೆ ಮಾಡಲಾಯಿತು.
ಹಕ್ಕು ಕಸಿದುಕೊಳ್ಳುವ ಯತ್ನ:
ಪ್ರತಿಭಟನೆಯಲ್ಲಿ ರೈತಸಂಘದ ಜಿಲ್ಲಾಧ್ಯಕ್ಷ ಡಿ.ಆರ್.ದುಗ್ಗಪ್ಪ ಗೌಡ ಮಾತನಾಡಿ, ಭೂಸುಧಾರಣೆ ತಿದ್ದುಪಡಿ ಕಾಯ್ದೆ, ಎಪಿಎಂಸಿ ಹಾಗೂ ಅಗತ್ಯ ವಸ್ತು ಮಾರಾಟ ನಿಯಂತ್ರಣ ಕಾಯ್ದೆಗಳು ಸಂಪೂರ್ಣ ರೈತ ವಿರೋಧಿ ಧೋರಣೆಗಳನ್ನು ಒಳಗೊಂಡಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತರಲು ಮುಂದಾಗಿರುವ ಈ ಕಾಯ್ದೆಗಳಿಗೆ ವಿದ್ಯುತ್, ಗೋಹತ್ಯೆ ನಿಷೇಧ ಕಾಯ್ದೆಗಳು ಒಂದಕ್ಕೊಂದು ಪೂರಕವಾಗಿವೆ ಎಂದು ಆರೋಪಿಸಿದರು.
ಮಾತುಕತೆಯಿಂದ ಪರಿಹಾರ ದೊರಕಿಲ್ಲ:
ದೆಹಲಿಯಲ್ಲಿ ಪ್ರತಿಭಟನಾಕಾರರ ಜತೆ ಕೇಂದ್ರ ಸರ್ಕಾರ 11 ಸುತ್ತು ಮಾತುಕತೆ ನಡೆಸಿದ್ದರೂ ಸಮಸ್ಯೆಗೆ ಪರಿಹಾರ ದೊರಕಿಲ್ಲ. ಸರ್ಕಾರ ಪರಿಹಾರ ಕಂಡು ಹಿಡಿಯುವ ಪ್ರಯತ್ನ ನಡೆಸುತ್ತಿಲ್ಲ. ರೈತರ ಬೇಡಿಕೆಗಳನ್ನು ಸಂಪೂರ್ಣ ನಿರ್ಲಕ್ಷಿಸಿ ಅವರ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನ ನಡೆಸುತ್ತಿದೆ ಎಂದು ದೂರಿದರು.
ಎಪಿಎಂಸಿ ವ್ಯವಸ್ಥೆಯಿಂದ ದಲ್ಲಾಳಿಗಳನ್ನು ದೂರ ಇಡಲು ಈ ಕಾಯ್ದೆಗಳನ್ನು ಅನುಷ್ಠಾನಗೊಳಿಸುತ್ತಿರುವುದಾಗಿ ಹೇಳಿಕೊಂಡು ರೈತರನ್ನು ನಂಬಿಸಲು ಸರ್ಕಾರಗಳು ನಡೆಸಿದ ಪ್ರಯತ್ನ ವಿಫಲವಾಗಿದೆ. ಈ ನಿಟ್ಟಿನಲ್ಲಿ ಮುಂದಾದರೂ ರೈತರ ಬೇಡಿಕೆಗಳನ್ನು ಸಹಾನುಭೂತಿಯಿಂದ ಪರಿಗಣಿಸಿ ಮೂರೂ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಜೀತ ಮಾಡುವ ದುಸ್ಥಿತಿ:
ರೈತ ಮುಖಂಡ ಕೆ.ಕೆ.ಕೃಷ್ಣೇಗೌಡ ಮಾತನಾಡಿ, ನರೇಂದ್ರ ಮೋದಿ ಸರ್ಕಾರ ಪೂರ್ವತಂತ್ರ ಅನುಸರಿಸಿ ಗ್ರಾಮೀಣ ಜನರ ಬದುಕನ್ನು ನಾಶ ಮಾಡಲು ಹೊರಟಿದೆ. ಸರ್ಕಾರ ನಮ್ಮನ್ನು ಪ್ರೀತಿಯಿಂದ ಕಾಣುತ್ತದೆ ಎಂದು ಭಾವಿಸಿ ಜನತೆ ಅವರಿಗೆ ಅಧಿಕಾರ ನೀಡಿದ್ದು, ಇದೀಗ ನಿರೀಕ್ಷೆ ಹುಸಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜಮೀನನ್ನು ಬೇರೆ ಬೇರೆ ಹೆಸರಲ್ಲಿ ಕಸಿದುಕೊಂಡರೆ ಅನ್ಯ ಕಸುಬು ಗೊತ್ತಿಲ್ಲದ ರೈತರು ಬೀದಿಗೆ ಬೀಳಬೇಕಾಗುತ್ತದೆ. ಮುಂದೊಂದು ದಿನ ಜಮೀನು ಖರೀದಿಸಿರುವವರ ಮನೆಯಲ್ಲೇ ಜೀತ ಮಾಡಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ರೈತರನ್ನು ಅತಂತ್ರಗೊಳಿಸುವ ಉದ್ದೇಶ:
ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಕಾಯ್ದೆಗಳು ದೇಶದ ಬೆನ್ನೆಲುಬಾದ ರೈತರನ್ನು ಅತಂತ್ರಗೊಳಿಸುವ ಉದ್ದೇಶ ಹೊಂದಿದೆ. ಕೂಡಲೆ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ರಸೂಲ್ ಖಾನ್, ಕಾಂಗ್ರೆಸ್ ಎಸ್‍ಸಿ ವಿಭಾಗದ ಹಿರೇಮಗಳೂರು ರಾಮಚಂದ್ರ, ಜೆಡಿಎಸ್‍ನ ಕೆರೆಮಕ್ಕಿ ಲಕ್ಷ್ಮಣ್, ಬಿಎಸ್‍ಪಿಯ ಬಿ.ಪರಮೇಶ್, ಬಿ.ಕೆ.ಬಸವರಾಜ್, ವಸಂತ್, ಮಂಜುನಾಥ ಗೌಡ, ಎಂ.ಸಿ.ಬಸವರಾಜ್, ಓಂಕಾರಪ್ಪ, ಮರ್ಲೆ ಅಣ್ಣಯ್ಯ, ಕರವೇ ಪ್ರಸನ್ನ, ಉದ್ದೇಗೌಡ, ಅಣ್ಣಪ್ಪ ಇತರರು ಪ್ರತಿಭಟನೆಯಲ್ಲಿದ್ದರು.