

ಬೆಳಗಾವಿ: ಆಡಳಿತ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ದೊಡ್ಡ ಜಿಲ್ಲೆಗಳನ್ನು ಒಡೆದು ಪ್ರತ್ಯೇಕ ಜಿಲ್ಲೆಗಳನ್ನು ರಚಿಸುವುದು ಮೊದಲಿನಿಂದಲೂ ನಡೆದು ಬಂದ ಪ್ರಕ್ರಿಯೆ. ಅದೇ ರೀತಿ ರಾಜ್ಯದ ಎರಡನೆ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯನ್ನು ವಿಭಜಿಸಬೇಕು ಎಂಬ ಕೂಗು ದಶಕಗಳಿಂದಲೂ ಕೇಳಿಬರುತ್ತಿದೆ. ಗೋಕಾಕ ಹಾಗೂ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿಟ್ಟಾಗಿನಿಂದ ಜಿಲ್ಲೆ ವಿಭಜನೆಗೆ ಸಂಬಂಧಿಸಿದಂತೆ ಭಿನ್ನ, ವಿಭಿನ್ನ ಅಭಿಪ್ರಾಯಗಳು ಕೇಳಿಬರುತ್ತಿವೆ.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಸ್ವಾತಂತ್ರೃ ದಿನಾಚರಣೆ ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲೆ ವಿಭಜನೆ ಮಾತು ಆಡಿದ್ದರಿಂದ ಹಾಗೂ ಚಿಕ್ಕೋಡಿ, ಗೋಕಾಕ ಜಿಲ್ಲೆ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದೆ ಇಡಲಾಗಿದೆ ಎಂದು ಹೇಳಿದ್ದರಿಂದ ವಿಭಜನೆ ಕೂಗಿಗೆ ಮತ್ತಷ್ಟು ಬಲ ಬಂದಿದೆ. ಜತೆಗೆ ಬೈಲಹೊಂಗಲವನ್ನೂ ಜಿಲ್ಲೆ ಮಾಡಬೇಕೆಂಬ ಕೂಗು ಬಲವಾಗಿ ಕೇಳಿಬರುತ್ತಿದೆ. ಇತ್ತ ಬೆಳಗಾವಿಯಿಂದ ಅಂದಾಜು 190 ಕಿಮೀ ದೂರ ಇರುವ ಅಥಣಿಯನ್ನೇ ಜಿಲ್ಲೆಯಾಗಿಸಬೇಕು ಎಂದು ತಾಲೂಕಿನ ಜನರು ಒಕ್ಕೊರಲಿನಿಂದ ಆಗ್ರಹಿಸುತ್ತಿದ್ದಾರೆ. ಗೋಕಾಕ ಹಾಗೂ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಮತ್ತು ನೇತೃತ್ವ ವಹಿಸಿರುವ ಮಠಾಧೀಶರು ಪ್ರತ್ಯೇಕ ಜಿಲ್ಲೆ ಆಗುವುದನ್ನು ಸ್ವಾಗತಿಸಿದ್ದಾರೆ.
190 ಕಿಮೀ ದೂರವಿದೆ ಕೇಂದ್ರಸ್ಥಾನ: ಗಡಿಗ್ರಾಮಗಳಿಂದ ಬೆಳಗಾವಿ ಕೇಂದ್ರ ಸ್ಥಾನ ತಲುಪಬೇಕೆಂದರೆ 150 ರಿಂದ 190 ಕಿ.ಮೀ. ಕ್ರಮಿಸಬೇಕು. ಹೀಗಾಗಿ ಆಡಳಿತಾತ್ಮಕ ದೃಷ್ಟಿಯಿಂದ ಹೊಸದಾಗಿ ಚಿಕ್ಕೋಡಿ, ಗೋಕಾಕ ಜಿಲ್ಲೆಗಳನ್ನು ರಚಿಸಬೇಕೆನ್ನುವ ಪ್ರಸ್ತಾವನೆ ಸರ್ಕಾರದ ಮುಂದಿದೆ. ಈ ಮಧ್ಯೆ ಬೈಲಹೊಂಗಲವನ್ನೂ ಜಿಲ್ಲಾ ಕೇಂದ್ರ ಮಾಡಬೇಕು ಎಂಬ ಒತ್ತಡ ಹೆಚ್ಚಾಗಿದೆ. ಬೈಲಹೊಂಗಲ ‘ಕಂದಾಯ ಉಪವಿಭಾಗ’ ಹೊಂದಿದೆ. ಬೈಲಹೊಂಗಲ ಸೇರಿ ಗೋಕಾಕ, ಸವದತ್ತಿ, ರಾಮದುರ್ಗ ನಾಲ್ಕೂ ತಾಲೂಕು ಬ್ರಿಟಿಷ್ ಆಡಳಿತದ ಕಾಲದಿಂದಲೂ ಬೈಲಹೊಂಗಲ ಕಂದಾಯ ಉಪವಿಭಾಗ ವ್ಯಾಪ್ತಿಯಲ್ಲಿವೆ. ಹೀಗಾಗಿ ಬೈಲಹೊಂಗಲವನ್ನು ಜಿಲ್ಲೆ ಮಾಡಬೇಕು ಎಂದು ಹೋರಾಟಗಾರರು ಮತ್ತು ಆ ಭಾಗದ ಜನಪ್ರತಿನಿಧಿಗಳು ಆಗ್ರಹಿಸುತ್ತಿದ್ದಾರೆ.
