ಗ್ರಾಮಾಡಳಿತ ಅಧಿಕಾರಿಗಳಿಂದ ಮತ್ತೆ ಮುಷ್ಕರ...

Mushkara
Published on

ಭರವಸೆಯಂತೆ ಬೇಡಿಕೆ ಈಡೇರಿಸದ ಸರ್ಕಾರ

ಉಡುಪಿ ತಾಲೂಕು ಕಚೇರಿ ಎದುರು ಧರಣಿ

ವಿಜಯವಾಣಿ ಸುದ್ದಿಜಾಲ ಉಡುಪಿ

ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ವೃಂದದ ವತಿಯಿಂದ ಈ ಹಿಂದೆ ಕೈಗೊಂಡಿದ್ದ ಮುಷ್ಕರದ ಸಂದರ್ಭದಲ್ಲಿ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಸಂಘಟನೆ ವತಿಯಿಂದ ರಾಜ್ಯವ್ಯಾಪಿ 2ನೇ ಹಂತದ ಮುಷ್ಕರಕ್ಕೆ ಮತ್ತೆ ಚಾಲನೆ ನೀಡಿದ್ದು, ಉಡುಪಿಯ ತಾಲೂಕು ಕಚೇರಿ ಮುಂಭಾಗದಲ್ಲಿ ಗ್ರಾಮ ಆಡಳಿತಾಧಿಕರಿಗಳು ಸೋಮವಾರದಿಂದ ಅನಿರ್ದಿಷ್ಟಾವಧಿಯ ಧರಣಿ ಆರಂಭಿಸಿದರು.

ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಕಾರ್ಯಕಾರಿ ಸಮಿತಿಯು ಫೆ.2ರಂದು ಸಭೆ ನಡೆಸಿದ್ದು, ಅಲ್ಲಿನ ನಿರ್ಣಯದಂತೆ ರಾಜ್ಯವ್ಯಾಪಿ ಮುಷ್ಕರ ಅರಂಭಿಸಲಾಗಿದೆ.

ಮೊದಲ ಬಾರಿ ಮುಷ್ಕರ

ಗ್ರಾಮಾಡಳಿತ ಅಧಿಕಾರಿಗಳಿಗೆ ಸೇವೆಯಲ್ಲಿ ಅನುಕೂಲವಾಗುವಂತೆ ವಿವಿಧ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ವತಿಯಿಂದ 2024ರ ಸೆ.22ರಂದು ಚಿತ್ರದುರ್ಗದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಭಾ ಭವನದಲ್ಲಿ ಕಾರ್ಯಕಾರಿಣಿ ಸಭೆ ನಡೆಸಲಾಗಿತ್ತು. ರಾಜ್ಯದ ಎಲ್ಲ ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು. ತಾಲೂಕು ಅಧ್ಯಕ್ಷರು ಹಾಗೂ ಸರ್ವ ಸದಸ್ಯರ ಒಪ್ಪಿಗೆಯಂತೆ ಸರ್ವಾನುಮತದಿಂದ 2024ರ ಸೆ.26ರಿಂದ 2024ರ ಅ.3ರ ವರೆಗೆ ರಾಜ್ಯಾದ್ಯಂತ ಮೊದಲ ಬಾರಿ ಮುಷ್ಕರ ನಡೆಸಲಾಗಿತ್ತು.

ಭರವಸೆಯಂತೆ ಸರ್ಕಾರ ಬೇಡಿಕೆಗಳನ್ನು ಈಡೇರಿಸಿಲ್ಲ. ಅದರಿಂದಾಗಿ ಪ್ರಥಮ ಮುಷ್ಕರದ ಪೂರ್ವದ ಅವಧಿಗಿಂತಲೂ ಹೆಚ್ಚಿನ ಕಾರ್ಯದ ಒತ್ತಡ ಉಂಟಾಗಿದೆ. ನಮ್ಮ ಬೇಡಿಕೆ ಈಡೇರುವವರೆಗೂ ರಾಜ್ಯವ್ಯಾಪಿ ಅರ್ನಿದಿಷ್ಟಾವಧಿಗೆ ಮುಷ್ಕರ ಮುಂದುವರಿಸುತ್ತೇವೆ ಎಂದು ಪ್ರತಿಭಟನಾ ನಿರತ ಅಧಿಕಾರಿಗಳು ತಿಳಿಸಿದರು.

ಪ್ರತಿಭಟನೆಯಲ್ಲಿ ಉಪಾಧ್ಯಕ್ಷೆ ರೇಶ್ಮಾ, ಕಾರ್ಯದರ್ಶಿ ವಿಜಯಕುಮಾರ್​ ಡಿ.ಎಚ್​., ಆಡಳಿತಾಧಿಕಾರಿಗಳಾದ ವಾಸುದೇವ, ಗಜೇಂದ್ರ ಹಾಗೂ ಪ್ರತಿ ತಾಲೂಕಿನ ಎಲ್ಲ ಗ್ರಾಮದ ಅಧಿಕಾರಿಗಳು ಇದ್ದರು.

ಮಾತು ಮರೆತ ಸರ್ಕಾರ

ಅಧಿಕಾರಿಗಳ ಮುಷ್ಕರದಿಂದ ಜನಸೇವೆಗೆ ತೊಡಕಾಗುತ್ತಿರುವುದರಿಂದ 2024ರ ಅ.3ರಂದು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಕಂದಾಯ ಇಲಾಖೆಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ್ದರು. ಆ ಸಭೆಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಎಲ್ಲ ಬೇಡಿಕೆ ಈಡೇರಿಸುವಂತೆ ಭರವಸೆಯನ್ನೂ ಕೊಟ್ಟಿದ್ದರು. ಹೀಗಾಗಿ ಮುಷ್ಕರ ಕೈ ಬಿಡಲಾಗಿತ್ತು. ಆದರೆ, ವರ್ಷವಾಗುತ್ತ ಬಂದರೂ ಸರ್ಕಾರವು ನೌಕರರ ಬೇಡಿಕೆ ಈಡೇರಿಸುವಲ್ಲಿ ಈವರೆಗೂ ತೃಪ್ತಿಕರ ಕ್ರಮ ಕೈಗೊಂಡಿಲ್ಲ ಎಂದು ಉಡುಪಿ ತಾಲೂಕು ಅಧ್ಯಕ್ಷ ಕಾರ್ತಿಕೇಯ ಭಟ್​ ಅಸಮಾಧಾನ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net