

ಉಡುಪಿ: ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಹಿಜಾಬ್ ಕಿಚ್ಚು ಹೊತ್ತಿಸಿದ ಅದೇ ಆರು ವಿದ್ಯಾರ್ಥಿನಿಯರು ಪುನಃ ತಕರಾರು ತೆಗೆದಿದ್ದಾರೆ. ಮಾತ್ರವಲ್ಲ ಅವರೊಂದಿಗೆ ನೂರಾರು ಜನರು ಸೇರಿದ್ದು, ಶಕ್ತಿಪ್ರದರ್ಶನ ಮಾಡುವಂಥ ಪ್ರಯತ್ನವೂ ನಡೆದಿದೆ.
ಸಮವಸ್ತ್ರವನ್ನು ಪಾಲಿಸುವಂತೆ ಸರ್ಕಾರ ಹೊರಡಿಸಿರುವ ಆದೇಶವನ್ನೇ ಧಿಕ್ಕರಿಸಿ ಈ ವಿದ್ಯಾರ್ಥಿನಿಯರು ಪ್ರತಿಭಟನೆಗೆ ಇಳಿದಿದ್ದು, ಇವರೊಂದಿಗೆ ಮುಸ್ಲಿಂ ಸಮುದಾಯದ ನೂರಾರು ಮಹಿಳೆಯರು ಕೂಡ ಜೊತೆಯಾಗಿದ್ದಾರೆ.
ಉಡುಪಿಯ ಅಜ್ಜರಕಾಡು ಮೈದಾನದ ಬಳಿ ಇರುವ ಹುತಾತ್ಮ ಸ್ಮಾರಕದಲ್ಲಿ ಸಿಎಫ್ಐ ಸಂಘಟನೆಯ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯುತ್ತಿದೆ.
ಹಿಜಾಬ್ ಧರಿಸಿ ತರಗತಿಗೆ ಹಾಜರಾಗುವ ವಿಚಾರವಾಗಿ ದೇಶವ್ಯಾಪಿ ಚಳುವಳಿ ನಡೆಸುತ್ತೇವೆ. ನ್ಯಾಯಾಲಯ ನಮ್ಮ ಪರವಾಗಿ ತೀರ್ಪು ನೀಡುತ್ತದೆ ಎಂಬ ಆಶಾಭಾವನೆ ಇದೆ. ನ್ಯಾಯಾಲಯದಲ್ಲಿ ನಮ್ಮ ವಿರುದ್ಧ ಆದೇಶ ಬಂದರೂ ಹೋರಾಟ ಮುಂದುವರಿಯುತ್ತದೆ ಎಂದು ಸಿಎಫ್ಐ ಮುಖಂಡೆ ನಜ್ಮಾ ಫಾತಿಮಾ ಹೇಳಿದ್ದಾರೆ.