ಜಿಲ್ಲಾ ವಿಭಜನೆ ಏಕೆ ಅಗತ್ಯ?: ದಕ್ಷಿಣ ಕರ್ನಾಟಕದಲ್ಲಿ ಪ್ರತಿ 150 ಕಿಮೀ ಅಂತರದಲ್ಲಿ 3-4 ಜಿಲ್ಲೆಗಳಿವೆ. ಆದರೆ, ಬೆಳಗಾವಿ ಜಿಲ್ಲಾ ಕೇಂದ್ರದಿಂದ ಗಡಿಗ್ರಾಮಗಳ ಅಂತರ 190 ಕಿ.ಮೀ.ಗೂ ಅಧಿಕವಿದೆ. ಈ ಅಂತರದ ಬಗ್ಗೆ ಸಹಜವಾಗಿ ಜಿಲ್ಲಾಡಳಿತದ ವಿರುದ್ಧ ಸ್ಥಳೀಯರಲ್ಲಿ ಅಸಮಾಧಾನವಿದೆ. ಅವರ ಎಲ್ಲ ವ್ಯವಹಾರ-ವಹಿವಾಟಿಗೆ ಪಕ್ಕದ ಜಿಲ್ಲೆ, ರಾಜ್ಯ ಅವಲಂಬಿಸುವಂತಾಗಿದೆ. ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಬೇಕಿದ್ದರೆ ಕನಿಷ್ಠ ಎರಡು ದಿನ ಮೀಸಲಿಡುವ ಪರಿಸ್ಥಿತಿ ಇದೆ.
ಹೆಸರಿಗಷ್ಟೇ ದೊಡ್ಡ ಜಿಲ್ಲೆ: 47 ಲಕ್ಷಕ್ಕೂ ಅಧಿಕ ಜನಸಂಖ್ಯೆಯೊಂದಿಗೆ 13,433 ಚದರ ಕಿಮೀ ವಿಸ್ತೀರ್ಣ ಹೊಂದಿರುವ ಬೆಳಗಾವಿ ಜಿಲ್ಲೆ ಹೆಸರಿಗೆ ಮಾತ್ರ ರಾಜ್ಯದ ದೊಡ್ಡ ಜಿಲ್ಲೆ, ಅದಕ್ಕೆ ತಕ್ಕಂತೆ ಅಭಿವೃದ್ಧಿಯಾಗಿಲ್ಲ. ಹೀಗಾಗಿ ಜಿಲ್ಲಾ ವಿಭಜನೆ ಅಗತ್ಯವಿದೆ. ಬೆಳಗಾವಿ ಗಡಿ ಭಾಗದ ಜನರು ಉದ್ಯೋಗ ಅರಸಿ ಹೊರರಾಜ್ಯಗಳಿಗೆ ಹೋಗುವುದು ಸಾಮಾನ್ಯವಾಗಿದೆ. ಮಹಾರಾಷ್ಟ್ರದ ಸಾಂಗ್ಲಿ ಮಾರುಕಟ್ಟೆಯಲ್ಲಿ ಕೆಲಸ ಮಾಡುವ ಕಾರ್ಮಿಕರು, ನೇಕಾರಿಕೆಯಲ್ಲಿರುವ ಕೆಲಸಗಾರರು, ಇಚಲಕರಂಜಿಯಲ್ಲಿ ಪುಣೆ-ಕೊಲಾಪುರದ ಯಂತ್ರೋಪಕರಣ ಘಟಕಗಳು ಮತ್ತು ಜೈಸಿಂಗಪುರದ ತಂಬಾಕು ಉತ್ಪಾದನಾ ಘಟಕಗಳಲ್ಲಿನ ಶೇ.60ಕ್ಕೂ ಹೆಚ್ಚು ಕಾರ್ಮಿಕರು ಬೆಳಗಾವಿ ಜಿಲ್ಲೆಯವರೇ ಆಗಿದ್ದಾರೆ.
ಹಲವು ವರದಿಗಳಿಂದ ಹಸಿರು ನಿಶಾನೆ: ಜಿಲ್ಲೆಯಲ್ಲಿನ ತಾಲೂಕುಗಳ ಸಂಖ್ಯೆ 10ರಿಂದ 14ಕ್ಕೇರಿದೆ. 18 ವಿಧಾನಸಭಾ ಕ್ಷೇತ್ರಗಳಿವೆ. ಇನ್ನೂ ಎರಡು ಜಿಲ್ಲೆಗಳಾಗುವಷ್ಟು ವಿಸ್ತೀರ್ಣ ಹೊಂದಿದೆ ಎಂದು ಸರ್ಕಾರಗಳೇ ನೇಮಕ ಮಾಡಿದ್ದ ವಾಸುದೇವನ್ ಆಯೋಗ, ಹುಂಡೇಕರ ಸಮಿತಿ, ಗದ್ದಿಗೌಡರ ಆಯೋಗ ಮತ್ತು ಎಂ.ಪಿಪ್ರಕಾಶ ಆಯೋಗಗಳು ವರದಿ ನೀಡಿವೆ. ಅದರ ಹೊರತಾಗಿಯೂ 1980ರ ಅವಧಿಯಲ್ಲಿ ಚಿಕ್ಕೋಡಿ ಜಿಲ್ಲಾ ರಚನೆ ಹೋರಾಟ ಆರಂಭಗೊಂಡ ನಂತರ ಗೋಕಾಕ ಕೂಡ ಜಿಲ್ಲೆಯಾಗಬೇಕು ಎನ್ನುವ ಕೂಗು ಕೇಳಲಾರಂಭಿಸಿತ್ತು. 1997ರಲ್ಲಿ ಏಕಕಾಲಕ್ಕೆ ಚಿಕ್ಕೋಡಿ-ಗೋಕಾಕ ಎರಡೂ ಪ್ರತ್ಯೇಕ ಜಿಲ್ಲೆಗಳ ರಚನೆಗೆ ಅಂದಿನ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಸರ್ಕಾರ ಅಧಿಸೂಚನೆಯನ್ನೇ ಹೊರಡಿಸಿತ್ತು.
ಭಾಷಾವಾರು ಪ್ರಾಂತ್ಯ ರಚನೆ ಬಳಿಕ ಬೆಳಗಾವಿ, ಉತ್ತರ ಕನ್ನಡ, ವಿಜಯಪುರದಿಂದ ಬೀದರವರೆಗಿನ ಗಡಿಭಾಗದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಐಎಸ್) ಪ್ರಾಬಲ್ಯ ಮೆರೆದಿತ್ತು. ಕಾರವಾರ, ಖಾನಾಪುರ, ಬೆಳಗಾವಿ, ನಿಪ್ಪಾಣಿ, ಬೀದರ, ಭಾಲ್ಕಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಎಂಇಎಸ್ ಹಠ ಹಿಡಿದಿತ್ತು. ಈ ಕಾರಣದಿಂದ 1997ರ ಅವಧಿಯಲ್ಲಿ ಬೆಳಗಾವಿ ಜಿಲ್ಲಾ ವಿಭಜನೆಗೆ ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಜಿಲ್ಲೆ ವಿಭಜಿಸುವುದರಿಂದ ಮರಾಠಿ ಪ್ರಾಬಲ್ಯ ಹೆಚ್ಚಿ ಗಡಿಯಲ್ಲಿ ಕನ್ನಡದ ಅಸ್ಮಿತೆಗೆ ಪೆಟ್ಟು ಬೀಳಬಹುದೆಂದು ಆತಂಕ ವ್ಯಕ್ತಪಡಿಸಿದ್ದವು. ಆದರೆ, ಈಗ ಮೊದಲಿನ ಪರಿಸ್ಥಿತಿ ಇಲ್ಲ. ರಾಜಕೀಯವಾಗಿ ಎಂಇಎಸ್ ಅಸ್ತಿತ್ವ ಕಳೆದುಕೊಂಡಿದೆ. ಎಂಇಎಸ್ ಶಾಸಕರ ಸಂಖ್ಯೆ ಶೂನ್ಯಕ್ಕಿಳಿದಿದ್ದರಿಂದ ಕನ್ನಡಿಗರ ಆತಂಕ ದೂರವಾಗುತ್ತಿದೆ. ಆದರೂ ಗಡಿ ವಿವಾದದ ತೀರ್ಪು ಬರುವವರೆಗೆ ಬೆಳಗಾವಿ ಅಖಂಡ ಜಿಲ್ಲೆಯಾಗಿಯೇ ಇರಬೇಕು ಎನ್ನುವುದು ಕನ್ನಡಪರ ಹೋರಾಟಗಾರರ ವಾದವಾಗಿದೆ.
ಬೈಲಹೊಂಗಲ, ಅಥಣಿ ತಾಲೂಕಿನವರೂ ಪ್ರತ್ಯೇಕ ಜಿಲ್ಲೆಗೆ ಬೇಡಿಕೆ ಇಡುತ್ತಿದ್ದಾರೆ. ತಮ್ಮ ತಾಲೂಕನ್ನು ಜಿಲ್ಲೆಯಾಗಿಸುವಂತೆ ಕೇಳುವ ಹಕ್ಕು ಎಲ್ಲರಿಗೂಇದೆ. ಆದರೆ, ಸರ್ಕಾರವೇ ಸೂಕ್ತ ತೀರ್ಮಾನ ಕೈಗೊಳ್ಳುತ್ತದೆ. ನವೆಂಬರ್ 1ರೊಳಗೆ ಬೆಳಗಾವಿ ಗ್ರಾಮೀಣ ತಾಲೂಕು ರಚನೆಯಾಗಬೇಕು ಎಂದು ಬಯಸುತ್ತೇವೆ. ಜಿಲ್ಲೆ ವಿಭಜನೆ ನಿರ್ಧಾರಕ್ಕೆ ಇನ್ನೂ ಸ್ವಲ್ಪ ಸಮಯ ಬೇಕಾಗಬಹುದು.| ಸತೀಶ ಜಾರಕಿಹೊಳಿ, ಲೋಕೋಪಯೋಗಿ ಸಚಿವ
ಸರ್ಕಾರ ಜಿಲ್ಲೆ ವಿಭಜಿಸುವುದಾದರೆ ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಬೀಡಾದ ಬೈಲಹೊಂಗಲವನ್ನು ಜಿಲ್ಲೆ ಮಾಡಲೇಬೇಕು. ಇಲ್ಲದಿದ್ದರೆ ಕ್ರಾಂತಿಕಾರಿ ನಾಡಿನ ಜನರಿಂದ ತೀವ್ರ ಹೋರಾಟ ಎದುರಿಸಬೇಕಾಗುತ್ತದೆ.| ಪ್ರಭುನೀಲಕಂಠ ಸ್ವಾಮೀಜಿ, ಮೂರುಸಾವಿರ ಶಾಖಾ ಮಠದ ಪೀಠಾಧಿಪತಿ, ಬೈಲಹೊಂಗಲ
ಅಥಣಿ ತಾಲೂಕಿನ ಕೆಲ ಗ್ರಾಮಗಳು ವಿಜಯಪುರ ಸಮೀಪ ಇವೆ. ಆಡಳಿತಾತ್ಮಕ ದೃಷ್ಟಿಯಿಂದ ಅಥಣಿಯನ್ನು ಜಿಲ್ಲೆ ಮಾಡಬೇಕು. ಜಿಲ್ಲಾ ವಿಭಜನೆ ಸೂಕ್ತವಾಗಿದ್ದು, ಅದಕ್ಕೆ ನಮ್ಮ ಬೆಂಬಲವಿದೆ.| ಪ್ರಭುಚನ್ನಬಸವ ಸ್ವಾಮೀಜಿ, ಮೋಟಗಿಮಠ ಅಥಣಿ
| ಜಗದೀಶ ಹೊಂಬಳಿ ಬೆಳಗಾವಿ